ನಟ ‘ಡಾಲಿ’ ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಅಭಿಮಾನಿಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದಾರೆ. ಕರ್ನಾಟಕದ ನಕ್ಷೆಯ ಮಧ್ಯಭಾಗದಲ್ಲಿ ಮಗನ ಹೆಸರು ಕೆತ್ತಲಾಗಿರುವ ಆಕರ್ಷಕ ಚಿನ್ನದ ಡಾಲರ್ ಪ್ರದರ್ಶಿಸುವ ಮೂಲಕ, ತಮ್ಮ ಪುಟ್ಟ ಕಂದನಿಗೆ ‘ಎರೆಯ’ ಎಂದು ಹೆಸರಿಟ್ಟಿರುವುದಾಗಿ ಹೆಮ್ಮೆಯಿಂದ ಘೋಷಿಸಿದ್ದಾರೆ.
ಇಮ್ಮಡಿ ಪುಲಕೇಶಿ ಮಹಾರಾಜನ ಬಾಲ್ಯದ ಹೆಸರು
ಕನ್ನಡ ನೆಲ, ಜಲ, ಭಾಷೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಧನಂಜಯ್ ಅವರು ಮಗನಿಗಿಟ್ಟಿರುವ ಈ ಹೆಸರಿನ ಹಿಂದೆ ಸುಂದರವಾದ ಕನ್ನಡ ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ. ‘ಎರೆಯ’ ಎಂಬುದು ಪುರಾತನ ಕನ್ನಡದ ಗೌರವಪೂರ್ಣ ಪದವಾಗಿದ್ದು, ಇದಕ್ಕೆ ‘ಒಡೆಯ’, ‘ಸ್ವಾಮಿ’ ಹಾಗೂ ‘ಅಧಿಪತಿ’ ಎಂಬ ಗಂಭೀರ ಅರ್ಥಗಳಿವೆ.
Daali Dhananjaya: ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್ ಬೇಸರ
ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರನ್ನು ಗೌರವದಿಂದ ಸಂಬೋಧಿಸಲು ಈ ಪದವನ್ನು ಬಳಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಕರ್ನಾಟಕದ ಗತವೈಭವದ ಪ್ರತೀಕವಾದ ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿ ಮಹಾರಾಜನ ಬಾಲ್ಯದ ಹೆಸರು ಕೂಡ ‘ಎರೆಯ’ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂತಹ ಪಾರಂಪರಿಕ ಶಕ್ತಿ ಮತ್ತು ಗಾಂಭೀರ್ಯ ತುಂಬಿದ ಹೆಸರನ್ನೇ ದಂಪತಿ ಮಗನಿಗೆ ಆಯ್ಕೆ ಮಾಡಿದ್ದಾರೆ.
ನಿಮ್ಮ ಪ್ರೀತಿ, ಆಶೀರ್ವಾದ ಸದಾ ಇರಲಿ
ತಮ್ಮ ಮಗುವನ್ನು ಯಾವಾಗ ಪರಿಚಯಿಸುತ್ತೀರಿ ಮತ್ತು ಮಗನ ಹೆಸರೇನು ಎಂದು ಅಭಿಮಾನಿಗಳು ಹಲವು ದಿನಗಳಿಂದ ಕಾತುರದಿಂದ ಕೇಳುತ್ತಿದ್ದರು. ಇದಕ್ಕೆ ಹಬ್ಬದ ದಿನವೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಉತ್ತರಿಸಿರುವ ಧನಂಜಯ್, "ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮನ್ನು ಪ್ರೀತಿಸುವ ಜೀವಗಳು ಮಗನನ್ನು ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಈ ಶುಭದಿನ ಪರಿಚಯಿಸುತ್ತಿದ್ದೇವೆ. ‘ಎರೆಯ’— ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ ಒಡೆಯ, ಸ್ವಾಮಿ, ಅಧಿಪತಿ. ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು" ಎಂದು ಹೇಳಿದ್ದಾರೆ.
ʻಎರೆಯ’- ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ
"ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ ಎರೆಯ ಎಂಬ ಹೆಸರು ಕಾಣಿಸುತ್ತದೆ. ಆ ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ, ನಮ್ಮ ಹೃದಯದ ರಾಜ… ನಮ್ಮ ‘ಎರೆಯ’. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಇರಲಿ" ಎಂದು ಡಾಲಿ ಬರೆದುಕೊಂಡಿದ್ದಾರೆ. ಈ ವಿಶಿಷ್ಟ ಮತ್ತು ಅರ್ಥಪೂರ್ಣ ಹೆಸರಿಗೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.