ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂರೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ ಧನುಷ್ ಅಭಿನಯದ ‘ಓಂ: ಆಪರೇಷನ್ ಮೋಲ್’; ಬಾಕ್ಸ್‌ ಆಫೀಸ್‌ ಉಡೀಸ್!‌

ನಟ ಧನುಷ್‌ ನಟನೆಯ ‘ಓಂ: ಆಪರೇಷನ್ ಮೋಲ್’ ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ವಿಶ್ವಾದ್ಯಂತ 101.70 ಕೋಟಿ ರೂಪಾಯಿ ಗಳಿಸಿ ಮೆಗಾ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಈ ಸಿನಿಮಾ ಧನುಷ್ ವೃತ್ತಿಜೀವನಕ್ಕೆ ಬಹುದೊಡ್ಡ ಗೆಲುವು ತಂದುಕೊಡುವ ಸೂಚನೆ ನೀಡಿದೆ.

ನಟ ಧನುಷ್ ಅಭಿನಯದ ‘ಓಂ: ಆಪರೇಷನ್ ಮೋಲ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಧೂಳೆಬ್ಬಿಸಿದ್ದು, ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ನವೆಂಬರ್ 20ರಂದು ತೆರೆಕಂಡಿದ್ದ ಈ ಚಿತ್ರಕ್ಕೆ ಮೊದಲ ದಿನದಿಂದಲೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದೀಗ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪೋಸ್ಟರ್ ಹಂಚಿಕೊಳ್ಳುವ ಮೂಲಕ, ಸಿನಿಮಾ ಕೇವಲ 3 ದಿನಗಳಲ್ಲಿ ಬರೋಬ್ಬರಿ 101.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 'ಮೆಗಾ ಬ್ಲಾಕ್‌ಬಸ್ಟರ್' ಹಿಟ್ ಆಗಿದೆ ಎಂದು ಸಂತಸ ಹಂಚಿಕೊಂಡಿದೆ.

ಡಾನ್‌ ಪಾತ್ರದಲ್ಲಿ ಮಮ್ಮುಟ್ಟಿ

'ಅಮರನ್' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು 2 ಗಂಟೆ 58 ನಿಮಿಷಗಳ ಅವಧಿಯನ್ನು ಹೊಂದಿದೆ. ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಧನುಷ್ ಅಂಡರ್‌ಕವರ್ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರೊಂದಿಗೆ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರ ದೊಡ್ಡ ದಂಡೇ ಈ ಚಿತ್ರದಲ್ಲಿದೆ.

Kriti Sanon: ಧನುಷ್-ಕೃತಿ ನಟನೆಯ ʻತೇರೆ ಇಷ್ಕ್ ಮೇʼ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರು 'ಬರ್ಮಾ ಕಾರ್ತಿಕೇಯನ್' ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದರೆ, ನಟಿ ಸಾಯಿ ಪಲ್ಲವಿ 'ನಿತ್ಯಾ ರೆಡ್ಡಿ' ಎಂಬ ಖಡಕ್ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರತಂಡ ಹಂಚಿಕೊಂಡ ಅಧಿಕೃತ ಮಾಹಿತಿ



ತಮಿಳಿಗೆ ಕಾಲಿಟ್ಟ ನಾಸಿರುದ್ದೀನ್ ಶಾ

ಇನ್ನುಳಿದಂತೆ, ನಟಿ ಶ್ರೀಲೀಲಾ 'ರೋಜಾ' ಪಾತ್ರದಲ್ಲಿ ಗಮನ ಸೆಳೆದಿದ್ದರೆ, ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ 'ಅಬ್ದುಲ್ ಹಮೀದ್' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ಮೂಲಕ ನಾಸಿರುದ್ದೀನ್ ಶಾ ಅವರು ತಮಿಳು ಚಿತ್ರರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಹಿರಿಯ ನಟ ಇಂದ್ರನ್ಸ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದು, ಪ್ರತಿಯೊಬ್ಬರ ಪಾತ್ರವೂ ಕಥೆಗೆ ಪೂರಕವಾಗಿ ಮೂಡಿಬಂದಿದೆ.

ನಿರ್ದೇಶಕರಿಗೆ ಮತ್ತೊಂದು ಗೆಲುವು

ನಟ ಧನುಷ್ ಅವರ ಕರಿಯರ್‌ಗೆ ಈ ಸಿನಿಮಾ ಬಹುದೊಡ್ಡ ತಿರುವು ನೀಡಿದೆ. ಈ ಹಿಂದೆ ತೆರೆಕಂಡಿದ್ದ ಅವರ ‘ಕರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಜಾದೂ ಮಾಡಲು ಸಾಧ್ಯವಾಗಿರಲಿಲ್ಲ. ಅದಕ್ಕೂ ಮುನ್ನ ಬಂದಿದ್ದ ‘ಇಡ್ಲಿ ಕಡೈ’ ಚಿತ್ರ ಕೂಡ ನಿರೀಕ್ಷಿತ ಮಟ್ಟದ ದೊಡ್ಡ ಯಶಸ್ಸು ಕಂಡಿರಲಿಲ್ಲ. ಆದರೆ ‘ಓಂ: ಆಪರೇಷನ್ ಮೋಲ್’ ಚಿತ್ರವು ಧನುಷ್ ಅವರಿಗೆ ಭರ್ಜರಿ ಕಮ್‌ಬ್ಯಾಕ್ ನೀಡುವುದರ ಜೊತೆಗೆ, ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರಿಗೂ 'ಅಮರನ್' ಬಳಿಕ ಮತ್ತೊಂದು ಬ್ಲಾಕ್‌ಬಸ್ಟರ್ ಗೆಲುವನ್ನು ತಂದುಕೊಡುವ ಸೂಚನೆ ನೀಡಿದೆ.