ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಧನುಷ್‌ ನಟನೆಯ ʻಕರʼ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಘೋಷಣೆ; ಯಾವಾಗ, ಎಲ್ಲಿ ನೋಡಬಹುದು?

ತಮಿಳು ನಟ ಧನುಷ್ ಮತ್ತು ಮಮಿತಾ ಬೈಜು ಅಭಿನಯದ ‘ಕರ’ ಸಿನಿಮಾ ಮೇ 28 ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಜಾಗತಿಕವಾಗಿ ಸ್ಟ್ರೀಮಿಂಗ್ ಆಗಲಿದೆ. ವಿಘ್ನೇಶ್ ರಾಜಾ ನಿರ್ದೇಶನದ ಈ ಥ್ರಿಲ್ಲರ್ ಚಿತ್ರವು 1990ರ ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ, ಬ್ಯಾಂಕ್ ದರೋಡೆ ಮತ್ತು ಅಪರಾಧ ಲೋಕಕ್ಕೆ ಮರಳುವ ಮಾಜಿ ಕಳ್ಳನೊಬ್ಬನ ಕಥೆಯನ್ನು ಒಳಗೊಂಡಿದೆ.

ತಮಿಳು ನಟ ಧನುಷ್ ಅಭಿನಯದ ‘ಕರ’ (Kara) ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಘೋಷಣೆ ಆಗಿದೆ. ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು ಇದೀಗ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆಗಲು ಸಿದ್ಧವಾಗಿದೆ. ಅಂದಹಾಗೆ, ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಪಡೆದುಕೊಂಡಿದ್ದು, ಸ್ಟ್ರೀಮಿಂಗ್‌ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ʻಕರʼ ಒಟಿಟಿ ರಿಲೀಸ್‌ ಯಾವಾಗ?

ಮೇ 28 ರಿಂದ ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ʻಕರʼ ಚಿತ್ರ ಸ್ಟ್ರೀಮಿಂಗ್‌ಗೆ ಲಭ್ಯವಿರಲಿದೆ ಎಂದು ನೆಟ್‌ಫ್ಲಿಕ್ಸ್‌ ತಿಳಿಸಿದೆ. ಒಟಿಟಿ ಬಿಡುಗಡೆಯ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‌ನಲ್ಲಿ ಭಾರಿ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ಹಿಂದಿ ಆವೃತ್ತಿಯನ್ನೂ ಬಿಡುಗಡೆ ಮಾಡುತ್ತಿರುವುದಕ್ಕೆ ಧನ್ಯವಾದಗಳು" ಎಂದು ಸಿನಿಪ್ರಿಯರೊಬ್ಬರು ಬರೆದರೆ, ಮತ್ತೊಬ್ಬರು, "ಒಟಿಟಿ ರಿಲೀಸ್‌ಗಾಗಿ ಕಾಯುತ್ತಿದ್ದೇನೆ, ಇದರ ಮುಂದಿನ ಭಾಗಗಳು ಬರಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ. "ಧನುಷ್ ಸರ್ ಕರ ಒಂದು ಬ್ಲಾಕ್‌ಬಸ್ಟರ್ ಸಿನಿಮಾ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

Dhanush: ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?

ಈ ಸಿನಿಮಾದ ಕಲೆಕ್ಷನ್‌ ಎಷ್ಟು?

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 'ಕರ' ಚಿತ್ರವು ಭಾರತದಲ್ಲಿ ಸುಮಾರು 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ವಿಶ್ವಾದ್ಯಂತ ಈ ಸನಿಮಾದ ಒಟ್ಟಾರೆ ಗಳಿಕೆ 53 ಕೋಟಿ ರೂಪಾಯಿ ತಲುಪಿತ್ತು. ವಿಘ್ನೇಶ್ ರಾಜಾ ನಿರ್ದೇಶನದ ಸಿನಿಮಾವು ಅಂದುಕೊಂಡ ಮಟ್ಟದಕ್ಕೆ ಹವಾ ಮಾಡಲಿಲ್ಲ. ವಿಘ್ನೇಶ್ ರಾಜಾ ಅವರ ಮೊದಲ ಸಿನಿಮಾ ಪೋರ್‌ ತೊಳಿಲ್‌ ದೊಡ್ಡ ಹಿಟ್‌ ಆಗಿತ್ತು. ಆ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಕರ ನಿರಾಸೆ ಮಾಡಿತ್ತು.

"ಇದೊಂದು ಉತ್ತಮ ಸಿನಿಮಾವಾಗಿದ್ದು, ಇನ್ನಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುವ ಅವಕಾಶವಿತ್ತು. ಕಲಾವಿದರ ಅತ್ಯುತ್ತಮ ನಟನೆ ಮತ್ತು ಕನ್ವೆಂಷನಲ್ ಬ್ಯಾಂಕ್ ದರೋಡೆಯ ದೃಶ್ಯಗಳು ಚಿತ್ರವನ್ನು ನೋಡುವಂತೆ ಮಾಡುತ್ತವೆ. ಆದರೆ ಮೊದಲಾರ್ಧದಲ್ಲಿ ಭಾವನಾತ್ಮಕ ಅಂಶಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡಿದ್ದರೆ ಚಿತ್ರ ಮತ್ತಷ್ಟು ಅದ್ಭುತವಾಗುತ್ತಿತ್ತು" ಎಂಬ ವಿಮರ್ಶೆಗಳು ಕೇಳಿಬಂದಿದ್ದವು.

ಈ ಸಿನಿಮಾದ ಕಥೆ ಏನು?

ʻಕರʼ ಚಿತ್ರದ ಕಥೆಯು 1990ರ ದಶಕದ ಆರಂಭದಲ್ಲಿ ನಡೆಯುತ್ತದೆ. ಬ್ಯಾಂಕೊಂದು ತನ್ನ ಕುಟುಂಬದ ಪಾರಂಪರಿಕ ಆಸ್ತಿಯನ್ನು ವಶಪಡಿಸಿಕೊಂಡ ನಂತರ, ಅನಿವಾರ್ಯವಾಗಿ ಮತ್ತೆ ಅಪರಾಧ ಲೋಕಕ್ಕೆ ಮರಳುವ ಮಾಜಿ ಕಳ್ಳನ ಸುತ್ತ ಇಡೀ ಕಥೆ ಸಾಗುತ್ತದೆ. ಈ ಥ್ರಿಲ್ಲರ್ ಚಿತ್ರವು ಆಕ್ಷನ್ ಜೊತೆಗೆ ನ್ಯಾಯ, ಬದುಕುವ ಹಕ್ಕು ಮತ್ತು ನೈತಿಕ ಸಂಘರ್ಷದ ವಿಷಯಗಳನ್ನು ಒಳಗೊಂಡಿದೆ. 1991ರ ಗಲ್ಫ್ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದ ಕಥೆಯಲ್ಲಿ, ತನ್ನ ಪ್ರೀತಿಪಾತ್ರರನ್ನು ರಕ್ಷಿಸಲು ಹಳ್ಳಿಗೆ ಮರಳುವ ಕಥಾನಾಯಕನ ಹಳೆಯ ಕರಾಳ ದಿನಗಳು ಅವನನ್ನು ಹೇಗೆ ಕಾಡುತ್ತವೆ ಎಂಬುದನ್ನು ತೋರಿಸಲಾಗಿದೆ.‌

ಕರ ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಘೋಷಣೆ



ಈ ಚಿತ್ರದಲ್ಲಿ ಧನುಷ್ 'ಕರಸಾಮಿ' (ಕರ) ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿಯಾಗಿ ಮಮಿತಾ ಬೈಜು ಇದ್ದಾರೆ. ಉಳಿದಂತೆ, ಜಯರಾಮ್, ಕೆ.ಎಸ್. ರವಿಕುಮಾರ್, ಕರುಣಾಸ್, ಶ್ರೀಜಾ ರವಿ, ಪೃಥ್ವಿ ಪಾಂಡ್ಯರಾಜನ್ ಮತ್ತು ಎಂ.ಎಸ್. ಭಾಸ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.