Deepika Padukone: ಅಟ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆಗೆ ದೀಪಿಕಾ ಪಾತ್ರವೂ ಹೈಲೈಟ್; ಬರೋಬ್ಬರಿ 100 ದಿನ ಶೂಟಿಂಗ್
AA22 x A6: ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಲವು ದಿನಗಳ ಬ್ರೇಕ್ ನಂತರ ನಟನೆಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಅಟ್ಲಿ-ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಅವರು ಬರೋಬ್ಬರಿ 100 ದಿನಗಳ ಕಾಲ್‌ಶೀಟ್ ನೀಡಿದ್ದಾರೆ.


ಹೈದರಾಬಾದ್: ಅಟ್ಲಿ (Atlee)-ಅಲ್ಲು ಅರ್ಜುನ್ (Allu Arjun)-ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್‌ನ ಮುಂಬರುವ ಚಿತ್ರ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಇನ್ನೂ ಚಿತ್ರ ಸೆಟ್ಟೇರಿಲ್ಲ, ಅದಾಗಲೇ ನಿರೀಕ್ಷೆ ಗರಿಗೆದರಿದೆ. ಬರೋಬ್ಬರಿ 700 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಲಿರುವ ಈ ಸಿನಿಮಾದ ಟೈಟಲ್ ಅಂತಿಮಗೊಂಡಿಲ್ಲ. ತಾತ್ಕಾಲಿಕವಾಗಿ ಎಎ22Xಎ6 (AA22XA6) ಎಂಬ ಶೀರ್ಷಿಕೆ ಇಡಲಾಗಿದೆ. ನವೆಂಬರ್‌ನಲ್ಲಿ ಶೂಟಿಂಗ್ ಆರಂಭವಾಗಲಿದ್ದು, ನಾಯಕಿ ದೀಪಿಕಾ ಪಡುಕೋಣೆ ಆಗಲೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆಗೆ ದೀಪಿಕಾ ಪಾತ್ರಕ್ಕೂ ಬಹಳಷ್ಟು ಒತ್ತು ನೀಡಲಾಗಿದ್ದು, ಅವರು ಬರೋಬ್ಬರಿ 100 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಿಂಕಿವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
ಈ ಚಿತ್ರದ ಮೂಲಕ ಅಟ್ಲಿ ಹೊಸ ರೀತಿಯ ಕಥೆ ಹೇಳಲಿದ್ದು, ಹಲವು ಪಾತ್ರಗಳಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಸಮಾನಾಂತರ ಜಗತ್ತಿನಲ್ಲೂ ಕಥೆ ಸಾಗಲಿದ್ದು, ಪ್ರೇಕ್ಷಕರಿಗೆ ಹೊಸದೊಂದು ಅನುಭವ ನೀಡಲಿದೆ.
ಈ ಸುದ್ದಿಯನ್ನೂ ಓದಿ: Rashmika Mandanna: ನ್ಯಾಷನಲ್ ಕ್ರಶ್ ಈಗ ವಿಲನ್; ಅಲ್ಲು-ಅಟ್ಲಿ-ದೀಪಿಕಾ ಚಿತ್ರದಲ್ಲಿ ರಶ್ಮಿಕಾಗೆ ನೆಗೆಟಿವ್ ರೋಲ್?
ದೀಪಿಕಾ ಪಾತ್ರವೇನು?
ನವೆಂಬರ್‌ನಲ್ಲಿ ಆರಂಭಗೊಳ್ಳಲಿರುವ ಚಿತ್ರೀಕರಣದಲ್ಲಿ ದೀಪಿಕಾ ಭಾಗವಹಿಸಲಿದ್ದು, ಈಗಾಗಲೇ ಅದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅವರು ಬರೋಬ್ಬರಿ 100 ದಿನಗಳ ಕಾಲ್‌ಶಿಟ್ ನೀಡಿದ್ದಾರೆ. ಕಥೆಗೆ ಬಹುಮುಖ್ಯ ತಿರುವು ನೀಡುವ ಪಾತ್ರದಲ್ಲಿ ಅವರು ನಟಿಸುತ್ತಿದ್ದು, ಹೋರಾಟಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ವಿಶೇಷ ರೀತಿಯ ಆಯುಧಗಳನ್ನು ತಯಾರಿಸಲಾಗುತ್ತಿದ್ದು, ಅವರ ವೃತ್ತಿ ಜೀವನದಲ್ಲೇ ವಿಶೇಷ, ವಿಭಿನ್ನ ಪಾತ್ರ ಇದಾಗಿರಲಿದೆ. ಆ್ಯಕ್ಷನ್, ಡ್ರಾಮ, ಸೆಂಟಿಮೆಂಟ್ ಸೇರಿದಂತೆ ಅವರ ಪಾತ್ರಕ್ಕೂ ವಿಭಿನ್ನ ಆಯಾಮಗಳಿವೆ ಎನ್ನಲಾಗುತ್ತಿದೆ. ಹೀಗೆ ಪವರ್‌ಫುಲ್ ರೋಲ್ ಮೂಲಕ ಅವರು ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಕೆಲವು ದಿನಗಳಿಂದ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದು, ಸದ್ಯ ಬಣ್ಣದ ಲೋಕದಲ್ಲಿ ನಿಧಾನವಾಗಿ ಸಕ್ರಿಯರಾಗುತ್ತಿದ್ದಾರೆ.
ಚಿತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಸಮಾನಾಂತರ ಜತ್ತನ್ನು ಕಟ್ಟಿಕೊಡಲು ಅಟ್ಲಿ ಮುಂದಾಗಿದ್ದಾರೆ. ಹಾಲಿವುಡ್‌ನ ʼಅವತಾರ್ʼ ಚಿತ್ರದ ಮಾದರಿಯಲ್ಲಿ 2 ವಿಭಿನ್ನ ಲೋಕದಲ್ಲಿ ಕಥೆ ಸಾಗಲಿದೆ. 2027ರ ಕೊನೆ ಭಾಗದಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ತಮ್ಮ ವೃತ್ತಿ ಬದುಕಿನಲ್ಲೇ ಇದು ವಿಭಿನ್ನ ಚಿತ್ರವಾಗಿರಲಿದೆ ಎಂದು ಈಗಾಗಲೇ ಅಲ್ಲು ಅರ್ಜುನ್ ತಿಳಿಸಿದ್ದು, ಒಂದೇ ಸಿನಿಮಾದಲ್ಲಿ ಅವರ ವಿಭಿನ್ನ ಪಾತ್ರದವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶೇಷವೆಂದರೆ ಅಟ್ಲಿ ಮತ್ತು ದೀಪಿಕಾ ಕಾಂಬಿನೇಷನ್‌ನ 2ನೇ ಚಿತ್ರ ಇದಾಗಲಿದೆ. 2023ರಲ್ಲಿ ತೆರೆಕಂಡ ಶಾರುಖ್ ಖಾನ್-ಅಟ್ಲಿಯ ಬಾಲಿವುಡ್ ಚಿತ್ರ ʼಜವಾನ್ʼನಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಲಿದ್ದಾರೆ. ಇವರೊಂದಿಗೆ ಮತ್ತೋರ್ವ ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಜಾಹ್ನವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ಬಣ್ಣ ಹಚ್ಚಲಿದ್ದಾರೆ.
ದೀಪಿಕಾ ಕೈಯಲ್ಲಿರುವ ಪ್ರಾಜೆಕ್ಟ್
ದೀಪಿಕಾ ಶೀಘ್ರದಲ್ಲೇ ಪ್ರಭಾಸ್ ಜತೆಗಿನ ‘ಕಲ್ಕಿ 2898 ಎಡಿ’ ಭಾಗ 2ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲ ಶಾರುಖ್ ಖಾನ್ ಅಭಿನಯದ ಹಿಂದಿಯ ʼಕಿಂಗ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.