ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಜಯ್‌ ಕಪೂರ್ ಆಸ್ತಿ ವಿಲ್ ಮೇಲೆ ಅನುಮಾನ; ನಟಿ ಕರಿಷ್ಮಾ ಮಕ್ಕಳ ಪರ ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ಕಳೆದ ವರ್ಷ ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ 30 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂರಕ್ಷಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ವಿರುದ್ಧ ಎರಡನೇ ಪತ್ನಿ ಕರಿಷ್ಮಾ ಕಪೂರ್ ಅವರ ಮಕ್ಕಳು ನಕಲಿ ವಿಲ್ ಸೃಷ್ಟಿಸಿದ ಆರೋಪ ಹೊರಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಸುಮಾರು 30 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂರಕ್ಷಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ. ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಮತ್ತು ಅವರ ಎರಡನೇ ಪತ್ನಿ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾ ನಡುವಿನ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.

ಆಸ್ತಿಗಳ ಬಗ್ಗೆ ಅಪೂರ್ಣ ಮಾಹಿತಿ

ಸಂಜಯ್ ಕಪೂರ್ ಹೆಸರಿನಲ್ಲಿ ಪ್ರಿಯಾ ನಕಲಿ ವಿಲ್ ಸೃಷ್ಟಿಸಿದ್ದಾರೆ ಮತ್ತು ಅವರ ಆಸ್ತಿಗಳ ಬಗ್ಗೆ ಅಪೂರ್ಣ ಮಾಹಿತಿಯನ್ನು ನೀಡಿದ್ದಾರೆ ಎಂದು ಕಿಯಾನ್ ಮತ್ತು ಸಮೈರಾ ಆರೋಪಿಸಿದ್ದಾರೆ. ಸಂಜಯ್ ಅವರ ಆಸ್ತಿ ಪಟ್ಟಿಯಲ್ಲಿ ಅತ್ಯಂತ ಬೆಲೆಬಾಳುವ ಪೋಲೋ ಕುದುರೆಗಳು ಹಾಗೂ ಆಡೆಮರ್ ಪಿಗುಯೆಟ್ (Audemars Piguet) ಮತ್ತು ರೋಲೆಕ್ಸ್ (Rolex) ನಂತಹ ಐಷಾರಾಮಿ ಬ್ರಾಂಡ್‌ಗಳ ಕೈಗಡಿಯಾರಗಳನ್ನು ಸೇರಿಸಲಾಗಿಲ್ಲ ಎಂದು ಅವರು ದೂರಿದ್ದರು.

ಈ ಅನುಮಾನಗಳನ್ನು ಒಪ್ಪಿಕೊಂಡ ನ್ಯಾಯಾಲಯವು, ವಿದೇಶಿ ಹೂಡಿಕೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೂಡಿಕೆಗಳು ಸೇರಿದಂತೆ ಸಂಜಯ್ ಅವರ ಎಲ್ಲಾ ಆಸ್ತಿಗಳನ್ನು "ಸಂರಕ್ಷಿಸಬೇಕಾದ ಅಗತ್ಯವಿದೆ" ಮತ್ತು ಅವುಗಳನ್ನು "ದುರುಪಯೋಗಪಡಿಸಿಕೊಳ್ಳಬಾರದು" ಎಂದು ತಿಳಿಸಿದೆ. ಅಲ್ಲದೆ, ಪ್ರಿಯಾ ಕಪೂರ್ ಅವರು ಈ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಜೊತೆಗೆ ಸಂಜಯ್ ಅವರ ಬ್ಯಾಂಕ್ ಖಾತೆಗಳ ನಿರ್ವಹಣೆಯನ್ನು ಸಹ ಸ್ಥಗಿತಗೊಳಿಸಿದೆ.

ಮಕ್ಕಳಿಗೆ ಅನ್ಯಾಯ ಮಾಡಿದಂತೆ ಆಗಲಿದೆ

ವಿಲ್ ಮೇಲಿನ ಅನುಮಾನಗಳನ್ನು ಹೋಗಲಾಡಿಸುವ ಜವಾಬ್ದಾರಿ ಪ್ರಿಯಾ ಕಪೂರ್ ಅವರ ಮೇಲಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಕರಿಷ್ಮಾ ಕಪೂರ್ ಅವರ ಮಕ್ಕಳು ಸಲ್ಲಿಸಿರುವ ದೂರಿನಲ್ಲಿ ಪ್ರಾಥಮಿಕವಾಗಿ ಸತ್ಯಾಂಶವಿದೆ ಎಂದು ಕೋರ್ಟ್ ಗಮನಿಸಿದೆ. ಇದಲ್ಲದೆ, ವೈಯಕ್ತಿಕ ವಸ್ತುಗಳು, ಕಲಾಕೃತಿಗಳು ಮತ್ತು ಪ್ರಾವಿಡೆಂಟ್ ಫಂಡ್ ಹಣದ ವರ್ಗಾವಣೆಯನ್ನೂ ನ್ಯಾಯಾಲಯ ನಿರ್ಬಂಧಿಸಿದೆ. ಒಂದು ವೇಳೆ ವಿಲ್ ಕಾನೂನುಬದ್ಧವಾಗಿ ಸಾಬೀತಾಗದಿದ್ದರೆ, ಈ ಹಂತದಲ್ಲಿ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದು ಸಂಜಯ್‌ ಕಪೂರ್‌ - ಕರೀಷ್ಮಾ ಕಪೂರ್‌ ಮಕ್ಕಳಿಗೆ ಮಾಡುವ ಅನ್ಯಾಯವಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಪ್ರಕರಣವು ಈಗ ವಿಲ್‌ನ ಕಾನೂನು ಮಾನ್ಯತೆಯನ್ನು ನಿರ್ಧರಿಸಲು ವಿಚಾರಣೆಗೆ ಒಳಪಡಲಿದೆ.

ಪೋಲೋ ಆಡುತ್ತಿದ್ದಾಗ ಸಂಜಯ್ ನಿಧನ

53 ವರ್ಷದ ಸಂಜಯ್ ಕಪೂರ್ ಅವರು ಕಳೆದ ವರ್ಷ ಜೂನ್ 12 ರಂದು ಲಂಡನ್‌ನಲ್ಲಿ ಪೋಲೋ ಆಡುತ್ತಿದ್ದಾಗ ನಿಧನರಾಗಿದ್ದರು. ಆರಂಭದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತಾದರೂ, ಮಗನ ಸಾವಿನ ಹಿಂದೆ ಪಿತೂರಿ ಇರಬಹುದು ಎಂದು ಅವರ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆಗಸ್ಟ್‌ನಲ್ಲಿ ಬ್ರಿಟಿಷ್ ವೈದ್ಯಕೀಯ ಅಧಿಕಾರಿಗಳು ಇದು ‌ನ್ಯಾಚುರಲ್‌ ಡೆತ್‌ ಎಂದು ಖಚಿತಪಡಿಸಿ, ಹೃದಯ ಸಂಬಂಧಿ ಕಾಯಿಲೆಗಳನ್ನು ಸಾವಿಗೆ ಕಾರಣ ಎಂದು ಪಟ್ಟಿ ಮಾಡಿದ್ದರು.