ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ-14 ಆರೋಪಿ ಹಾಗೂ ನಟ ದರ್ಶನ್ ಅವರ ಆಪ್ತ ಸ್ನೇಹಿತ ಪ್ರದೋಷ್ ಎಸ್. ರಾವ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ನಗರದ 59ನೇ ಸಿಸಿಎಚ್ ನ್ಯಾಯಾಲಯ ಪುರಸ್ಕರಿಸಿದೆ. ಈ ಮೂಲಕ ಕೊಲೆ ಪ್ರಕರಣದ ಕಾನೂನು ಹೋರಾಟದಲ್ಲಿ ದರ್ಶನ್‌ಗೆ ಆಪ್ತನಿಂದಲೇ ಭಾರೀ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಎ -14 ಆರೋಪಿಗೆ ಕೋರ್ಟ್ ವಿಧಿಸಿದ ಷರತ್ತುಗಳೇನು?
ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ನ್ಯಾಯಾಲಯ, ಕಠಿಣ ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ಸಂಪೂರ್ಣ ವಿಚಾರಣಾ ಪ್ರಕ್ರಿಯೆ ಮುಗಿಯುವವರೆಗೂ ಪ್ರದೋಷ್ ಜೈಲಿನಲ್ಲೇ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗುತ್ತದೆ. ಜೊತೆಗೆ, ಘಟನೆಗೆ ಸಂಬಂಧಿಸಿದಂತೆ ತನ್ನ ಗೊತ್ತಿರುವ ಎಲ್ಲಾ ಸತ್ಯಾಂಶಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಕೋರ್ಟ್ ಮುಂದೆ ಬಹಿರಂಗಪಡಿಸಬೇಕು. ಒಂದು ವೇಳೆ ವಿಚಾರಣೆ ವೇಳೆ ಸತ್ಯ ಮುಚ್ಚಿಟ್ಟರೆ ಅಥವಾ ಷರತ್ತುಗಳನ್ನು ಉಲ್ಲಂಘಿಸಿದರೆ, ಸುಳ್ಳು ಸಾಕ್ಷಿ ನುಡಿದ ಆರೋಪದಡಿ ಪ್ರಕರಣ ದಾಖಲಿಸಿ, ಆತನನ್ನು ಪುನಃ ಆರೋಪಿಯನ್ನಾಗಿಸಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್‌ಗೆ ರವಾನಿಸಲಾಗಿದೆ.
ಕೋರ್ಟ್‌ಗೆ ಈ ಮೊದಲು ಪ್ರದೋಷ್ ಹೇಳಿದ್ದೇನು?
ತಾನು ಮಾಫಿ ಸಾಕ್ಷಿಯಾಗಲು ಸಿದ್ಧವೆಂದು ನ್ಯಾಯಾಲಯಕ್ಕೆ ತಿಳಿಸಿದ್ದ ಪ್ರದೋಷ್, ಘಟನೆ ನಡೆದ ದಿನದ ಆಘಾತಕಾರಿ ವಿವರಗಳನ್ನು ಹಂಚಿಕೊಂಡಿದ್ದ. "ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡದಂತೆ ದರ್ಶನ್ ಅವರನ್ನು ತಡೆಯಲು ನಾನು ಪದೇಪದೇ ಪ್ರಯತ್ನಿಸಿದೆ. ಆದರೂ ದರ್ಶನ್ ಹಲ್ಲೆ ನಿಲ್ಲಿಸಲಿಲ್ಲ. ಅಲ್ಲದೆ, ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಯುವಂತೆ ಪವಿತ್ರಾ ಗೌಡ ಅವರಿಗೆ ದರ್ಶನ್ ಸೂಚಿಸಿದ್ದರು.
ಹಲ್ಲೆಯ ತೀವ್ರತೆಗೆ ರೇಣುಕಾಸ್ವಾಮಿ ಮೃತಪಟ್ಟಾಗ, ಮೃತದೇಹವನ್ನು ಸಾಗಿಸಲು ಮತ್ತು ಘಟನೆಯನ್ನು ಯಾರಿಗೂ ಹೇಳದಂತೆ ದರ್ಶನ್ ನನ್ನ ಮೇಲೆ ತೀವ್ರ ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೆ, ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು" ಎಂದು ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದರು.
ಪ್ರದೋಷ್ ಮೇಲಿರುವ ಆರೋಪಗಳೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ವಿರುದ್ಧ ಸಾಕ್ಷ್ಯ ನಾಶ ಹಾಗೂ ಕೊಲೆಯಲ್ಲಿ ಭಾಗಿಯಾದ ಗಂಭೀರ ಆರೋಪಗಳಿವೆ. ಹಲ್ಲೆ ನಡೆಯುವ ಮುನ್ನ ಪವಿತ್ರಾ ಗೌಡ ಅವರನ್ನು ಶೆಡ್‌ಗೆ ಕರೆತಂದಿದ್ದಲ್ಲದೆ, ದರ್ಶನ್ ಅವರಿಂದ 30 ಲಕ್ಷ ರೂಪಾಯಿ ಹಣ ಪಡೆದು, ಕೊಲೆ ಹೊಣೆಯನ್ನು ಹೊತ್ತುಕೊಳ್ಳಲು ನಕಲಿ ಆರೋಪಿಗಳನ್ನು ಸೃಷ್ಟಿಸಿ ಪೊಲೀಸರಿಗೆ ಶರಣಾಗುವಂತೆ ಮಾಡಿದ ಆರೋಪವೂ ಈತನ ಮೇಲಿದೆ. ಇದೀಗ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಕಾನೂನು ಸಂಕೋಲೆ ಮತ್ತಷ್ಟು ಬಿಗಿಯಾಗುವಂತೆ ಮಾಡಿದೆ.