ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’ ಚಿತ್ರದ ಮೂಲಕ ನಿರ್ದೇಶಕರಾಗಿ ಗಮನ ಸೆಳೆದಿದ್ದ ಚಯನ್ ಶೆಟ್ಟಿ, ಇದೀಗ ಮತ್ತೊಂದು ಚಿತ್ರದೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಅವರು ನಿರ್ದೇಶಿಸಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ರಿಲೀಸ್ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದ್ದು, ಇದೇ ಡಿಸೆಂಬರ್ 4ರಂದು ಚಿತ್ರವು ಕನ್ನಡ ಹಾಗೂ ಮಲಯಾಳಂ ಎರಡು ಭಾಷೆಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ.
ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ
ಶ್ರೀ ವಾರಾಹಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಸಂತೋಷ್ ವಿ. ಅವರು ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರವು, ಈಗಾಗಲೇ ಬಿಡುಗಡೆಯಾಗಿರುವ ಆಕರ್ಷಕ ಫಸ್ಟ್‌ಲುಕ್ ಪೋಸ್ಟರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮೊದಲ ಸಿನಿಮಾದಲ್ಲಿ ಗಂಭೀರ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದ ಚಯನ್ ಶೆಟ್ಟಿ, ಈ ಬಾರಿ ಸಂಪೂರ್ಣವಾಗಿ ಕರಾವಳಿ ತೀರದ ಹಿನ್ನೆಲೆಯಲ್ಲಿ ನಡೆಯುವ ಹಾಸ್ಯಪ್ರಧಾನ ಕಥೆಯನ್ನು ದೃಶ್ಯರೂಪಕ್ಕೆ ತಂದಿದ್ದಾರೆ. ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
ದಸರಾ ಹಬ್ಬಕ್ಕೆ ಹಾಡು ರಿಲೀಸ್
‘ಮ್ಯಾರೇಜ್ ಪಾರ್ಟಿ’ ಗಟ್ಟಿ ಕಥೆ ಹಾಗೂ ಭರಪೂರ ಹಾಸ್ಯವನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಪ್ಯಾಕೇಜ್ ಆಗಿರಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆಗಳು ನಡೆದಿವೆ. ಕರಾವಳಿ ಸೊಗಡಿನ ಕಥೆ ಹೊಂದಿರುವ ಕಾರಣ ಮಲಯಾಳಂ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆಯುವ ನಿರೀಕ್ಷೆ ಇದೆ.
ದೊಡ್ಡ ಕಲಾವಿದರ ಬಳಗವೇ ಇದೆ
ಈ ಚಿತ್ರದಲ್ಲಿ ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ. ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿ.ಡಿ. ಸತೀಶ್, ಭೀಮ್ ರಾವ್ ಸೇರಿದಂತೆ ಪ್ರಮುಖ ಹಾಸ್ಯ ಕಲಾವಿದರ ಬಹುದೊಡ್ಡ ತಾರಾಗಣವೇ ಇದೆ. ತಾಂತ್ರಿಕವಾಗಿ ಶ್ರೀಕಾಂತ್ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ನಿರ್ದೇಶನ, ‘ಸೂ ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಅವರ ಸಂಕಲನ ಹಾಗೂ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.