ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie-War 2 Collection: ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ-ʼವಾರ್‌ 2' ಕದನ; ಮೊದಲ ದಿನವೇ ದಾಖಲೆ ಬರೆದ ರಜನಿಕಾಂತ್‌

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಾದ ತಮಿಳಿನ ʼಕೂಲಿʼ ಮತ್ತು ಹಿಂದಿಯ 'ವಾರ್‌ 2' ಒಂದೇ ದಿನ ರಿಲೀಸ್‌ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಎರಡೂ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ʼಕೂಲಿʼ ಮೂಲಕ ರಜನಿಕಾಂತ್‌ ಹೊಸದೊಂದು ದಾಖಲೆ ಬರೆದಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ-ʼವಾರ್‌ 2' ಕದನ

Ramesh B Ramesh B Aug 15, 2025 6:16 PM

ಚೆನ್ನೈ/ಮುಂಬೈ: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಾದ ತಮಿಳಿನ ʼಕೂಲಿʼ (Coolie) ಮತ್ತು ಹಿಂದಿಯ 'ವಾರ್‌ 2' (War 2) ರಿಲೀಸ್‌ ಆಗಿದೆ. ಆರಂಭದಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರಗಳು ಒಂದೇ ದಿನ (ಅಗಸ್ಟ್‌ 14) ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ (Coolie-War 2 Collection). 'ಕೂಲಿ'ಯಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಾಯಕನಾಗಿ ನಟಿದರೆ, ಅತಿಥಿ ಪಾತ್ರದಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಇನ್ನು ಹೃತಿಕ್‌ ರೋಷನ್‌ ನಾಯಕನಾಗಿ ಅಭಿನಯಿಸಿರುವ 'ವಾರ್‌ 2' ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ಜೂ. ಎನ್‌ಟಿಆರ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಈ ಎರಡೂ ಚಿತ್ರಗಳು ದಕ್ಷಿಣ ಭಾರತೀಯ ಚಿತ್ರರಂಗ ಮತ್ತು ಬಾಲಿವುಡ್‌ ಸಂಗಮ ಎನಿಸಿಕೊಂಡಿದ್ದು, ಎರಡೂ ಕಡೆಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೀಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿವೆ. ಈ ಮಧ್ಯೆ ರಜನಿಕಾಂತ್‌ ಕಾಲಿವುಡ್‌ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಹೊಸ ಬಗೆಯ ಕ್ರೈಂ ಥ್ರಿಲ್ಲರ್‌ ಮೂಲಕ ಇತ್ತೀಚಿನ ವರ್ಷಗಳಲ್ಲಿ ಕಾಲಿವುಡ್‌ನ ಗಮನ ಸೆಳೆದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಮತ್ತು ರಜನಿಕಾಂತ್‌ ಮೊದಲ ಬಾರಿಗೆ ಒಂದಾದ ಚಿತ್ರ ʼಕೂಲಿʼ. ಇದು ಕೂಡ ಆ್ಯಕ್ಷನ್‌ ಪ್ಯಾಕ್ಡ್‌ ಜಾನರ್‌ನ ಸಿನಿಮಾವಾಗಿದ್ದು, ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ರಜನಿಕಾಂತ್‌ ಮಿಂಚಿದ್ದಾರೆ. ಅವರ ನಟನೆಗೆ, ಎಂಟ್ರಿಗೆ ಫ್ಯಾನ್ಸ್‌ ಶಿಳ್ಳೆ ಹೊಡೆಯುತ್ತಿದ್ದು, ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.



ಈ ಸುದ್ದಿಯನ್ನೂ ಓದಿ: Coolie-War 2 First Reactions: ಬಾಕ್ಸ್‌ ಆಫೀಸ್‌ನಲ್ಲಿ ರಜನಿಕಾಂತ್‌-ಹೃತಿಕ್‌, ಜೂ. ಎನ್‌ಟಿಆರ್‌ ಬಿಗ್‌ ಫೈಟ್‌; ಪ್ರೇಕ್ಷಕರ ಒಲವು ಯಾರ ಕಡೆಗೆ?

ದಾಖಲೆಯ ಕಲೆಕ್ಷನ್‌

ʼಕೂಲಿʼ ಚಿತ್ರ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 65 ಕೋಟಿ ರೂ. ಬಾಚಿಕೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಈ ಮೂಲಕ ಭಾರತದಲ್ಲಿ ಮೊದಲ ದಿನ 2ನೇ ಅತೀ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಂಡಿದೆ. ದಳಪತಿ ವಿಜಯ್‌ ನಟನೆಯ ʼಲಿಯೋʼ ಬಿಡುಗಡೆಯಾದ ದಿನ 66 ಕೋಟಿ ರೂ. ಗಳಿಸಿದ್ದು, ಮೊದಲ ಸ್ಥಾನದಲ್ಲಿದೆ. ಇನ್ನು ರಜನಿಕಾಂತ್‌ ಅವರ ʼ2.0ʼ ಸಿನಿಮಾ 60 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇನ್ನು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ ಕಲೆ ಹಾಕಿದ್ದು ಬರೋಬ್ಬರಿ 151 ಕೋಟಿ ರೂ. ಆ ಮೂಲಕ ಮೊದಲ ದಿನ ವಿಶ್ವಾದ್ಯಂತ ಅತೀ ಹೆಚ್ಚು ಗಳಿಸಿದ ತಮಿಳು ಚಿತ್ರ ಎನಿಸಿಕೊಂಡಿದೆ. ʼಕೂಲಿʼ ತಮಿಳು ಜತೆಗೆ ವಿವಿಧ ಭಾಷೆಗಳಲ್ಲಿಯೂ ತೆರೆಕಂಡಿದ್ದು, ಇದು ಗಳಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಚಿತ್ರ ನಿರ್ಮಾಣ ಸಂಸ್ಥೆ ಸನ್‌ ಪಿಕ್ಷರ್ಸ್‌ ಮೊದಲ ದಿನ ಕಲೆಕ್ಷನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಆಗಸ್ಟ್‌ 15 ಸ್ವಾತಂತ್ರ್ಯೋತ್ಸವ ಮತ್ತು ವೀಕೆಂಡ್‌ ದಿನನಗಳಲ್ಲಿ ಕಲೆಕ್ಷನ್‌ ಹೆಚ್ಚುವ ಸಾಧ್ಯತೆ ಇದೆ.

ʼವಾರ್‌ 2' ಕಲೆಕ್ಷನ್‌ ಹೇಗಿದೆ?

ಬಾಲಿವುಡ್‌ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಅಯಾನ್‌ ಮುಖರ್ಜಿ ಆ್ಯಕ್ಷನ್‌ ಕಟ್‌ ಹೇಳಿರುವ 'ವಾರ್‌ 2' ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಜೂ. ಎನ್‌ಟಿಆರ್‌ ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟಿದ್ದು, ಭರ್ಜರಿ ಸ್ವಾಗತವೇ ಸಿಕ್ಕಿದೆ. 'ವಾರ್‌ 2' ಮೊದಲ ದಿನ ಕಲೆಕ್ಷನ್‌ನಲ್ಲಿ 'ಕೂಲಿ'ಗಿಂತ ಕೊಂಚ ಹಿಂದಿದ್ದರೂ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ಇದು ವಿಶ್ವಾದ್ಯಂತ 90-95 ಕೋಟಿ ರೂ. ಗಳಿಸಿದ್ದು, ಭಾರತದಲ್ಲಿ 52 ಕೋಟಿ ರೂ. ದೋಚಿಕೊಂಡಿದೆ. ಇನ್ನೆರಡು ದಿನಗಳ ಕಲೆಕ್ಷನ್‌ ಮೂಲಕ ಗೆಲುವು ಯಾರ ಪಾಲಾಗಿದೆ ಎನ್ನುವುದು ಗೊತ್ತಾಗಲಿದೆ.