ನಟ ʻಡಾಲಿʼ ಧನಂಜಯ್ ಮತ್ತು ರೀಷ್ಮಾ ನಾಣಯ್ಯ ಅಭಿನಯದ 'ಅಣ್ಣ ಫ್ರಂ ಮೆಕ್ಸಿಕೋ' ಸಿನಿಮಾ ಡಿಸೆಂಬರ್ 24ರಂದು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಈಗಾಗಲೇ ಹಾಡುಗಳ ಮೂಲಕವೇ ಸಿನಿಪ್ರಿಯರ ಮನಸೆಳೆಯುತ್ತಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ 'ಪುಟ್ಟಮಲ್ಲಿ' ಮತ್ತು 'ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ' ಹಾಡುಗಳು ಬ್ಲಾಕ್ಬಸ್ಟರ್ ಹಿಟ್ ಆಗಿವೆ. ಇದೀಗ ಆ ಸಾಲಿಗೆ ಚಿತ್ರದ ಮೂರನೇ ಹಾಡು ಸೇರ್ಪಡೆಯಾಗಿದ್ದು, 'ಹೋಗೋಣು ಬಾರಾ ಮೆಕ್ಸಿಕೋ' ಎಂಬ ಕ್ಯಾಚಿ ಲಿರಿಕಲ್ ವಿಡಿಯೊ ಸಾಂಗ್ ನವೆಂಬರ್ 15ರಂದು ಬಿಡುಗಡೆಯಾಗಿದೆ.
ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು..
ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡು ತನ್ನ ವಿಶಿಷ್ಟ ಪದಬಳಕೆಯಿಂದ ಗಮನ ಸೆಳೆಯುತ್ತಿದೆ. "ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು.." ಎಂಬ ಯೋಗರಾಜ್ ಭಟ್ ಅವರ ಮಜವಾದ ಸಾಲುಗಳಿಗೆ ವಾಸುಕಿ ವೈಭವ್ ಅಷ್ಟೇ ಲವಲವಿಕೆಯ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್, ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿದ್ದು, ಸದ್ಯ ಯೂಟ್ಯೂಬ್ನಲ್ಲಿ ಈ ಹಾಡು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಶಂಕರ್ ಗುರು ನಿರ್ದೇಶನದ ಸಿನಿಮಾ
ಈ ಹಾಡಿನಲ್ಲಿ ಧನಂಜಯ್ ಮತ್ತು ರೀಷ್ಮಾ ನಾಣಯ್ಯ ಅವರ ಜೋಡಿ ಸಖತ್ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಸಖತ್ ಮಜಾ ನೀಡಿವೆ. ಲಿರಿಕಲ್ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಬಡವ ರಾಸ್ಕಲ್' ಖ್ಯಾತಿಯ ಶಂಕರ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಧನಂಜಯ್ ಜೊತೆ ಮತ್ತೊಂದು ಹಿಟ್ ನೀಡಲು ಸಜ್ಜಾಗಿದ್ದಾರೆ.
ಲೂಸ್ ಮಾದ ಯೋಗಿಗೆ ಸ್ಪೆಷಲ್ ಪಾತ್ರ
'ಅಣ್ಣ ಫ್ರಂ ಮೆಕ್ಸಿಕೋ' ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ಧನಂಜಯ್, ರೀಷ್ಮಾ ನಾಣಯ್ಯ ಅವರ ಜೊತೆಗೆ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಟ ಲೂಸ್ ಮಾದ ಯೋಗಿ ಈ ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿರುವುದು ಮತ್ತೊಂದು ವಿಶೇಷ.
ಐರಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ ಮತ್ತು ಮೃಣಾಲ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ನಿರಂಜನ್ ದೇವರಮನೆ ಸಂಕಲನ ಮಾಡಿದ್ದಾರೆ.