ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟಾರ್ ಸುವರ್ಣದಲ್ಲಿ ಭಿನ್ನ ಮನಸುಗಳ ಪ್ರೇಮಕಥೆಯುಳ್ಳ ಹೊಸ ಧಾರಾವಾಹಿ ‘ಓ ಮನಸೇ’; ಪ್ರಮುಖ ಪಾತ್ರದಲ್ಲಿ ʻಬಿಗ್ ಬಾಸ್ʼ ಖ್ಯಾತಿಯ ಅಶ್ವಿನಿ ಗೌಡ

O Manase serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ನವೆಂಬರ್ 10ರಿಂದ ʻಓ ಮನಸೇʼ ಧಾರಾವಾಹಿ ಆರಂಭವಾಗುತ್ತಿದೆ. ಮಧ್ಯಮ ವರ್ಗದ ರಾಗಾಳ ಶಿಕ್ಷಣದ ಕನಸಿಗೆ ತಂದೆಯೇ ವಿರೋಧ ವ್ಯಕ್ತಪಡಿಸಿದರೆ, ಭಾವನೆಗಳೇ ಇಲ್ಲದ ಶ್ರೀಮಂತ ರಿಷಿ ಪ್ರೀತಿಯನ್ನೇ ನಂಬದ ಯುವಕ. ಇವರಿಬ್ಬರ ಕಥೆಯೇ ʻಓ ಮನಸೇʼ ಧಾರಾವಾಹಿ.

ಕಿರುತೆರೆ ವೀಕ್ಷಕರಿಗೆ ನಿರಂತರವಾಗಿ ವಿಭಿನ್ನ ಹಾಗೂ ವಿನೂತನ ಕಥಾಹಂದರದ ಧಾರಾವಾಹಿಗಳನ್ನು ಉಣಬಡಿಸುತ್ತಾ ಬಂದಿರುವ ವಾಹಿನಿ ‘ಸ್ಟಾರ್ ಸುವರ್ಣ’, ಇದೀಗ ಮತ್ತೊಂದು ಸುಂದರ ಮತ್ತು ಭಾವುಕ ಪ್ರೇಮಕಥೆಯನ್ನು ಕನ್ನಡಿಗರ ಮುಂದಿಡಲು ಸಜ್ಜಾಗಿದೆ. ಎರಡು ಭಿನ್ನ ಮನಸ್ಸುಗಳು ಹಾಗೂ ವಿರುದ್ಧ ದಿಕ್ಕಿನ ನಂಬಿಕೆಗಳ ಸುತ್ತ ಹೆಣೆದಿರುವ ‘ಓ ಮನಸೇ’ ಎಂಬ ಹೊಸ ಧಾರಾವಾಹಿಯು ಇದೇ ನ.10ರಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

ಮಗಳ ಆಸೆಗೆ ತಂದೆಯೇ ಅಡ್ಡಗಾಲು

ಮೈಸೂರಿನ ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಹೆಣ್ಣುಮಗಳು ರಾಗಾ ಈ ಕಥೆಯ ನಾಯಕಿ. ಪುಸ್ತಕ ಪ್ರೇಮಿಯಾಗಿರುವ ರಾಗಾಗೆ ವಿದ್ಯಾಭ್ಯಾಸವೇ ಉಸಿರು. ಶಿಕ್ಷಣವೆಂದರೆ ಬರೀ ಒಂದು ಪದವಿ ಪಡೆಯುವುದಷ್ಟೇ ಅಲ್ಲ, ಅದು ಹೆಣ್ಣಿನ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸದ ದಾರಿ ಎಂದು ದೃಢವಾಗಿ ನಂಬಿರುವ ಆಕೆಗೆ ಪ್ರೊಫೆಸರ್ ಕಲ್ಯಾಣಿ ಅವರೇ ಬದುಕಿನ ಅತಿದೊಡ್ಡ ಸ್ಫೂರ್ತಿ. ಆದರೆ, ಮುಗಿಲೆತ್ತರದ ಕನಸುಗಳನ್ನು ಹೊತ್ತು ಸ್ವಾವಲಂಬಿಯಾಗಲು ಹಾತೊರೆಯುವ ರಾಗಾಳ ಆಸೆಗೆ ಸ್ವಂತ ತಂದೆಯೇ ಅಡ್ಡಗೋಡೆಯಾಗಿ ನಿಲ್ಲುತ್ತಾರೆ.

ರಾಗಾ - ರಿಷಿ ಒಂದಾಗ್ತಾರಾ?

ಇನ್ನೊಂದೆಡೆ, ಶ್ರೀಮಂತಿಕೆಯ ಮಡಿಲಲ್ಲಿ ಬೆಳೆದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಾಗಿರುವ ರಿಷಿ ಕಥೆಯ ನಾಯಕ. ಭಾವನೆಗಳನ್ನೆಲ್ಲ ಕಟ್ಟುನಿಟ್ಟಾಗಿ ಹತ್ತಿಕ್ಕಿಕೊಂಡು ಬದುಕುವ ರಿಷಿಗೆ ಪ್ರೀತಿ, ವಿಶ್ವಾಸ ಎಂಬ ಪದಗಳ ಮೇಲೆಯೇ ನಂಬಿಕೆಯಿಲ್ಲ. ಸ್ವಂತ ತಾಯಿ ಕಲ್ಯಾಣಿಯ ಮಮತೆಯಿಂದ ವಂಚಿತನಾಗಿ ಬೆಳೆದಿರುವ ಈತನಿಗೆ, ತಾಯಿಯೆಂದರೆ ವಿಪರೀತ ಅಸಹನೆ ಮತ್ತು ಸಿಟ್ಟು. ಎರಡು ಧ್ರುವಗಳಂತಿರುವ ರಾಗಾ ಮತ್ತು ರಿಷಿಯ ಬದುಕು ಮುಖಾಮುಖಿಯಾದಾಗ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ತಂದೆಯ ವಿರೋಧವನ್ನು ಮೀರಿ ರಾಗಾ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾಳಾ? ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ಕರಗುವುದೇ? ತದ್ವಿರುದ್ಧ ಸ್ವಭಾವದ ರಾಗಾ ಮತ್ತು ರಿಷಿ ಒಂದಾಗಲು ಸಾಧ್ಯವೇ? ಎನ್ನುವುದೇ ಈ ಧಾರಾವಾಹಿಯ ಪ್ರಮುಖ ತಿರುಳು.

ಹೀರೋ ಆಗಿ ದರ್ಶಕ್ ಗೌಡ

ಧಾರಾವಾಹಿಯಲ್ಲಿ ಪ್ರೇಕ್ಷಕರನ್ನು ಸೆಳೆಯುವಂತಹ ಅದ್ದೂರಿ ತಾರಾಬಳಗವಿದೆ. ನಾಯಕ ರಿಷಿ ಪಾತ್ರಕ್ಕೆ ನಟ ದರ್ಶಕ್ ಗೌಡ ಬಣ್ಣ ಹಚ್ಚಿದ್ದರೆ, ನಾಯಕಿ ರಾಗಾ ಪಾತ್ರದಲ್ಲಿ ಮಧುಮಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ ಹಾಗೂ ನಿಸರ್ಗ ಅಣ್ಣಪ್ಪ ಸೇರಿದಂತೆ ಕಿರುತೆರೆಯ ಹಲವು ಹಿರಿಯ ಮತ್ತು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಗಣಪತಿ ಭಟ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್‌ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ

ಪ್ರಮುಖ ಪಾತ್ರದಲ್ಲಿ ಅಶ್ವಿನಿ ಗೌಡ

ಈ ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಅಶ್ವಿನಿ ಗೌಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ತಮ್ಮ ಖಡಕ್ ಮಾತು ಮತ್ತು ಆಕರ್ಷಕ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅಶ್ವಿನಿ ಗೌಡ ಅವರ ಉಪಸ್ಥಿತಿ ಧಾರಾವಾಹಿಯ ತೂಕವನ್ನು ಹೆಚ್ಚಿಸಿದೆ.

ಧಾರಾವಾಹಿಯ ಸಮಯ ಬದಲು

ಎರಡು ಭಿನ್ನ ವ್ಯಕ್ತಿತ್ವಗಳ ಅಸಾಧ್ಯ ಪ್ರೇಮಕಥೆಯ ಹೂರಣ ಹೊತ್ತು ಬರುತ್ತಿರುವ ‘ಓ ಮನಸೇ’ ಧಾರಾವಾಹಿಯು ನವೆಂಬರ್ 10ರಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿ ಹಾಗೂ ಜಿಯೋ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ. ಇದರ ಜತೆಗೆ, ವಾಹಿನಿಯ ಮತ್ತೊಂದು ಜನಪ್ರಿಯ ಧಾರಾವಾಹಿ ‘ವಸುದೇವ ಕುಟುಂಬ’ದ ಪ್ರಸಾರದ ಸಮಯದಲ್ಲಿ ಬದಲಾವಣೆಯಾಗಿದ್ದು, ನವೆಂಬರ್ 10ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.