ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

25 ದಿನ ಪೂರೈಸಿದ ʻಡಾರ್ಲಿಂಗ್‌ʼ ಕೃಷ್ಣ ನಟನೆಯ ʻಲವ್‌ ಮಾಕ್ಟೇಲ್‌ 3ʼ; ಇದು 2026ರ ಕನ್ನಡದ ಮೊದಲ ಹಿಟ್‌ ಚಿತ್ರ

Love Mocktail 3 Success Story: ಲವ್‌ ಮಾಕ್ಟೇಲ್‌ 3 ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಮಾರ್ಚ್ 19ರಂದು ತೆರೆಕಂಡಿದ್ದ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಈ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ್ದು, 2026ರ ವರ್ಷದ ಮೊದಲ ಅಧಿಕೃತ ಸೂಪರ್ ಹಿಟ್ ಎನಿಸಿಕೊಂಡಿದೆ.

ಸ್ಯಾಂಡಲ್‌ವುಡ್‌ನ ಯಶಸ್ವಿ ಸೀಕ್ವೇಲ್‌ಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ಹ್ಯಾಟ್ರಿಕ್ ಸಾಧನೆ ಮಾಡಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಬಹುನಿರೀಕ್ಷಿತ ‘ಲವ್ ಮಾಕ್ಟೇಲ್ 3’ ಚಿತ್ರವು ಈಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸುವ ಮೂಲಕ 2026ರ ವರ್ಷದ ಮೊದಲ ‘ಬ್ಲಾಕ್ ಬಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ, ವಾರಾಂತ್ಯದ ದಿನಗಳಲ್ಲಿ ಮಾತ್ರವಲ್ಲದೆ ವಾರದ ದಿನಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮೆರೆದಿದೆ.

ಮಾರ್ಚ್‌ 19ರಂದು ತೆರೆಕಂಡಿದ್ದ ಲವ್‌ ಮಾಕ್ಟೇಲ್‌ 3

ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟ ಕಾರಣ, ಮಾರ್ಚ್ 19ರ ಲಾಂಗ್‌ ವೀಕೆಂಡ್‌ ರಿಲೀಸ್‌ ಅವಕಾಶ ಡಾರ್ಲಿಂಗ್‌ ಕೃಷ್ಣ ಪಾಲಿಗೆ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಮೂರು ವಾರಕ್ಕೆ ಹಿಂದೆಕ್ಕೆ ಪ್ರೀ-ಪೋನ್‌ ಮಾಡಿಕೊಂಡದ್ದ ‘ಲವ್ ಮಾಕ್ಟೇಲ್ 3’ ಚಿತ್ರತಂಡ ಮಾ.19ರಂದು ಸಿನಿಮಾವನ್ನು ರಿಲೀಸ್ ಮಾಡಿತ್ತು.‌ ಕೆವಿಎನ್‌ ಪ್ರೊಡಕ್ಷನ್ಸ್‌ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಅಚ್ಚುಕಟ್ಟಾಗಿ ರಾಜ್ಯಾದ್ಯಂತ ಸಿನಿಮಾವನ್ನು ರಿಲೀಸ್‌ ಮಾಡಿಕೊಟ್ಟಿತ್ತು. ಉತ್ತಮವಾಗಿ ಚಿತ್ರಮಂದಿರಗಳು ಕೂಡ ಸಿಕ್ಕಿದ್ದವು. ಇದು ಸಿನಿಮಾದ ಗೆಲುವಿಗೆ ದೊಡ್ಡ ಬಲ ನೀಡಿತು.

Love Mocktail 3 Review: ತಂದೆ - ಮಗಳ ಬಾಂಧವ್ಯದ ಕಥೆಯಲ್ಲಿ ಭಾವನಾತ್ಮಕ ಏರಿಳಿತಗಳು

ಖುಷಿ ಹಂಚಿಕೊಂಡ ಡಾರ್ಲಿಂಗ್‌ ಕೃಷ್ಣ

ಈ ಹ್ಯಾಟ್ರಿಕ್ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಡಾರ್ಲಿಂಗ್ ಕೃಷ್ಣ, "ಲವ್ ಮಾಕ್ಟೇಲ್ ಸರಣಿಯನ್ನು ಪ್ರೇಕ್ಷಕರು ತಮ್ಮ ಸ್ವಂತ ಸಿನಿಮಾದಂತೆ ಅಪ್ಪಿಕೊಂಡಿದ್ದಾರೆ. ಈ 25 ದಿನಗಳ ಸಂಭ್ರಮ ನಮ್ಮ ಇಡೀ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲ" ಎಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ‘ಕ್ರಿಸ್‌ಮಿ’ ಬ್ಯಾನರ್ ಅಡಿಯಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

Love Mocktail 3: ಇದು ಸಿನಿಮಾದ ಅಂತಿಮ ಕತೆ; ‘ಲವ್ ಮಾಕ್ಟೆಲ್ 3’ ಟ್ರೈಲರ್ ಔಟ್‌

ಗಮನಸೆಳೆದ ಬಾಲ ನಟಿ

ಬಾಲ ನಟಿ ಸಂವೃತಾ ಅಭಿನಯ ಈ ಸಿನಿಮಾದ ಗೆಲುವಿಗೆ ಪ್ರಮುಖ ಕಾರಣ ಎನ್ನಬಹುದು. ಉಳಿದಂತೆ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೇಖಾ ಕೂಡ್ಲಿಗಿ, ಶ್ವೇತಾ ಪ್ರಸಾದ್, ನಯಾರಾ ದೀಪಕ್‌, ಜಗದೀಶ್‌, ಅಭಿಲಾಷ್‌ ಮತ್ತು ರಚೆಲ್ ಡೇವಿಡ್ ಮುಂತಾದ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಶ್ರೀ ಕ್ರೇಜಿ ಮೈಂಡ್ಸ್ ಅವರ ಛಾಯಾಗ್ರಹಣ ಕಣ್ಣಿಗೆ ಹಬ್ಬ ನೀಡಿದರೆ, ನಕುಲ್ ಅಭಯಂಕರ್ ಅವರ ಸಂಗೀತದ ಮೋಡಿ ಚಿತ್ರಮಂದಿರದ ಹೊರಗೂ ಗುನುಗುವಂತೆ ಮಾಡಿತ್ತು.

ಸ್ಯಾಂಡಲ್‌ವುಡ್‌ನ 2026ರ ಮೊದಲ ಸೂಪರ್‌ ಹಿಟ್‌ ಸಿನಿಮಾವಾಗಿ ಹೊರಹೊಮ್ಮಿರುವ ʻಲವ್‌ ಮಾಕ್ಟೇಲ್‌ 3ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಂದಾಜು 16-18 ಕೋಟಿ ರೂ. ಗಳಿಕೆ ಮಾಡಿರುವ ಮಾಹಿತಿ ಇದೆ.