ಬೆಂಗಳೂರು: ಬಿಗ್‌ಬಾಸ್ ಸೀಸನ್ 12ರ (Bigg Boss Kannada 12) ಸ್ಪರ್ಧಿ ಅಶ್ವಿನಿ ಗೌಡಗೆ ಸಂಕಷ್ಟ ಎದುರಾಗಿದೆ. ರಕ್ಷಿತಾ ಮೇಲೆ ಜಗಳ ಮಾಡಿದ ಬಳಿಕ ಅಶ್ವಿನಿ ಗೌಡ ಬೇರೊಬ್ಬ ಸ್ಪರ್ಧಿಯೊಟ್ಟಿಗೆ ರಕ್ಷಿತಾ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿಈ ಕುರಿತಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೆಹ್ತಾಲ್ ಎಂಬುವರು ಅಶ್ವಿನಿ ಗೌಡ (Ashwini Gowda) ಹಾಗೂ ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿ ನಾಲ್ವರ ವಿರುದ್ಧ ದೂರು ಸಲ್ಲಿಸಿದ್ದಾರೆ.
ರಕ್ಷಿತಾ ಕುರಿತಾಗಿ ‘ಶಿ ಈಸ್ ಎ ಎಸ್’ ಎಂದು ಅಶ್ವಿನಿ ಗೌಡ ಹೇಳಿದ್ದರು. ರಕ್ಷಿತಾ ಶೆಟ್ಟಿ ಉಡುಗೆ, ಆಕೆ ಇರುವ ರೀತಿ ಇದನ್ನೆಲ್ಲ ಉಲ್ಲೇಖಿಸಿ ‘ಶಿ ಈಸ್ ಎ ಎಸ್’ ಎಂದು ಅಶ್ವಿನಿ ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಸಹ ಅಶ್ವಿನಿ ಅವರ ಈ ಪದ ಬಳಕೆಯನ್ನು ಖಂಡಿಸಿದ್ದರು. ಅಶ್ವಿನಿ ಯಾವ ಅರ್ಥದಲ್ಲಿ ‘ಎಸ್’ ಎಂದಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘ಎಸ್’ ಎಂಬುದಕ್ಕೆ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡಲಾಗುತ್ತಿದೆ.
ವೀಕೆಂಡ್ ಎಪಿಸೋಡ್ನಲ್ಲಿ, ಅಶ್ವಿನಿ ಅವರು ರಕ್ಷಿತಾ ಬಗ್ಗೆ ಆಡಿದ ಮಾತುಗಳಿಗೆ ಸುದೀಪ್ ಟೀಕಿಸಿದ ಬಳಿಕ ಅಲ್ಲಿಯೇ ಅಶ್ವಿನಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದ್ದರು. ರಕ್ಷಿತಾ ಸಹ ಅಶ್ವಿನಿ ಅವರನ್ನು ಕ್ಷಮಿಸಿದರು. ಆದರೆ ಈಗ ಆ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | BBK 12: ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಮನೆಯಲ್ಲಿ ಕಳ್ಳತನ: ಅಶ್ವಿನಿ ಗೌಡ ಆರೋಪ
ಅಂದಹಾಗೆ ಅಶ್ವಿನಿ ಗೌಡ, ನಟಿಯಾಗಿರುವ ಜತೆಗೆ ಕರವೇ ಸಂಘಟನೆಯ ಸಕ್ರಿಯ ಸದಸ್ಯೆ ಆಗಿದ್ದು, ಅವರೇ ಹೇಳಿಕೊಂಡಿರುವಂತೆ ಅವರ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಈಗ ಮತ್ತೊಂದು ಹೊಸ ದೂರು ದಾಖಲಾಗಿದೆ.
ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದರೂ, ʻಬಿಗ್ ಬಾಸ್ʼ ಮನೆಯೊಳಗಿನ ಅವರ ನಡವಳಿಕೆಯು ವಿವಾದಕ್ಕೆ ಕಾರಣವಾಗಿದೆ. ರಕ್ಷಿತಾ ಶೆಟ್ಟಿ ಅವರನ್ನು ʻಕಾರ್ಟೂನ್ʼ ಎಂದು ಕರೆದಿದ್ದು, ಅವಳು ಎಸ್ ಎಂದಿದ್ದು ಸೇರಿದಂತೆ ಹಲವು ಆರೋಪಗಳಿವೆ. ಇದರಿಂದ ಅಶ್ವಿನಿ ಗೌಡ ವಿರುದ್ಧ ಪ್ರೇಕ್ಷಕರಲ್ಲಿ ಆಕ್ರೋಶ ಹೆಚ್ಚಾಗಿದೆ.