'ತಾಯವ್ವ' ಸಿನಿಮಾದಲ್ಲಿ ಗೀತಪ್ರಿಯ ಸುರೇಶ್ ಕುಮಾರ್ ಇದೀಗ 'ಅಪರಿಚಿತೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಅನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ರಿಲೀಸ್ ಮಾಡಿದ್ದಾರೆ. ಚಿತ್ರದ ಹಾಡೊಂದನ್ನು ನಟಿ ತಾರಾ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಶುಭ ಹಾರೈಸಿದ ಡಿ ವಿ ಸದಾನಂದ ಗೌಡ
"ಗೀತಪ್ರಿಯ ಅವರು ಉತ್ತಮವಾದ ಉದ್ದೇಶವಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನಾವು ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ಕೊಡಬೇಕಾದರೆ, ಅದನ್ನು ಸುಲಭವಾಗಿ ತಲುಪಿಸುವ ಮಾರ್ಗ ಸಿನಿಮಾ. ಅಂತಹ ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಗೀತಪ್ರಿಯ ಸುರೇಶ್ ಕುಮಾರ್ ಮತ್ತು ಅವರ ತಂಡಕ್ಕೆ ಶುಭವಾಗಲಿ" ಎಂದಿದ್ದಾರೆ ಸದಾನಂದ ಗೌಡ. ಜೊತೆಗೆ ಅವರ ಪತ್ನಿ ಡಾಟಿ ಸದಾನಂದ ಗೌಡ ಕೂಡ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Aparichithe Movie: 'ತಾಯವ್ವ' ನಟಿ ಗೀತಪ್ರಿಯ ಈಗ 'ಅಪರಿಚಿತೆ'- ಚಿತ್ರದ ಶೀರ್ಷಿಕೆ ಪೋಸ್ಟರ್ ರಿಲೀಸ್
ಕ್ರಿಸ್ ಮಸ್ ವೇಳೆಗೆ ಸಿನಿಮಾ ರಿಲೀಸ್
"1985ರಲ್ಲಿ ನಾನು ಹಾಗೂ ನನ್ನ ಪತಿ ಸೇರಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೆವು. ಹತ್ತು ಜನರಿಂದ ಆರಂಭವಾದ ಈ ಸಂಸ್ಥೆಯಲ್ಲಿ ಈಗ 10 ಸಾವಿರ ಜನ ಓದುತ್ತಿದ್ದಾರೆ. ಈ ಹಿಂದೆ ತಾಯವ್ವ ಎಂಬ ಚಿತ್ರದಲ್ಲಿ ನಟಿಸಿದ್ದೆ. ಈಗ "ಅಪರಿಚಿತೆ" ಎಂಬ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಪತಿ ಸುರೇಶ್ ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾನು ಜವಾಬ್ದಾರಿಯುತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಕಥೆ ಇದ್ದರೆ ಮಾತ್ರ ನಟನೆ ಮಾಡುವುದಾಗಿ ಹೇಳಿದ್ದೆ. ಇದು ಅಂಥದ್ದೇ ಕಥೆ. ರಾಮನಗರದಲ್ಲಿ ಚಿತ್ರೀಕರಣ ಮಾಡಿದ್ದು, ಕ್ರಿಸ್ ಮಸ್ ವೇಳೆಗೆ ಈ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ನಟಿ ಗೀತಪ್ರಿಯ.
ಖುಷಿಪಟ್ಟ ತಂದೆ ಮಗ
ಹಿರಿಯ ನಟ ಶ್ರೀನಾಥ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆ ಅವರ ಪುತ್ರ ರೋಹಿತ್ ಕೂಡ ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಖುಷಿಯಿಂದ ಮಾತನಾಡುವ ಶ್ರೀನಾಥ್, "ಉತ್ತಮ ಚಿತ್ರದಲ್ಲಿ ಅಭಿನಯಿಸಿದ ಖುಷಿ ನನಗೆ ಇದೆ. ನನ್ನ ಮಗ ರೋಹಿತ್ ಜೊತೆ ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದು ನನಗೆ ಖುಷಿ ನೀಡಿದೆ" ಎನ್ನುತ್ತಾರೆ. ಅತ್ತ ಪುತ್ರ ರೋಹಿತ್, "35 ವರ್ಷಗಳ ನಂತರ ನಾನು ಸಿನಿಮಾದಲ್ಲಿ ನಟಿಸಿದ್ದೇನೆ. ಅದರಲ್ಲೂ ನಮ್ಮ ತಂದೆಗೆ ಜೊತೆಗೆಯೇ ಬಣ್ಣ ಹಚ್ಚಿದ್ದು ನನಗೆ ಬಹಳ ಖುಷಿ ನೀಡಿದೆ" ಎಂದು ಹೇಳಿದ್ದಾರೆ.
ನೈಜ ಘಟನೆಯೊಂದನ್ನು ಆಧರಿಸಿ ನಿರ್ದೇಶಕ ವಿಶ್ವನಾಥ್ ಈ ಸಿನಿಮಾ ಮಾಡಿದ್ದಾರೆ. ಗೀತಪ್ರಿಯ, ಶ್ರೀನಾಥ್, ರೋಹಿತ್ ಜೊತೆಗೆ ಸಿಂಧು ಲೋಕನಾಥ್, ಆರ್ ಜೆ ನಿಖಿತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.