ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ‘ಬಾಸ್’ ಸಿನಿಮಾದ ಬಿಡುಗಡೆಗೆ ಎದುರಾಗಿದ್ದ ಕಾನೂನು ಅಡಚಣೆಯೊಂದು ಸದ್ಯ ನಿವಾರಣೆಯಾಗಿದೆ. ಸಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ, ವಿ. ಲವ ನಿರ್ದೇಶನದ ಈ ಚಿತ್ರಕ್ಕೆ ನಗರದ ಸಿವಿಲ್ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಇತ್ತೀಚೆಗೆ ಅಧಿಕೃತವಾಗಿ ತೆರವುಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಚಿತ್ರತಂಡ ನಿರಾಳವಾಗಿದ್ದು, ಸಿನಿಮಾ ಬಿಡುಗಡೆಯ ಹಾದಿ ಸುಗಮಗೊಂಡಿದೆ.
ಏನಿದು ವಿವಾದ?
ಕೆಲವು ದಿನಗಳ ಹಿಂದೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಎಂಬ ಶೀರ್ಷಿಕೆ ಹಾಗೂ ಚಿತ್ರದ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಕೋರಿ ಅವರು ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಇದರಿಂದ ಆ ಸಿನಿಮಾದ ಭವಿಷ್ಯದ ಕುರಿತು ಚಿತ್ರತಂಡಕ್ಕೆ ಆತಂಕ ಮೂಡಿತ್ತು.
Kannada New Movie: ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ತನುಷ್ ಶಿವಣ್ಣ ಅಭಿನಯದ ʼಬಾಸ್ʼ ಚಿತ್ರದ ಮುಹೂರ್ತ
ಮಹತ್ವದ ತೀರ್ಪು ನೀಡಿದ ನ್ಯಾಯಾಲಯ
ಇತ್ತೀಚೆಗೆ ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆಯಲ್ಲಿ ಪ್ರಕರಣದ ವಾದ-ಪ್ರತಿವಾದಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಚಿತ್ರತಂಡದ ಪರವಾಗಿ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದರು. ಚಿತ್ರದ ಶೀರ್ಷಿಕೆ ಹಕ್ಕುಗಳು ಮತ್ತು ಕಾನೂನಾತ್ಮಕ ಅಂಶಗಳನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾದರು. ಅವರ ಬಲವಾದ ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯವು, ಈ ಹಿಂದೆ ವಿಧಿಸಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ರದ್ದುಗೊಳಿಸಿ, ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ʻಬಾಸ್ʼ ಟೀಮ್ ಫುಲ್ ಖುಷ್
ನ್ಯಾಯಾಲಯದ ಈ ಮಹತ್ವದ ತೀರ್ಪಿನ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ತನುಷ್ ಶಿವಣ್ಣ ಮತ್ತು ನಿರ್ದೇಶಕ ವಿ. ಲವ ಅವರು ತಮ್ಮ ಸಂತಸವನ್ನು ಹಂಚಿಕೊಂಡರು. "ಕಾನೂನಿನ ಮೇಲೆ ನಮಗೆ ಸಂಪೂರ್ಣ ಭರವಸೆಯಿತ್ತು. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನ್ಯಾಯ ಸಿಕ್ಕಿದೆ. ಇಷ್ಟು ದಿನ ಚಿತ್ರದ ಬಿಡುಗಡೆಗೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಶೀಘ್ರದಲ್ಲೇ ‘ಬಾಸ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆಸುತ್ತಿದ್ದೇವೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಪ್ರಕಟಿಸಿದರು.