ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೇಣುಕಾಸ್ವಾಮಿ ಕೊಲೆ ಪ್ರಕರಣ: 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಅರ್ಜಿ, ಕೋರ್ಟ್‌ನಲ್ಲಿ ಭಾರಿ ವಾದ-ಪ್ರತಿವಾದ!

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ‘ಮಾಫಿ ಸಾಕ್ಷಿ’ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಸಿಆರ್‌ಪಿಸಿ ಸೆಕ್ಷನ್ 307 ಅಡಿಯಲ್ಲಿ ಸಮರ್ಥಿಸಿಕೊಂಡಿದ್ದು, ಇತರ ಆರೋಪಿಗಳ ವಾದ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ.

ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, 14ನೇ ಆರೋಪಿ (A14) ಪ್ರದೋಷ್ ‘ಮಾಫಿ ಸಾಕ್ಷಿ’ (Approver) ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಕುರಿತು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಮತ್ತು ದರ್ಶನ್‌ ಪರ ವಕೀಲರ ನಡುವೆ ಭಾರಿ ವಾದ-ಪ್ರತಿವಾದಗಳು ನಡೆದಿವೆ.

SPP ಪ್ರಸನ್ನ ಕುಮಾರ್ ವಾದವೇನು?

ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಮಾಫಿ ಸಾಕ್ಷಿ ಪ್ರಕ್ರಿಯೆಯ ಕುರಿತು ಕಾನೂನಾತ್ಮಕ ಅಂಶಗಳನ್ನು ಕೋರ್ಟ್ ಮುಂಭಾಗ ಮಂಡಿಸಿದರು. "CRPC ಸೆಕ್ಷನ್ 307 ಅಡಿಯಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿದ್ದಾರೆ. ಸೆಕ್ಷನ್ 306 ಕೂಡ ಮಾಫಿ ಸಾಕ್ಷಿಯ ಬಗ್ಗೆ ವಿವರಣೆ ನೀಡುತ್ತದೆ. ಅಪ್ರೂವರ್ ಆಗಬಯಸುವ ಆರೋಪಿಯು ಸೆಕ್ಷನ್ 306ರ ಷರತ್ತುಗಳು ಮತ್ತು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕೆಂದು ನಿಯಮ ಹೇಳುತ್ತದೆ. ಮಾಫಿ ಸಾಕ್ಷಿಯಾಗುವ ವ್ಯಕ್ತಿಯು ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಮುಕ್ತವಾಗಿ ಬಹಿರಂಗಪಡಿಸಬೇಕಾಗುತ್ತದೆ" ಎಂದು ಹೇಳಿರುವ ಅವರು ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ.

Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ಆರೋಪಿಗಳ ವಾದ ಕೇಳುವ ಅಗತ್ಯವಿಲ್ಲ

"ಈ ಹಂತದಲ್ಲಿ ಇತರ ಸಹ-ಆರೋಪಿಗಳ ವಾದವನ್ನು ಕೇಳುವ ಅಗತ್ಯವಿರುವುದಿಲ್ಲ. ಕೋರ್ಟ್ ಕ್ಷಮಾದಾನಕ್ಕೆ ಒಪ್ಪಿಗೆ ನೀಡಿದ ನಂತರವಷ್ಟೇ ಇತರ ಆರೋಪಿಗಳಿಗೆ ಇದನ್ನು ಪ್ರಶ್ನಿಸುವ ಹಕ್ಕು ಲಭ್ಯವಾಗುತ್ತದೆ. ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಆರೋಪಿ ಕ್ಷಮಾದಾನ ಕೋರಿದಾಗ ಕೋರ್ಟ್ ಪ್ರಾಸಿಕ್ಯೂಷನ್ ಸಲಹೆ ಪಡೆಯಬೇಕು, ಅದರಂತೆ ನಿನ್ನೆ ಕೋರ್ಟ್ ಪ್ರತಿಕ್ರಿಯೆ ಕೇಳಿದೆ. ಜಡ್ಜ್ ಕ್ಷಮಾದಾನ ನೀಡುವಾಗ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ ಮತ್ತು ಈ ತೀರ್ಮಾನವು ಕೇಸ್‌ನ ನ್ಯಾಯಬದ್ಧ ತೀರ್ಮಾನಕ್ಕೆ ಸಹಕಾರಿಯಾಗಿರಬೇಕು" ಎಂದು SPP ಪ್ರಸನ್ನ ಕುಮಾರ್ ವಾದ ಮಾಡಿದ್ದಾರೆ.

ದರ್ಶನ್ ಪರ ವಕೀಲರ ಆಕ್ಷೇಪ

SPP ಪ್ರಸನ್ನ ಕುಮಾರ್ ಅವರ ವಾದಕ್ಕೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಈ ಕೇಸ್‌ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಆರೋಪಿಗೆ ಇರುತ್ತದೆ. ಆದರೆ ಪ್ರದೋಷ್ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲ. ನಿನ್ನೆ (ಆ.5) ಕೇಸ್ ಮುಂದೂಡಿಕೆಯಾದ ಮೇಲೆ ಈ ಅರ್ಜಿ ಹಾಕಲಾಗಿದೆ. ಆರೋಪಿಗೆ ತನ್ನ ವಾದವನ್ನು ಮಂಡಿಸಲು ಮೂಲಭೂತ ಹಕ್ಕಿದೆ. ಯಾರೋ ಒಬ್ಬರು ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣವೇ ಅವರಿಗೆ ಕ್ಷಮಾದಾನ ನೀಡಲು ಸಾಧ್ಯವಿಲ್ಲ" ಎಂದು ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು.

ಎ2 ಆರೋಪಿ ಪ್ರದೋಷ್ ಮೇಲಿರುವ ಆರೋಪಗಳು

  • ಚಾರ್ಜ್‌ಶೀಟ್ ಪ್ರಕಾರ ಪ್ರದೋಷ್ ಈ ಕೊಲೆ ಮತ್ತು ಸಂಚಿನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು, ಅವರ ವಿರುದ್ಧ ಕೆಳಗಿನ ಗಂಭೀರ ಆರೋಪಗಳಿವೆ.
  • ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪ.
  • ಪ್ರಕರಣ ಮುಚ್ಚಿಹಾಕಲು ನಟ ದರ್ಶನ್ ಕಡೆಯಿಂದ ₹30 ಲಕ್ಷ ಹಣ ಸ್ವೀಕರಿಸಿದ್ದು.
  • ನಿಜವಾದ ಆರೋಪಿಗಳನ್ನು ಬಚಾವ್ ಮಾಡಿ, ಬೇರೆ ವ್ಯಕ್ತಿಗಳನ್ನು ಪೊಲೀಸರ ಮುಂದೆ ಶರಣಾಗಿಸಲು ಯೋಜನೆ ರೂಪಿಸಿದ ಸೂತ್ರಧಾರ.
  • ಕೊಲೆ ನಡೆದ ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡರನ್ನು ಕರೆತಂದಿದ್ದು ಮತ್ತು ಕೊಲೆಯ ಸಂಪೂರ್ಣ ಮಾಹಿತಿ ಹೊಂದಿದ್ದು.
  • ರೇಣುಕಾಸ್ವಾಮಿ ಸಾವನ್ನಪ್ಪಿದ ವಿಷಯವನ್ನು ದರ್ಶನ್‌ಗೆ ತಿಳಿಸಿದ್ದು.
  • ಕೊಲೆ ಮತ್ತು ಸಾಕ್ಷ್ಯ ನಾಶದ ಜಂಟಿ ಹೊಣೆಗಾರಿಕೆಯಡಿ ಪ್ರದೋಷ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.