ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿರಿಯ ನಟ ಧರ್ಮೇಂದ್ರ ಫ್ಯಾಮಿಲಿಯ ಖಾಸಗಿತನಕ್ಕೆ ಧಕ್ಕೆ; ಆಸ್ಪತ್ರೆ ಸಿಬ್ಬಂದಿ ಅರೆಸ್ಟ್!‌

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಐಸಿಯು ವಿಡಿಯೋ ವೈರಲ್‌ ಆದ ನಂತರ, ಕುಟುಂಬದ ಖಾಸಗಿತನಕ್ಕೆ ಧಕ್ಕೆ ತಂದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ನವೆಂಬರ್‌ 13ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆತರಲಾಗಿದೆ.

ಹಿರಿಯ ನಟ ಧರ್ಮೇಂದ್ರ (Dharmendra) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸದ್ಯ ಧರ್ಮೇಂದ್ರ ಅವರನ್ನು ಕುಟುಂಬಸ್ಥರು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ. ಅಂದಹಾಗೆ, ಧರ್ಮೇಂದ್ರ ಅವರನ್ನು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿದ್ದಾಗ ನಡೆದ ಒಂದು ಅಚಾತುರ್ಯದಿಂದಾಗಿ ಈಗ ಆಸ್ಪತ್ರೆ ಸಿಬ್ಬಂದಿಯೊಬ್ಬರನ್ನು ಅರೆಸ್ಟ್‌ ಮಾಡಲಾಗಿದೆ.

ಏನಿದು ಘಟನೆ?

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 89 ವರ್ಷದ ನಟ ಧರ್ಮೇಂದ್ರ ಅವರನ್ನು ಬ್ರೀಚ್‌ ಕ್ಯಾಂಡಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆ ಸಂದರ್ಭದಲ್ಲಿನ ಒಂದು ವಿಡಿಯೋ ವೈರಲ್‌ ಆಗಿದೆ. ಅದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಧರ್ಮೇಂದ್ರ ಅವರ ಎದುರು ಪುತ್ರರಾದ ಸನ್ನಿ ಡಿಯೋಲ್‌ ಮತ್ತು ಬಾಬಿ ಡಿಯೋಲ್‌ ಭಾವುಕರಾಗಿ ನಿಂತಿದ್ದಾರೆ. ಜೊತೆಗೆ ಇತರ ಕುಟುಂಬ ಸದಸ್ಯರು ಕೂಡ ಇದ್ದಾರೆ. ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್‌ ಕೌರ್‌ ಅವರು ಅಳುತ್ತಾ ಇರುವುದು ಆ ವಿಡಿಯೋದಲ್ಲಿ ಅಸ್ಪಷ್ಟವಾಗಿ ಕಾಣಿಸಿತ್ತು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ಅದನ್ನು ರೆಕಾರ್ಡ್‌ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Actor Dharmendra: ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಧರ್ಮೇಂದ್ರ- ನಟನೆ ಜೊತೆಗೆ ರಾಜಕೀಯದಲ್ಲೂ ಛಾಪು ಮೂಡಿಸಿದ್ದ ನಟ!

ಧರ್ಮೇಂದ್ರ ಕುಟುಂಬದ ಪ್ರೈವೆಸಿಗೆ ಧಕ್ಕೆ

ಹೌದು, ಈ ವಿಡಿಯೋವನ್ನು ರೆಕಾರ್ಡ್‌ ಮಾಡುವ ಮೂಲಕ ಹಿರಿಯ ನಟ ಧರ್ಮೇಂದ್ರ ಅವರ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ, ಈ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್‌ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ಉದ್ಯೋಗಿಯನ್ನು ಅರೆಸ್ಟ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಧರ್ಮೇಂದ್ರ

ತೀವ್ರ ಅನಾರೋಗ್ಯಕ್ಕೀಡಾಗಿದ್ದ ಧರ್ಮೇಂದ್ರ ಅವರು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದು, ನವೆಂಬರ್‌ 13ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುಟುಂಬಸ್ಥರು, "ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಮನೆಯಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ. ಈ ಸಮಯದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳಿಗೆ ಕಿವಿಗೊಡದೆ, ಅವರ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ನಾವು ಮಾಧ್ಯಮಗಳು ಮತ್ತು ಸಾರ್ವಜನಿಕರನ್ನು ವಿನಂತಿಸುತ್ತೇವೆ. ಅವರ ನಿರಂತರ ಚೇತರಿಕೆ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಎಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಶುಭ ಹಾರೈಕೆಗಳನ್ನು ನಾವು ಪ್ರಶಂಸಿಸುತ್ತೇವೆ" ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು.

ನಿಧನ ವದಂತಿ

ಕೆಲ ದಿನಗಳ ಹಿಂದಷ್ಟೇ ಧರ್ಮೇಂದ್ರ ಅವರು ನಿಧನರಾಗಿದ್ಧಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸುದ್ದಿ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಬಿತ್ತರವಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ನಿಧನ ವದಂತಿಯನ್ನು ಅಲ್ಲಗಳೆದಿದ್ದರು ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.