ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿನಯದ ʻದಿ ಡೆವಿಲ್ʼ ಸಿನಿಮಾದ ಮೂರನೇ ದಿನದ ಗಳಿಕೆ ವಿವರ ಹೊರಬಿದ್ದಿದೆ. ಮೊದಲ ದಿನ 13+ ಕೋಟಿ ರೂ. ಗಳಿಕೆ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ಸದ್ಯ ಮೊದಲ ಮೂರು ದಿನಗಳಿಗೆ ಈ ಚಿತ್ರದ ಗಳಿಕೆಯು 20+ ಕೋಟಿ ರೂ. ಆಗಿದೆ ಎನ್ನುತ್ತಿವೆ ಮೂಲಗಳು.
ಪ್ರತಿದಿನ ಎಷ್ಟಾಗುತ್ತಿದೆ ಗಳಿಕೆ?
ದಿ ಡೆವಿಲ್ ಸಿನಿಮಾವು ಮೊದಲ ದಿನ 13.80+ ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ನಂತರ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಡೆವಿಲ್ ಗಳಿಕೆ ಇಳಿಕೆ ಆಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಎರಡನೇ ದಿನ ಅಂದರೆ, ಶುಕ್ರವಾರ 3.40 ಕೋಟಿ ರೂ. ಗಳಿಕೆಯಾದರೆ, ಮೂರನೇ ದಿನ (ಶನಿವಾರ) 3.75 ಕೋಟಿ ರೂ. ಗಳಿಕೆ ಆಗಿದೆ ಎಂಬ ಮಾಹಿತಿ ಇದೆ. ಅಲ್ಲಿಗೆ ಮೊದಲ ಮೂರು ದಿನಗಳಿಗೆ 20+ ಕೋಟಿ ರೂ. ಆಗಿದೆ. ಇಂದು ನಾಲ್ಕನೇ ದಿನ (ಭಾನುವಾರ) ರಜೆ ಇರುವುದರಿಂದ ಗಳಿಕೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಒಂದು ವೇಳೆ 4-5 ಕೋಟಿ ರೂ. ಗಳಿಕೆಯಾದರೆ, ಡೆವಿಲ್ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್ 25 ಕೋಟಿ ರೂ. ದಾಟುವ ನಿರೀಕ್ಷೆ ಇದೆ.
ಪ್ರಸ್ತುತ ಬೆಂಗಳೂರಿನಲ್ಲಿ ಈ ಚಿತ್ರಕ್ಕೆ 500ಕ್ಕೂ ಅಧಿಕ ಶೋಗಳು ಸಿಕ್ಕಿದ್ದು, ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾವನ್ನು ನೋಡುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲೂ ದರ್ಶನ್ ಅಭಿನಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಿಲನ ಪ್ರಕಾಶ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿ, ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ.
ವಿಜಯಲಕ್ಷ್ಮೀ ಸಂದರ್ಶನ ವೈರಲ್
ಈ ನಡುವೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಡೆವಿಲ್ ಹೀರೋಯಿನ್ ರಚನಾ ರೈ ಅವರು ಈ ಸಂದರ್ಶನ ಮಾಡಿರುವುದು ವಿಶೇಷ. ಇದರಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮೀ, "ನನ್ನ ಬಗ್ಗೆ, ನನ್ನ ಮಗನ ಬಗ್ಗೆ ಮಾತನಾಡಿದ್ರೆ ನಮಗೆ ಎಫೆಕ್ಟ್ ಏನೂ ಆಗಲ್ಲ. ನನಗೆ 90% ಜನ ಪ್ರೀತಿ ತೋರಿಸ್ತಾರೆ. ಅದು ನನಗೆ ಮುಖ್ಯವಾಗತ್ತೆ. ನೆಗೆಟಿವ್ ಕಮೆಂಟ್ ನಾನು ಓದೋದು ಇಲ್ಲ. ಇನ್ನು, ದರ್ಶನ್ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು" ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಡೆವಿಲ್ ಸಿನಿಮಾವನ್ನು ಕೊಂಡಾಡಿದ್ದ ಅವರು, "ಚಿತ್ರಮಂದಿರದಿಂದ ಹೊರಬಂದ ಕ್ಷಣದಲ್ಲೇ ಹೃದಯ ತುಂಬಿ ಹರಿಯಿತು. ನಿರ್ದೇಶಕ ಪ್ರಕಾಶ್ ಅವರ ದೃಷ್ಟಿ, ಕಥನಶೈಲಿ, ಪ್ರತಿಯೊಂದು ಫ್ರೇಮ್ ಮೇಲಿನ ಹಿಡಿತ—ಎಲ್ಲವೂ ವಿಶೇಷ. ಕ್ಯಾಮೆರಾ ಕೆಲಸ ಮತ್ತು ತಾಂತ್ರಿಕ ತಂಡದ ಶ್ರಮದಿಂದ ಚಿತ್ರವು ದೃಶ್ಯಾತ್ಮಕವಾಗಿ ನಿಜವಾದ ಸಿನಿಮಾ ಹಬ್ಬದಂತೆ ಹೊಳೆಯುತ್ತದೆ. ದರ್ಶನ್ ಅವರನ್ನು ನೋಡುವಾಗ ನನಗೆ ಏನು ಅನಿಸಿತೋ ಪದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದರು.