ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ: ಯೋಗಾಭ್ಯಾಸ ನಡೆಸಿದ ನಟ ದರ್ಶನ್ ಆಂಡ್‌ ಗ್ಯಾಂಗ್, ಫೋಟೋ ವೈರಲ್!

ಅಂತರರಾಷ್ಟ್ರೀಯ ಯೋಗ ದಿನದಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಯೋಗಾಭ್ಯಾಸ ನಡೆಸಿದ್ದಾರೆ. ಆರಂಭದಲ್ಲಿ ಬೆನ್ನುನೋವಿನ ನೆಪ ಹೇಳಿ ದರ್ಶನ್ ನಿರಾಕರಿಸಿದರೂ, ಡಿಜಿ ಅಲೋಕ್ ಕುಮಾರ್ ಅವರ ಸಲಹೆ ಮೇರೆಗೆ ಯೋಗಾಭ್ಯಾಸ ಮಾಡಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿ ಸದ್ಯ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ಈ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.

ಯೋಗ ಮಾಡಲು ನಿರಾಕರಿಸಿದ್ದ ದರ್ಶನ್!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಮೈದಾನದಲ್ಲಿ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಆದರೆ, ತಮಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಇದೆ ಎಂದು ಹೇಳಿದ್ದ ನಟ ದರ್ಶನ್, ಆರಂಭದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು ಎನ್ನಲಾಗಿದೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಈ ವಿಷಯ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಕಚೇರಿಗೆ ಕರೆಸಿಕೊಂಡು ಮಾತನಾಡಿದ್ದಾರೆ. "ಬೆನ್ನು ನೋವಿನ ಸಮಸ್ಯೆ ಇದ್ದರೆ ಯೋಗ ಮಾಡುವುದರಿಂದಲೇ ಅದು ಗುಣವಾಗುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು" ಎಂದು ಮನವರಿಕೆ ಮಾಡಿಕೊಟ್ಟು, ಯೋಗ ಮಾಡುವಂತೆ ದರ್ಶನ್ ಅವರಿಗೆ ಸಲಹೆ ನೀಡಿದರು.

ಬ್ಯಾರಕ್ ಕಾರಿಡಾರ್‌ನಲ್ಲೇ ಯೋಗಾಭ್ಯಾಸ!

ಡಿಜಿ ಅಲೋಕ್ ಕುಮಾರ್ ಅವರ ಸಲಹೆಯ ಬೆನ್ನಲ್ಲೇ ನಟ ದರ್ಶನ್ ಯೋಗ ಮಾಡಲು ಒಪ್ಪಿಕೊಂಡರು. ಆದರೆ, ಜೈಲಿನ ಮುಖ್ಯ ಮೈದಾನದ ಸಾಮೂಹಿಕ ಯೋಗಕ್ಕೆ ಬಾರದೇ, ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲಿಯೇ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಸೆಷನ್‌ನಲ್ಲಿ ದರ್ಶನ್ ಅವರು ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಭಂಗಿಗಳನ್ನು ಮಾಡಿದರು. ಯೋಗ ಮುಗಿದ ಬಳಿಕ ದರ್ಶನ್ ಮತ್ತು ಅವರ ಇಡೀ ಗ್ಯಾಂಗ್ ಮರಳಿ ತಮ್ಮ ಬ್ಯಾರಕ್‌ಗಳಿಗೆ ತೆರಳಿದರು.

‘ಬಾಸ್’ ಚಿತ್ರದ ರಿಲೀಸ್‌ಗೆ ಮತ್ತೆ ಕಾನೂನು ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ - ವಿಜಯಲಕ್ಷ್ಮೀ!

ಮಹಿಳಾ ಕೈದಿಗಳೊಂದಿಗೆ ಹೆಜ್ಜೆ ಹಾಕಿದ ಪವಿತ್ರಾ ಗೌಡ

ಇನ್ನೊಂದೆಡೆ, ಇದೇ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಅವರು ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು. ಜೈಲಿನ ಇತರ ನೂರಾರು ಮಹಿಳಾ ಕೈದಿಗಳ ಜೊತೆ ಸಾಲಿನಲ್ಲಿ ಕುಳಿತು ಪವಿತ್ರಾ ಗೌಡ ಅವರು ಯೋಗ ಮತ್ತು ಧ್ಯಾನ ಮಾಡಿದರು. ಸದ್ಯ ದರ್ಶನ್‌ ಮತ್ತು ಪವಿತ್ರಾ ಗೌಡ ಅವರು ಜೈಲಿನಲ್ಲಿ ಯೋಗ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹೊಸ ಫೋಟೋ ನೋಡಿ ನಿಟ್ಟುಸಿರು ಬಿಟ್ಟ 'ಡಿ ಬಾಸ್' ಫ್ಯಾನ್ಸ್

ಇತ್ತೀಚೆಗೆ ನಟ ದರ್ಶನ್‌ ಅವರ ಮುಖ ಸೊರಗಿರುವಂತಹ ಫೇಕ್‌ ಫೋಟೋವೊಂದು ವೈರಲ್‌ ಆಗಿತ್ತು. ಅದನ್ನು ನಿಜವೆಂದೇ ನಂಬಿ ದರ್ಶನ್ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದರು. ಆದರೆ, ಜೈಲಿನ ಯೋಗ ದಿನಾಚರಣೆಯ ಈ ಹೊಸ ಫೋಟೋಗಳನ್ನು ನೋಡಿದ ಅಭಿಮಾನಿಗಳು, ನೆಚ್ಚಿನ ನಟನನ್ನು ಕಂಡು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ಫೋಟೋಗಳನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸುತ್ತಿದ್ದಾರೆ.