ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀ ಕನ್ನಡದಲ್ಲಿ ʻಡಾರ್ಲಿಂಗ್‌ʼ ಕೃಷ್ಣ ನಟನೆಯ ʻಲವ್ ಮಾಕ್‌ಟೇಲ್ 3ʼ ಪ್ರೀಮಿಯರ್; ಇದು ತಂದೆ - ಮಗಳ ಭಾವನಾತ್ಮಕ ಕಥೆ ಇರುವ ಸಿನಿಮಾ

'ಲವ್ ಮಾಕ್‌ಟೇಲ್ 3' ಸಿನಿಮಾವು ಇದೇ ಜೂನ್ 21ರ ಭಾನುವಾರ ಸಂಜೆ 4.30ಕ್ಕೆ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಥಮ ಬಾರಿಗೆ ಪ್ರಸಾರವಾಗಲಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ದತ್ತು ಮಗಳು ನಿಧಿಯನ್ನು ಉಳಿಸಿಕೊಳ್ಳಲು ತಂದೆ ಆದಿ ಕಾನೂನು ಹಾಗೂ ಸಮಾಜದ ವಿರುದ್ಧ ನಡೆಸುವ ಭಾವನಾತ್ಮಕ ಹೋರಾಟದ ಕಥೆಯಿದೆ.

ಕನ್ನಡ ಕಿರುತೆರೆಯ ನಂ.1 ಮನರಂಜನಾ ವಾಹಿನಿ 'ಜೀ ಕನ್ನಡ', ಸದಾ ವಿಭಿನ್ನ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಇದೀಗ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸಲು ವಾಹಿನಿಯು ಸಜ್ಜಾಗಿದ್ದು, ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ 'ಲವ್ ಮಾಕ್‌ಟೇಲ್' ಸರಣಿಯ ಬಹುನಿರೀಕ್ಷಿತ ಕೊನೆಯ ಭಾಗವಾದ 'ಲವ್ ಮಾಕ್‌ಟೇಲ್ 3' ಚಿತ್ರವನ್ನು ಪ್ರಸಾರ ಮಾಡಲಿದೆ.

ಈ ಮೊದಲ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ದಿನಗಣನೆ ಆರಂಭವಾಗಿದೆ. ಜೂನ್ 21ರ ಭಾನುವಾರ ಸಂಜೆ 4.30 ಕ್ಕೆ ಈ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Yash: 'ಟಾಕ್ಸಿಕ್' ಜಾಗಕ್ಕೆ 'ಲವ್ ಮಾಕ್‌ಟೇಲ್ 3' ಎಂಟ್ರಿ; ಯುಗಾದಿ ರಜೆಗಳ ಮೇಲೆ ಕಣ್ಣಿಟ್ಟ ʻಡಾರ್ಲಿಂಗ್ʼ ಕೃಷ್ಣ!

ಕೌಟುಂಬಿಕ ಮೌಲ್ಯಗಳ ಸುಂದರ ದೃಶ್ಯಕಾವ್ಯ

'ಲವ್ ಮಾಕ್‌ಟೇಲ್ 2' ಯಶಸ್ಸಿನ ಹಲವು ವರ್ಷಗಳ ಬಳಿಕ ತೆರೆಕಂಡ 'ಲವ್ ಮಾಕ್‌ಟೇಲ್ 3', ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದೆ. ತಂದೆಯ ನಿಷ್ಕಲ್ಮಶ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಹಾಗೂ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜೊತೆಯಾಗಿ ಸಾಗುವ ಕೌಟುಂಬಿಕ ಮೌಲ್ಯಗಳನ್ನು ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಹೆಣೆಯಲಾಗಿದೆ. ಈ ಸಿನಿಮಾವು ಪ್ರೀತಿ, ನೋವು, ಬದ್ಧತೆ ಹಾಗೂ ನಂಬಿಕೆಯ ಸುತ್ತ ಸಾಗುತ್ತದೆ. ತಂದೆ ಮತ್ತು ಮಗಳ ಭಾವನಾತ್ಮಕ ಕಥೆ ಈ ಸಿನಿಮಾದಲ್ಲಿದೆ.

ಪ್ರಮುಖ ಪಾತ್ರದಲ್ಲಿ ದಿಲೀಪ್‌ ರಾಜ್

ಡಾರ್ಲಿಂಗ್ ಕೃಷ್ಣ ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಸ್ವತಃ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಇವರೊಂದಿಗೆ ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

BRAT OTT: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ! ಸ್ಟ್ರೀಮಿಂಗ್‌ ಎಲ್ಲಿ?

ಭಾವನಾತ್ಮಕ ತಿರುವುಗಳ ಕುತೂಹಲಕಾರಿ ಕಥೆ

ಚಿತ್ರದ ಕಥಾಹಂದರವು ನಾಯಕ ಆದಿತ್ಯ ಅಲಿಯಾಸ್ ಆದಿ (ಡಾರ್ಲಿಂಗ್ ಕೃಷ್ಣ) ಹಾಗೂ ಆತನ ದತ್ತು ಮಗಳು ನಿಧಿಯ ಸುತ್ತ ಸುತ್ತುತ್ತದೆ. ನಿಧಿಯನ್ನು ತನ್ನ ಸ್ವಂತ ಮಗಳಿಗಿಂತಲೂ ಹೆಚ್ಚಾಗಿ ಜವಾಬ್ದಾರಿಯಿಂದ ಸಾಕಿ ಬೆಳೆಸುವ ಆದಿಯ ಬದುಕು ಸಣ್ಣ ಸಣ್ಣ ಸಂತೋಷಗಳೊಂದಿಗೆ ಸುಂದರವಾಗಿ ಸಾಗುತ್ತಿರುತ್ತದೆ. ಇವರಿಗೆ ಕೇರ್ ಟೇಕರ್ ಜಗ್ಗಾ ಮಮ್ಮಿ ಮತ್ತು ಆತ್ಮೀಯ ಸ್ನೇಹಿತ ವಿಜಯ್ ಅವರ ಬೆಂಬಲ ಸದಾ ಇರುತ್ತದೆ.‌

ಆದರೆ, ಕಥೆಗೆ ಅಸಲಿ ಟ್ವಿಸ್ಟ್ ಸಿಗುವುದೇ ಡಾ. ಶಾಂತಾ ಅವರ ಎಂಟ್ರಿಯಿಂದ! ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಡಾ. ಶಾಂತಾ ಹಕ್ಕು ಮಂಡಿಸಿದಾಗ, ಆದಿ ಮತ್ತು ನಿಧಿಯ ಶಾಂತಿಯುತ ಜೀವನದಲ್ಲಿ ಬಿರುಗಾಳಿ ಏಳುತ್ತದೆ. ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ ಮತ್ತು ಭಾವನಾತ್ಮಕ ಸಂಘರ್ಷ ಇಡೀ ಕಥೆಯನ್ನು ರೋಮಾಂಚನಕಾರಿ ಘಟ್ಟಕ್ಕೆ ಕೊಂಡೊಯ್ಯುತ್ತದೆ.

ಜೂನ್‌ 21ರಂದು ಪ್ರಸಾರ

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳನ್ನು ಉಳಿಸಿಕೊಳ್ಳಲು, ತನ್ನ ಸುಂದರ ಕುಟುಂಬವನ್ನು ರಕ್ಷಿಸಿಕೊಳ್ಳಲು ಆದಿ ಸಮಾಜ ಹಾಗೂ ಕಾನೂನಿನ ವಿರುದ್ಧ ನಡೆಸುವ ಮನಕಲಕುವ ಹೋರಾಟವೇ ಈ ಚಿತ್ರದ ಜೀವಾಳ. ಆದಿ ತನ್ನ ಮಗಳಿಂದ ದೂರವಾಗುವ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾನೆ? ಆತನ ಹೋರಾಟ ಸುಖಾಂತ್ಯ ಕಾಣುತ್ತಾ? ಎಂಬ ಕುತೂಹಲಕ್ಕೆ ಜೂನ್ 21ರ ಭಾನುವಾರ ತೆರೆ ಬೀಳಲಿದೆ. 'ಲವ್ ಮಾಕ್‌ಟೇಲ್ 3' ಚಿತ್ರವನ್ನು ಜೀ ಕನ್ನಡ ವಾಹಿನಿಯಲ್ಲಿ ಜೂನ್ 21ರ ಭಾನುವಾರ ಸಂಜೆ 4.30 ಕ್ಕೆ ವೀಕ್ಷಿಸಲು ಮರೆಯದಿರಿ.