ಕನ್ನಡ ಚಿತ್ರರಂಗದೊಂದಿಗೆ ಕಳೆದ 40 ವರ್ಷಗಳಿಂದ ನಂಟು ಹೊಂದಿರುವ ಹಾಗೂ 25 ವರ್ಷಗಳ ಹಿಂದೆ ʻಸೈನಿಕʼ ಚಿತ್ರದ ಮೂಲಕ ಮನೆಮಾತಾಗಿದ್ದ ನಟ, ರಾಜಕಾರಣಿ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಏಕಕಾಲಕ್ಕೆ ʻಕರ್ಣಾಟಬಲಂ ಅಜೇಯಂʼ ಮತ್ತು ʻಸೈನಿಕ 2ʼ ಎಂಬ ಎರಡು ಬಿಗ್ ಬಜೆಟ್ ಚಿತ್ರಗಳ ಮೂಲಕ ಹೀರೋ ಆಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ವಿಶೇಷವೆಂದರೆ, ಈ ಎರಡೂ ಚಿತ್ರಗಳಿಗೆ ಸ್ವತಃ ಸಿ.ಪಿ. ಯೋಗೀಶ್ವರ್ ಅವರೇ ಕಥೆ ಬರೆದಿದ್ದು, ಸುಮಾರು 25 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಮಗನೊಂದಿಗೆ ಬಣ್ಣ ಹಚ್ಚುವ ಮೂಲಕ ಮತ್ತೆ ನಟನೆಗೂ ಮರಳಿದ್ದಾರೆ. ಧ್ಯಾನ್ ಅವರ ತಾಯಿ ಶೀಲಾ ಯೋಗೀಶ್ವರ್ ಅವರು ಈ ಎರಡೂ ಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಚಿತ್ರಗಳಿಗೆ ಕೆ.ಪಿ. ಶ್ರೀಕಾಂತ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ಧ್ಯಾನ್ ಸಿನಿಮಾಗಳಿಗೆ ಅದ್ದೂರಿ ಮುಹೂರ್ತ
ಭಾನುವಾರ (ಜುಲೈ 5) ಈ ಎರಡೂ ಚಿತ್ರಗಳ ಅದ್ದೂರಿ ಮುಹೂರ್ತ ಸಮಾರಂಭ ನೆರವೇರಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು "ಕರ್ಣಾಟಬಲಂ ಅಜೇಯಂ" ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿ ಚಾಲನೆ ನೀಡಿದರು. ಮತ್ತೊಂದೆಡೆ, ಕೇಂದ್ರ ಸಚಿವ ಶ್ರೀ ವಿ. ಸೋಮಣ್ಣ ಅವರು "ಸೈನಿಕ 2" ಚಿತ್ರಕ್ಕೆ ಕ್ಲಾಪ್ ಮಾಡಿದರು. ಡಿ.ಕೆ. ಸುರೇಶ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರಗಳ ಫಸ್ಟ್ ಲುಕ್ ಟೀಸರ್ ಕೂಡ ರಿಲೀಸ್ ಆಗಿವೆ. ಈ ಸಮಾರಂಭದಲ್ಲಿ ಚಿತ್ರರಂಗ ಹಾಗೂ ರಾಜಕೀಯ ವಲಯದ ಪ್ರಮುಖರಾದ ರಾಕ್‌ಲೈನ್ ವೆಂಕಟೇಶ್, ಸಾ.ರಾ. ಗೋವಿಂದು, ಲಹರಿ ವೇಲು, ಸಂತೋಷ್ ಆನಂದರಾಮ್ ಸೇರಿದಂತೆ ಹಲವರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕರ್ಣಾಟಬಲಂ ಅಜೇಯಂ ಚಿತ್ರಕ್ಕೆ ನಾಗಣ್ಣ ನಿರ್ದೇಶನ
ಈ ಚಿತ್ರವು 6ನೇ ಶತಮಾನದ ಇಮ್ಮಡಿ ಪುಲಕೇಶಿಯ ಆಡಳಿತದ ಬಾದಾಮಿ ವೈಭವ ಹಾಗೂ ಪ್ರಸ್ತುತ ಕಾಲಘಟ್ಟ ಸೇರಿದಂತೆ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ನಡೆಯುವ ಐತಿಹಾಸಿಕ ಕಥೆಯನ್ನು ಒಳಗೊಂಡಿದೆ. ಸಿ.ಪಿ. ಯೋಗೀಶ್ವರ್ ಅವರ ಕಥೆಗೆ ಎಂ.ಎಸ್ ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಚಿತ್ರಕಥೆ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರದ ಚಿತ್ರೀಕರಣ ಮೊದಲು ಆರಂಭವಾಗಲಿದ್ದು, ಸಂಕ್ರಾಂತಿ ಹಬ್ಬದ ವೇಳೆಗೆ ಚಿತ್ರವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಯೋಜಿಸಿದೆ.
ಸೈನಿಕ 2 ಸಿನಿಮಾಕ್ಕೆ ಪುನೀತ್ ರುದ್ರನಾಗ್ ನಿರ್ದೇಶನ
25 ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿದ್ದ 'ಸೈನಿಕ' ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ನೈಜ ಘಟನೆಗಳ ಆಧಾರಿತ ಕಥಾಹಂದರವನ್ನು ಹೊಂದಿದೆ. "ಸೈನಿಕ ಚಿತ್ರ ಬಿಡುಗಡೆಯಾದಾಗ ನನಗೆ 16 ವರ್ಷ. ಈಗ ಅದೇ ಚಿತ್ರದ ಎರಡನೇ ಭಾಗವನ್ನು ನಾನು ನಿರ್ದೇಶಿಸುತ್ತಿರುವುದು ನನಗೆ ಖುಷಿ ತಂದಿದೆ. ಇದರ ಕಥೆಯ ಜವಾಬ್ದಾರಿಯನ್ನು ಯೋಗೀಶ್ವರ್ ಅವರೇ ವಹಿಸಿಕೊಂಡಿದ್ದಾರೆ. ಇನ್ನು ನಾಯಕ ಧ್ಯಾನ್ ಅವರಲ್ಲಿ ಒಬ್ಬ ಹೀರೊಗೆ ಇರಬೇಕಾದ ಎಲ್ಲಾ ಗುಣಗಳೂ ಇವೆ. ಸದ್ಯ ಕಥೆ ಇನ್ನೂ ಪೂರ್ಣಗೊಂಡಿಲ್ಲ, ಮುಂದಿನ ವರ್ಷ ಈ ಚಿತ್ರಕ್ಕೆ ಅಧಿಕೃತ ಚಾಲನೆ ಸಿಗಲಿದೆ" ಎಂದು ನಿರ್ದೇಶಕ ಪುನೀತ್ ರುದ್ರನಾಗ್ ತಿಳಿಸಿದರು.
ಸಿ.ಪಿ. ಯೋಗೀಶ್ವರ್ ಹೇಳಿದ್ದೇನು?
"25 ವರ್ಷಗಳ ಹಿಂದೆ ನನ್ನ 'ಸೈನಿಕ' ಚಿತ್ರದ ಮುಹೂರ್ತಕ್ಕೆ ಡಿ.ಕೆ. ಶಿವಕುಮಾರ್ ಅವರು ಬಂದು ಕ್ಲಾಪ್ ಮಾಡಿದ್ದರು. ಇವತ್ತು ನನ್ನ ಮಗನ ಚೊಚ್ಚಲ ಚಿತ್ರಕ್ಕೂ ಅವರೇ ಬಂದು ಕ್ಲಾಪ್ ಮಾಡಿರುವುದು ಅತ್ಯಂತ ಸಂತೋಷ ತಂದಿದೆ. ಮಗ ಧ್ಯಾನ್ ನಟನೆಗೆ ಬೇಕಾದ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಚಿತ್ರರಂಗಕ್ಕೆ ಬರುತ್ತಿದ್ದಾನೆ" ಎಂದು ಸಿ.ಪಿ. ಯೋಗೀಶ್ವರ್ ಹೇಳಿದ್ದಾರೆ.
ಅವಕಾಶ ನೀಡಿದ ತಂದೆ-ತಾಯಿಗೆ ಧನ್ಯವಾದ
"ನಾನು ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿ ನೀಡಿದೆ. ಈ ಅದ್ಭುತ ಅವಕಾಶ ನೀಡಿದ ತಂದೆ-ತಾಯಿಗೆ ಧನ್ಯವಾದಗಳು. ನಿರ್ದೇಶಕರಾದ ನಾಗಣ್ಣ ಮತ್ತು ಪುನೀತ್ ಅವರಿಂದ ಸಾಕಷ್ಟು ಕಲಿಯುತ್ತಿದ್ದು, ಪ್ರೇಕ್ಷಕರು ನನ್ನ ಮೊದಲ ಪ್ರಯತ್ನಕ್ಕೆ ಬೆಂಬಲ ನೀಡಬೇಕಾಗಿ ವಿನಂತಿ" ಎಂದು ಧ್ಯಾನ್ ಯೋಗೀಶ್ವರ್ ಹೇಳಿದ್ದಾರೆ.