ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ಅವರ ‘ಆರ್ ಸಿ ಸ್ಟುಡಿಯೋಸ್’ ಸಂಸ್ಥೆಯಲ್ಲಿ ಮೂಡಿಬರುತ್ತಿರುವ ‘ಫಾದರ್’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ಡಾರ್ಲಿಂಗ್’ ಕೃಷ್ಣ ಹಾಗೂ ನಟ ಪ್ರಕಾಶ್ ರಾಜ್ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ‘ಗಗನದ ನೇಸರ’ ಎಂಬ ಅಪ್ಪ–ಮಗನ ಬಾಂಧವ್ಯ ಸಾರುವ ಭಾವನಾತ್ಮಕ ಹಾಡನ್ನು ಇತ್ತೀಚೆಗೆ ಅದ್ಧೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಆನಂದ್ ಪಂಡಿತ್ ಅರ್ಪಣೆಯಲ್ಲಿ ಯಮುನಾ ಚಂದ್ರು ನಿರ್ಮಿಸಿರುವ ಈ ಚಿತ್ರಕ್ಕೆ ರಾಜಾಮೋಹನ್ ಆ್ಯಕ್ಷನ್-ಕಟ್ ಹೇಳಿದ್ದು, ಈ ಚಿತ್ರ ಡಿಸೆಂಬರ್ 4 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಮಂಜುನಾಥ್ ಮಾಗೋದಿ ಅವರ ಸಾಹಿತ್ಯವಿರುವ ‘ಗಗನದ ನೇಸರ’ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಹಾಗೂ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಉದಯ್ ಕೆ. ಮೆಹ್ತಾ, ಮಾಧವ್ ಕಿರಣ್ ಹಾಗೂ ನಟ ಅನೂಪ್ ರೇವಣ್ಣ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಬೆಂಬಲ ಸೂಚಿಸಿದರು.
ಸಿನಿಮಾ ನೋಡಿ ಅಪ್ಪನಿಗೆ ಫೋನ್ ಮಾಡಿದೆ
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಆರ್. ಚಂದ್ರು, "ನಿರ್ದೇಶಕ ರಾಜಾಮೋಹನ್ ಅವರು ಒಂದು ಮನಮುಟ್ಟುವ ಕಥೆಯನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಎ.ಆರ್. ರೆಹಮಾನ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಅವರೊಂದಿಗೆ ಚಿತ್ರ ವೀಕ್ಷಿಸಿದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂತು. ತಕ್ಷಣವೇ ಅಪ್ಪನಿಗೆ ಫೋನ್ ಮಾಡಿ ಮಾತನಾಡಿದೆ. ಅಪ್ಪ–ಮಗನ ಪಾತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ಕೃಷ್ಣ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನನ್ನ ಪತ್ನಿ ಯಮುನಾ ಚಂದ್ರು ಪೂರ್ಣಪ್ರಮಾಣದ ನಿರ್ಮಾಪಕಿಯಾಗಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯು ವಿಶ್ವಾಸದಿಂದ ಚಿತ್ರದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ" ಎಂದು ಸಂತಸ ಹಂಚಿಕೊಂಡರು.
ವಂಡರ್ಲಾದಲ್ಲಿ ಹೊಸ ರೈಡ್ಗೆ ಚಾಲನೆ ನೀಡಿದ ನಟ ಡಾರ್ಲಿಂಗ್ ಕೃಷ್ಣ
ಪ್ರೇಕ್ಷಕರು ಕೊಡುವ ದುಡ್ಡಿಗೆ ಮೋಸವಾಗಲ್ಲ
ನಾಯಕ ನಟ ‘ಡಾರ್ಲಿಂಗ್’ ಕೃಷ್ಣ ಮಾತನಾಡಿ, "ನಿರ್ದೇಶಕರು ತಮಿಳಿನಲ್ಲಿ ಕಥೆ ಹೇಳಿದಾಗ ಪತ್ನಿ ಮಿಲನಾ ನಾಗರಾಜ್ ನನಗೆ ಅರ್ಥೈಸಿದರು. ನಮ್ಮ ಸುತ್ತಮುತ್ತಲೇ ನಡೆಯುವ ನೈಜ ಕಥೆಯನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಥೆ ಕೇಳುವಾಗಲೇ ನಾಯಕಿ ಪಾತ್ರಕ್ಕೆ ಅಮೃತ ಅಯ್ಯಂಗಾರ್ ಹಾಗೂ ಮತ್ತೊಂದು ಮುಖ್ಯ ಪಾತ್ರಕ್ಕೆ ನಾಗಭೂಷಣ್ ಅವರ ಮುಖ ಕಣ್ಣೆದುರು ಬಂತು; ಚಂದ್ರು ಅವರೂ ಈ ಆಯ್ಕೆಗೆ ಸಮ್ಮತಿಸಿದರು. ಪ್ರೇಕ್ಷಕರು ನೀಡುವ ಹಣಕ್ಕೆ ಕಿಂಚಿತ್ತೂ ಮೋಸವಾಗದಂತೆ ಸಿನಿಮಾ ಮೂಡಿಬಂದಿದ್ದು, ಚಿತ್ರಮಂದಿರದಿಂದ ಹೊರಬರುವಾಗ ಪ್ರತಿಯೊಬ್ಬರಿಗೂ ಒಂದು ಅತ್ಯುತ್ತಮ ಸಿನಿಮಾ ನೋಡಿದ ಆತ್ಮತೃಪ್ತಿ ಸಿಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
ನಾಯಕಿ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ತಮ್ಮದು ಈವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರವೆಂದು ತಿಳಿಸಿದರೆ, ನಟ ನಾಗಭೂಷಣ್ ಇದು ಕೃಷ್ಣ ಅವರ ಜೊತೆಗಿನ ತಮ್ಮ ಮೂರನೇ ಸಿನಿಮಾ ಎಂದು ಹರ್ಷ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್, ಛಾಯಾಗ್ರಾಹಕ ಸುಜ್ಞಾನ್ ಹಾಗೂ ಸಂಕಲನಕಾರ ರಘುನಾಥ್ ಚಿತ್ರದ ತಾಂತ್ರಿಕ ಶ್ರೀಮಂತಿಕೆ ಮತ್ತು ಚಿತ್ರೀಕರಣದ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ತಾರಾಗಣ ಹಾಗೂ ಭಾವನಾತ್ಮಕ ಕಥಾಹಂದರದಿಂದಾಗಿ ‘ಫಾದರ್’ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.