ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದರ್ಶನ್‌ ಕೇಸ್‌ ಅಪ್ಡೇಟ್ಸ್:‌ ಮಾಫಿ ಸಾಕ್ಷಿಯಾಗಲು ಬಂದ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದೇನು? ದಿಢೀರ್‌ ಅಂತ ವಿಜಯಲಕ್ಷ್ಮೀ - ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದೇಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸಿಸಿಹೆಚ್ ಕೋರ್ಟ್ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಸುಜಾತಾ ಅವರು ಪರಿಣಾಮಗಳ ಕುರಿತು ಪ್ರದೋಷ್‌ಗೆ ಎಚ್ಚರಿಕೆ ನೀಡಿದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಮಾಫಿ ಸಾಕ್ಷಿಯಾಗಲು ಕೋರಿ ಎ-14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಮತ್ತೊಂದೆಡೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು ಅವರ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ಹಾಗೂ ನಟ ಧನ್ವೀರ್ ಭೇಟಿಯಾಗಿದ್ದಾರೆ.

ಪ್ರದೋಷ್‌ಗೆ ಜಡ್ಜ್‌ ಸುಜಾತಾ ಕೇಳಿದ ಪ್ರಶ್ನೆಗಳೇನು?

ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆ ವೇಳೆ 59ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆರೋಪಿ ಪ್ರದೋಷ್‌ನನ್ನು ನೇರವಾಗಿ ಪ್ರಶ್ನಿಸಿದರು. "ನೀವು ಸ್ವಯಂಪ್ರೇರಿತರಾಗಿ ಈ ಅರ್ಜಿ ಸಲ್ಲಿಸಿದ್ದೀರಾ ಮತ್ತು ಓದಿದ ಬಳಿಕವೇ ಸಹಿ ಮಾಡಿದ್ದೀರಾ?" ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರದೋಷ್, "ಹೌದು, ಸ್ವಯಂಪ್ರೇರಿತವಾಗಿಯೇ ಸಹಿ ಮಾಡಿದ್ದೇನೆ" ಎಂದರು.

Actor Darshan: ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

"ಒಂದು ವೇಳೆ ನಿಮ್ಮ ಮಾಫಿ ಸಾಕ್ಷಿಯನ್ನು ಕೋರ್ಟ್ ಒಪ್ಪದಿದ್ದರೆ ನೀವು ಜೈಲಿನಲ್ಲೇ ಇರಬೇಕಾಗುತ್ತದೆ. ಹಾಗೆಯೇ ವಿಚಾರಣೆ ವೇಳೆ ಸಂಪೂರ್ಣ ಸತ್ಯ ಹೇಳದಿದ್ದರೆ ನಿಮ್ಮನ್ನೇ ಆರೋಪಿಯನ್ನಾಗಿ ಮುಂದುವರಿಸಲಾಗುತ್ತದೆ, ಇದರ ಪರಿಣಾಮದ ಬಗ್ಗೆ ಮಾಹಿತಿ ಇದೆಯಾ?" ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರದೋಷ್, "ಈ ಎಲ್ಲಾ ಕಾನೂನು ಪರಿಣಾಮಗಳ ಬಗ್ಗೆ ನನ್ನ ವಕೀಲರು ಸಂಪೂರ್ಣ ಮಾಹಿತಿ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ

ಪ್ರದೋಷ್ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಮಾಫಿ ಸಾಕ್ಷಿ ಅರ್ಜಿಯ ಹಿಂದಿನ ದುರುದ್ದೇಶವನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ವಾದಿಸಿದರು. "ಕೇವಲ ಜೈಲಿನಿಂದ ಬಿಡುಗಡೆಯಾಗುವ ಆಸೆಯಿಂದ ಈ ಅರ್ಜಿ ಸಲ್ಲಿಸಲಾಗಿದೆ. ಪ್ರದೋಷ್ ಮೇಲೆ ಯಾವುದಾದರೂ ಒತ್ತಡವಿದೆಯೇ ಅಥವಾ ಯಾರಾದರೂ ಆಮಿಷ-ಭರವಸೆ ನೀಡಿದ್ದಾರೆಯೇ ಎಂಬುದರ ಕುರಿತು ಕೋರ್ಟ್ ಸ್ವತಂತ್ರ ವಿಚಾರಣೆ ನಡೆಸಿ ತೀರ್ಮಾನಿಸಬೇಕು" ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.

ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ಧನ್ವೀರ್ ಭೇಟಿ

ಇತ್ತೀಚೆಗಷ್ಟೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದರ ನಡುವೆಯೇ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಭೇಟಿಗೆ ಇಬ್ಬರೂ ಒಟ್ಟಿಗೆ ಆಗಮಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಯಿತು. ದರ್ಶನ್ ತಾಯಿ ಮೀನಾ ಅವರ ಸಮ್ಮುಖದಲ್ಲೇ ಜೈಲಿನಲ್ಲಿ ಸಂಧಾನ ಮಾತುಕತೆ ನಡೆದಿದೆ ಎನ್ನಲಾಗಿದೆ.

Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು

ಭೇಟಿಯ ಬಳಿಕ ಮಾತನಾಡಿದ ನಟ ಧನ್ವೀರ್, "ದರ್ಶನ್ ಆರಾಮಾಗಿದ್ದಾರೆ. ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ. ಮನಸ್ತಾಪ ಇದ್ದಿದ್ದರೆ ನಾನು ಭೇಟಿಯಾಗಲು ಬರುತ್ತಿರಲಿಲ್ಲ. ಸುಖಾಸುಮ್ಮನೆ ವದಂತಿ ಹಬ್ಬಿಸುವವರ ಮಾತನ್ನು ನಂಬಬೇಡಿ" ಎಂದು ಸ್ಪಷ್ಟನೆ ನೀಡಿದರು. ದರ್ಶನ್‌ ಭೇಟಿಯ ನಂತರ ಧನ್ವೀರ್ ಮೊದಲು ಹೊರಟರೆ, ವಿಜಯಲಕ್ಷ್ಮಿ ಹಾಗೂ ತಾಯಿ ಮೀನಾ ಪ್ರತ್ಯೇಕ ಕಾರುಗಳಲ್ಲಿ ಜೈಲಿನಿಂದ ವಾಪಸಾದರು.