ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻದಾದಾಸಾಹೇಬ್ ಫಾಲ್ಕೆʼ ಪುರಸ್ಕೃತ ಅನಂತ್‌ ನಾಗ್ ನಟನೆಯಿಂದ ದೂರ ಉಳಿದಿರುವುದೇಕೆ? ಇದು ಅಭಿಮಾನಿಗಳಿಗೆ ಬೇಸರದ ವಿಷ್ಯ

Ananth Nag: ನಟ ಅನಂತ್‌ ನಾಗ್‌ ಅವರು ನಟನೆಯಿಂದ ದೂರ ಉಳಿಯುವ ನಿರ್ಧಾರವು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಿತ್ರಕಥೆಗಳ ಗುಣಮಟ್ಟದ ಕುಸಿತ, ಚಿತ್ರತಂಡಗಳಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಾಚಾರಗಳಿಂದ ಬೇಸತ್ತು ಅನಂತ್‌ ನಾಗ್‌ ಈ ಮಾತು ಹೇಳಿದ್ದಾರೆ.

ʻದಾದಾಸಾಹೇಬ್‌ ಫಾಲ್ಕೆʼ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಟ ಅನಂತ್‌ ನಾಗ್‌ ಅವರು ಬಣ್ಣದ ಪ್ರಪಂಚಕ್ಕೆ ವಿದಾಯ ಹೇಳುವ ಮಹತ್ವ ನಿರ್ಧಾರ ತಳೆದಿದ್ದಾರೆ. ಸುದೀರ್ಘ ಐದು ದಶಕಗಳ ಕಾಲ ತಮ್ಮ ವಿಶಿಷ್ಟ ಅಭಿನಯದ ಮೂಲಕ ಚಿತ್ರರಂಗವನ್ನ ಶ್ರೀಮಂತಗೊಳಿಸಿದ್ದ ಅನಂತ್‌ ನಾಗ್‌, ಇನ್ಮುಂದೆ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಈಚೆಗೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ, "ನೀವು ಇತ್ತೀಚೆಗೆ ನಟನೆಯನ್ನು ನಿಲ್ಲಿಸಿದ್ದೀರಿ. ಆರೋಗ್ಯ ಸಮಸ್ಯೆಯಿಂದ ನಟನೆ ನಿಲ್ಲಿಸಿದಿರಾ" ಎಂದು ಪ್ರಶ್ನೆ ಮಾಡಲಾಯಿತು. ಅದಕ್ಕೆ ಉತ್ತರಿಸಿದ ಅನಂತ್‌ ನಾಗ್‌, "ಸಿನಿಮಾಗಳ ಸ್ಕ್ರಿಪ್ಟ್ಸ್‌ ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ" ಎಂದು ಹೇಳಿದ್ದಾರೆ.

ಹೊಂದಾಣಿಕೆ ಇರುವುದಿಲ್ಲ

"ನಾನು ಯಾವುದೇ ಆರೋಗ್ಯ ಸಮಸ್ಯೆಯ ಕಾರಣದಿಂದ ನಾನು ನಟನೆ ನಿಲ್ಲಿಸಿಲ್ಲ. ಮುಖ್ಯ ಕಾರಣವೆಂದರೆ, ಸಿನಿಮಾಗಳ ಸ್ಕ್ರಿಪ್ಸ್‌ ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ನಟ, ನಿರ್ದೇಶಕ, ನಿರ್ಮಾಪಕರು ಒಟ್ಟಾಗಿ ಕುಳಿತು ಕಥೆ, ಚಿತ್ರಕಥೆ, ಸಂಗೀತದ ಬಗ್ಗೆ ಚರ್ಚಿಸಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಚಿತ್ರತಂಡದ ನಡುವೆ ಆ ಒಗ್ಗಟ್ಟು ಮಾಯವಾಗಿ ಅಂತರ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ದ್ವೀಪಗಳಂತಾಗಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರ ನಡುವೆಯೇ ಹೊಂದಾಣಿಕೆ ಇರುವುದಿಲ್ಲ" ಎಂದು ಅನಂತ್‌ ನಾಗ್‌ ತಿಳಿಸಿದ್ದಾರೆ.

ಆ ಐದೂ ಚಿತ್ರಗಳು ಹೀನಾಯವಾಗಿ ಸೋತವು

"ಪ್ರೇಕ್ಷಕರಿಗೆ ನಾವು ಏನು ನೀಡುತ್ತಿದ್ದೇವೆ ಎಂಬುದೇ ಮುಖ್ಯ. ಆದರೆ ಈಗ ಕಥೆಗಿಂತ ಹೆಚ್ಚಾಗಿ ಬೇರೆ ಅನಗತ್ಯ ವಿಷಯಗಳೇ ಪ್ರಾಮುಖ್ಯತೆ ಪಡೆಯುತ್ತಿವೆ. 2021-2022ರ ಅವಧಿಯಲ್ಲಿ ನಾನು ಸುಮಾರು 5 ಸಿನಿಮಾಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದೆ. ಹೊಸಬರಾಗಿದ್ದ ಅವರಿಗೆ ಎಲ್ಲ ಸಲಹೆಗಳನ್ನೂ ನೀಡಿದೆ. ನಾನು ಚಿತ್ರೀಕರಣದಲ್ಲಿದ್ದಾಗ ಎಲ್ಲವೂ ಚೆನ್ನಾಗಿಯೇ ಇರುತ್ತಿತ್ತು. ಆದರೆ ನಂತರ ತೆರೆಗೆ ಬಂದಾಗ ಆ ಐದೂ ಚಿತ್ರಗಳು ಹೀನಾಯವಾಗಿ ಸೋತವು. ಆಗ ನನಗೆ ‘ಸಾಕು, ಇನ್ನಿಲ್ಲಿ ನಟನೆ ಮಾಡುವುದು ವ್ಯರ್ಥ’ ಎನಿಸಿತು. 2022ರ ಮಾರ್ಚ್‌ನಲ್ಲಿ ನನ್ನ ಕೊನೆಯ ಚಿತ್ರ ಮುಗಿಸಿ ನಟನೆಯಿಂದ ದೂರ ಸರಿದೆ" ಎಂದು ಅನಂತ್‌ ನಾಗ್‌ ತಿಳಿಸಿದ್ದಾರೆ.

ನಾನು ಅಣ್ಣಾವ್ರನ್ನ ಕಾಪಿ ಮಾಡ್ಲಿಲ್ಲ ಅವರಿಂದ ತುಂಬಾ ಕಲಿತಿದ್ದೀನಿ



ಪ್ರತಿಯೊಬ್ಬರೂ ಹಣದ ಬೆನ್ನುಬಿದ್ದಿದ್ದಾರೆ

"ಈಗಿನವರಿಗೆ ಪ್ರೇಕ್ಷಕರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಪ್ರತಿಯೊಬ್ಬರೂ ತಮ್ಮ ಅಹಂ ಮತ್ತು ಹಣದ ಬೆನ್ನುಬಿದ್ದಿದ್ದಾರೆ. ಓಟಿಟಿ ಎಂದು ಹೇಳಿಕೊಳ್ಳುತ್ತಾರೆ, ಆದರೆ ಪ್ರೇಕ್ಷಕರು ಎಲ್ಲಿ ಹೋಗುತ್ತಿದ್ದಾರೆ, ಚಿತ್ರಗಳು ಏಕೆ ಸೋಲುತ್ತಿವೆ ಎಂದು ಯಾರೂ ಯೋಚಿಸುತ್ತಿಲ್ಲ. ಪ್ರೇಕ್ಷಕರನ್ನು ಹಿಡಿದಿಡುವಂತಹ ಕಂಟೆಂಟ್ ಸಿನಿಮಾಗಳಲ್ಲಿ ಇಲ್ಲ. ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಗೌರವವಿಲ್ಲದೆ, ಕೇವಲ ಮಾರಾಟವಾಗುತ್ತದೆ ಎಂಬ ಭ್ರಮೆಯಲ್ಲಿ ಚಿತ್ರಗಳನ್ನು ಮಾಡುತ್ತಾರೆ. 1000 ಕೋಟಿ, 2000 ಕೋಟಿ ಬಂತು ಎಂದು ಸುಳ್ಳು ಲೆಕ್ಕಗಳನ್ನು ಸೃಷ್ಟಿಸುತ್ತಾರೆ. ಹಾಗಾದರೆ ನಿರ್ಮಾಪಕರು ಏಕೆ ದಿವಾಳಿಯಾಗುತ್ತಿದ್ದಾರೆ? ನಿರ್ಮಾಪಕನಿಗೆ ಮೊದಲು ಲಾಭ ಸಿಗಬೇಕು, ಪ್ರೇಕ್ಷಕರಿಗೆ ಉತ್ತಮ ಚಿತ್ರ ತಲುಪಬೇಕು. ಆದರೆ ಆ ಗುಣಮಟ್ಟ ಇಂದು ಕಾಣೆಯಾಗಿದೆ" ಎಂದು ಅನಂತ್‌ ನಾಗ್‌ ತಿಳಿಸಿದ್ದಾರೆ.

Anant Nag: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ನಟ ಅನಂತ್ ನಾಗ್‌ಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸೇರಿ ಗಣ್ಯರಿಂದ ಅಭಿನಂದನೆ

ಅದೇ ಈ ಕಾಲದ ದೊಡ್ಡ ದುರಂತ

"ಇಂದಿನ ಪೀಳಿಗೆಯಲ್ಲಿ ನೀವು ಕೆಲಸ ಮಾಡಲೇಬೇಕು ಎಂದು ಬಯಸುವಂತಹ ನಿರ್ದೇಶಕರು ಯಾರಾದರೂ ಇದ್ದಾರೆಯೇ" ಎಂದು ಕೇಳಿದರೆ, "ಖಂಡಿತವಾಗಿ ಯಾರೂ ಇಲ್ಲ. ಅದೇ ಈ ಕಾಲದ ದೊಡ್ಡ ದುರಂತ" ಎಂದು ಅನಂತ್‌ ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ. "ಈ ಹಿಂದೆ ಜನರು ಮನರಂಜನೆ, ಜ್ಞಾನ, ಅರಿವು ಮತ್ತು ಸಂಸ್ಕೃತಿಗಾಗಿ ಚಿತ್ರಮಂದಿರಕ್ಕೆ ಮುಗಿಬಿದ್ದು ಬರುತ್ತಿದ್ದರು. ಆದರೆ ಈಗ ಅಂತಹ ಯಾವುದೇ ಮೌಲ್ಯಗಳು ಉಳಿದಿಲ್ಲ. ಸದ್ಯಕ್ಕೆ ಆ ಸಾಧ್ಯತೆಗಳು ಕಾಣುತ್ತಿಲ್ಲ. ನಾನು ನನ್ನ ವೃತ್ತಿಜೀವನದ ಅಂತ್ಯದಲ್ಲಿದ್ದೇನೆ, ಆದ್ದರಿಂದ ನಾನು ಯಾವುದರ ಬೆನ್ನಟ್ಟಿಯೂ ಹೋಗುತ್ತಿಲ್ಲ" ಎಂದು ಅನಂತ್‌ ನಾಗ್‌ ತಿಳಿಸಿದ್ದಾರೆ.