Actor Chetan Ahimsa: ರಾಜ್‌ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ನಟ ಚೇತನ್ ವಿರುದ್ಧ ಡಾ. ರಾಜ್ ಅಭಿಮಾನಿಗಳ ಆಕ್ರೋಶ, ದೂರು ದಾಖಲು
ಡಾ. ರಾಜಕುಮಾರ್ ಅವರ ಸಮಾಧಿಗಾಗಿ ಬೆಂಗಳೂರು ನಗರದ ಮಧ್ಯದಲ್ಲಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಫೇಸ್‌ಬುಕ್‌ನಲ್ಲಿ ನಟ ಚೇತನ್ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಡಾ.ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ನಟನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.
ನಟ ಚೇತನ್ ಅಹಿಂಸಾ. -
ಬೆಂಗಳೂರು: ಕನ್ನಡದ ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಸಮಾಧಿ ಕುರಿತು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ (Actor Chetan Ahimsa) ಮಾಡಿರುವ ಫೇಸ್‌ಬುಕ್ ಪೋಸ್ಟ್‌ಗೆ ರಾಜ್‌ಕುಮಾರ್ ಅವರ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಸದಾಶಿವನಗರ ಠಾಣೆ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗೆ ಡಾ. ರಾಜ್ ಕುಮಾರ್ ಸೇನೆ ವತಿಯಿಂದ ದೂರು ನೀಡಲಾಗಿದ್ದು, ನಟ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ದೂರಿನಲ್ಲಿ ಏನಿದೆ?
ಪದ್ಮಭೂಷಣ, ಕರ್ನಾಟಕ ರತ್ನ ಡಾ.ರಾಜಕುಮಾರ್ ಎಂದರೆ ಅವರೊಂದು ಬೃಹತ್ ಶಕ್ತಿ. ಡಾ.ರಾಜ್ ಎಂದರೆ ಗೋಕಾಕ್ ಚಳವಳಿ ನೇತಾರ ಮತ್ತು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಶ್ರಮಿಸಿದ ಗಣ್ಯಮಾನ್ಯರು. ಅವರು ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ಪೊಲೀಸ್ ಇಲಾಖೆಯ ಪರಿಹಾರ ನಿಧಿ, ನೆರೆ ಹಾವಳಿ, ಬರಪರಿಹಾರ ನಿಧಿಗಾಗಿ ಶ್ರಮಿಸಿದ ವ್ಯಕ್ತಿ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸೇವೆಗೆ ರಸಮಂಜರಿ ಕಾರ್ಯಕ್ರಮದ ಮುಖಾಂತರ ಸಹಾಯಧನ ಮಾಡಿದ ವ್ಯಕ್ತಿ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಸ್ಪತ್ರೆಗಳಿಗೆ ಮಿಡಿದ ಜೀವ. ಕನ್ನಡದ ಅಸ್ಮಿತೆಯಾದ ರಾಜಕುಮಾರ್ ಬಡತನದ ಬೇಗೆಯಲ್ಲಿ ವೃತ್ತಿ ರಂಗಭೂಮಿಗೆ ದುಡಿದ ವ್ಯಕ್ತಿ. ಕನ್ನಡ ಚಲನಚಿತ್ರರಂಗದಲ್ಲಿ ಪೌರಾಣಿಕ, ಐತಿಹಾಸಿಕ, ಜನಪದ, ಸಾಮಾಜಿಕ, ಸಾಂಸಾರಿಕ ಭಕ್ತಿಪ್ರದಾನ, ಭಾವಪ್ರಧಾನತೆಯ ಮೂಲಕ ಅತ್ಯುನ್ನತ ಪಾತ್ರಗಳನ್ನು ನಿರ್ವಹಿಸಿದವರು. ಇಂತಹ ಮಹಾನ್ ಕಲಾವಿದ ಮೇರುನಟನ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ದೇಶ ವಿದೇಶಗಳು ಅತ್ಯಂತ ಪ್ರೀತಿಯಿಂದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಆದರೆ ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿಗೆ ಧಕ್ಕೆ ಉಂಟುಮಾಡಿರುವ ನಟ ಚೇತನ್ ವಿರುದ್ಧ ಕೂಡಲೆ ಕ್ರಮ ಕೈಗೊಂಡು, ಆತನನ್ನು ಬಂಧಿಸಬೇಕು ಎಂದು ಡಾ.ರಾಜ್‌ಕುಮಾರ್ ಸೇನೆ ಆಗ್ರಹಿಸಿದೆ.
ಚೇತನ್‌ನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು; ಸಾರಾ ಗೋವಿಂದು ಕಿಡಿ
ನಟ ಚೇತನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಅವರು, ಚೇತನ್ ಒಬ್ಬ ಅರೆಹುಚ್ಚ, ನಿರುದ್ಯೋಗಿ, ಮುಠ್ಠಾಳ, ಈತನನ್ನು ರಾಜ್ಯದಿಂದ ಗಡಿಪಾರು ಮಾಡ್ಬೇಕು. ಅವನಿಗೆ ಚಿತ್ರರಂಗದಲ್ಲಿ ಯಾವುದೇ ಉದ್ಯೋಗವಿಲ್ಲ. ಅವನೊಬ್ಬ ನಿರುದ್ಯೋಗಿ. ಅವರ ಮಾತುಗಳಿಗೆ ನಾವು ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಗೌರಿ ಲಂಕೇಶ್ ತೀರಿಕೊಂಡಾಗ ರವೀಂದ್ರ ಕಲಾಕ್ಷೇತ್ರದಲ್ಲಿ ವಾಟಾಳ್ ನಾಗರಾಜ್ ಅವರನ್ನು ರೀ ವಾಟಾಳ್ ಎಂದು ಕರೆದಿದ್ದ. ಅವತ್ತು ಪೊಲೀಸರು ಮಧ್ಯ ಪ್ರವೇಶಿಸಿದರು. ಇವತ್ತು ಯಾವ ಪೊಲೀಸರು ಕೂಡ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಕ್ಕಿದ ಕಡೆ ಹೊಡೀತಾರೆ. ರಾಜ್‌ಕುಮಾರ್ ಬಗ್ಗೆ ಧ್ವನಿ ಎತ್ತುವುದಕ್ಕೆ ಅವನು ಯಾರು? ಅವನು ರಾಜ್‌ಕುಮಾರ್ ಧೂಳಿಗೆ ಸಮಾನ. ಈ ಹುಚ್ಚನನ್ನು ಈ ಕೂಡಲೇ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಕಿಡಿ ಕಾರಿದ್ದಾರೆ.
ನಟ ಚೇತನ್ ಏನು ಹೇಳಿದ್ದರು?
ಏಪ್ರಿಲ್ 24ರಂದು ಡಾ.ರಾಜ್‌ಕುಮಾರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರ ಸ್ಮಾರಕದ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹಾಸ್ಯನಟ ಸಾಧುಕೋಕಿಲ ಅವರು, ಇದು ಸಮಾಧಿ ಸ್ಥಳ ಅಲ್ಲ, ದೇವಸ್ಥಾನದಂತೆ ಆಗಿದೆ ಎಂದು ಹೇಳಿದ್ದರು. ಸಾಧುಕೋಕಿಲ ಅವರ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ನಟ ಚೇತನ್ ಪೋಸ್ಟ್ ಮಾಡಿದ್ದರು.
ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ನಟ ಚೇತನ್ ಹೇಳಿದ್ದರು.
ಹೇಳಿಕೆ ಸಮರ್ಥಿಸಿಕೊಂಡ ನಟ
ತಮ್ಮ ಹೇಳಿಕೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ನಟ ಚೇತನ್ ಅವರು, ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ಇರುತ್ತೆ. ಇದು ಮೆಮೋರಿಯಲ್ ಕಾಂಪ್ಲೆಕ್ಸ್. ವ್ಯಾಪಾರ ದೃಷ್ಟಿಯಿಂದ ಮಾಡಿದ್ದಾರೆ ಎಂದು ಹೇಳಿಲ್ಲ. ಒಂದು ವ್ಯಕ್ತಿಯನ್ನು ಗುರುತಿಸಲು ಸ್ಮಾರಕ ಮಾಡಲಾಗಿದೆ. ಇದು ರಾಜ್ಯದ ಜನರಿಗೆ ಇಷ್ಟವಾಗಬಹುದು. ಆದರೆ ಎರಡೂವರೆ ಎಕರೆ ಹಾಗೂ ಅದರ ಪಕ್ಕದಲ್ಲಿರುವ ಒಂದು ಮುಕ್ಕಾಲು ಎಕರೆ ಜಾಗ ಸೇರಿ ಸುಮಾರು ನಾಲ್ಕು ಎಕರೆಯನ್ನು ನೀಡಿದ್ದಾರೆ. ಇದನ್ನು ಬೇರೆ ಬೇರೆ ರೀತಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಬಹುದಾಗಿತ್ತು ಎಂಬುವುದು ನನ್ನ ಅಭಿಪ್ರಾಯ.
ಈ ಜಾಗದಲ್ಲಿ ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದು ಈಗ ನಾನು ಹೇಳುವುದಿಲ್ಲ. ಸರ್ಕಾರದ ಕ್ರಮ, ಅವರ ಅಲ್ಪಜ್ಞಾನದಿಂದ ಏನೇನು ಆಗುತ್ತೆ ಎಂಬುದನ್ನು ತಿಳಿಯಬೇಕು. ನಗರಗಳಲ್ಲಿ ಜನದಟ್ಟಣೆ ಆಗುತ್ತಿದೆ ಎಂದರೆ ಅದು ಜನರ ತಪ್ಪಲ್ಲ, ಸರ್ಕಾರದ ಯೋಜನೆಗಳ ವೈಫಲ್ಯ, ಕೆಟ್ಟ ನಾಯಕತ್ವದಿಂದ ಸಮಸ್ಯೆಗಳು ಆಗುತ್ತಿವೆ.
Kantara mimicry row: ʼಕಾಂತಾರʼ ವಿವಾದ ಕೇಸ್ ಇತ್ಯರ್ಥ! ಚಾಮುಂಡಿ ಬೆಟ್ಟಕ್ಕೆ ರಣವೀರ್ ಭೇಟಿಗೆ ಹೈಕೋರ್ಟ್ ಸೂಚನೆ
ಈ ಬಗ್ಗೆ ಒಂದು ಚರ್ಚೆ ಆಗಬೇಕು ಎಂದು ಈ ವಿಷಯವನ್ನು ಉಲ್ಲೇಖಿಸಿದ್ದೇನೆ. ಯಾರಿಗೂ ಡಾ. ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಹೋಗಬೇಡಿ ಎಂದು ಹೇಳುತ್ತಿಲ್ಲ. ಇಲ್ಲಿ ಜಾಗ ಕೊಡದಿದ್ದರೆ ವಿಷ್ಣುವರ್ಧನ್ ಸ್ಮಾರಕ ವಿವಾದ ಬರುತ್ತಿರಲಿಲ್ಲ. ಡಾ. ರಾಜ್ ಕುಮಾರ್ ಅವರ ಸಮಾಧಿಗೆ ಭೂಮಿ ಕೊಟ್ಟಿರದಿದ್ದರೆ ವಿಷ್ಣುವರ್ಧನ್ ಸಮಾಧಿ ಸಮಸ್ಯೆ ಬರುತ್ತಿರಲಿಲ್ಲ. ಹೀಗಾಗಿ ಸರ್ಕಾರದ ಭೂಮಿ ಹಾಗೂ ಹಣವನ್ನು ಸರಿಯಾಗಿ ಬಳಸುತ್ತಿದ್ದಾರಾ? ಅಥವಾ ವೋಟ್ ಬ್ಯಾಂಕ್‌ಗಾಗಿ, ವೈಯಕ್ತಿಕ ಲಾಭಕ್ಕಾಗಿ ಸರ್ಕಾರಗಳು ಈ ರೀತಿಯ ನಿರ್ಧಾರಗಳು ಮಾಡಿವೆಯಾ ಎಂಬ ಪ್ರಶ್ನೆಗಳು ಬರುತ್ತವೆ. ನಾನು ಯಾರ ಮನಸ್ಸನ್ನು ನೋಯಿಸಲು ಮಾತನಾಡುತ್ತಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.