ಮುಂಬೈ, ನ. 10: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (Dharmendra) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಂಬೈಯ ಬ್ರೀಜ್ ಕ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ (Dharmendra Health Update). ಕೆಲವು ದಿನಗಳಿಂದ 89 ವರ್ಷದ ಧರ್ಮೇಂದ್ರ ಅವರ ಆರೋಗ್ಯ ಹದಗೆಟ್ಟಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಧರ್ಮೇಂದ್ರ ಅವರ ಸ್ಥಿತಿ ಗಂಭೀರವಾಗಿದ್ದು, ಕುಟುಂಬ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಕಳೆದ ವಾರ ಧರ್ಮೇಂದ್ರ ನಿಯಮಿತ ಪರೀಕ್ಷೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕೆಲವು ವರದಿಗಳ ಪ್ರಕಾರ, ಕುಟುಂಬಸ್ಥರು ಧರ್ಮೇಂದ್ರ ಈಗ ಚೇತರಿಸಿಕೊಳ್ಳುತ್ತಿರುವುದಾಗಿ, ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರಂತೆ. ಈ ವರ್ಷದ ಆರಂಭದಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
1960ರಿಂದಲೂ ಧರ್ಮೇಂದ್ರ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನು ಅಭಿಮಾನಿಗಳು ಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿ ಅನೇಕ ಬಗೆಯ ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Dharmendra: ಮೊದಲ ಪತ್ನಿ ಪ್ರಕಾಶ್ ಕೌರ್ ಜತೆ ನಟ ಧರ್ಮೇಂದ್ರ ವಾಸ; ಮಗ ಬಾಬ್ಬಿ ಡಿಯೋಲ್ ಸ್ಪಷ್ಟನೆ
1960ರಲ್ಲಿ ರಿಲೀಸ್ ಆದ ʼದಿಲ್ ಬಿ ತೇರ ಹಮ್ ಬಿ ತೇರೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಧರ್ಮೇಂದ್ರ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಬರೋಬ್ಬರಿ 6 ದಶಕಗಳಿಂದ ಹೆಚ್ಚು ಕಾಲ ಅಭಿನಯಿಸುತ್ತಲೇ ಬಂದಿದ್ದಾರೆ. ಹಿಂದಿ ಜತೆಗೆ ಪಂಜಾಬಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಸದ್ಯ ಧರ್ಮೇಂದ್ರ ಕಾಣಿಸಿಕೊಂಡ ʼಇಕ್ಕೀಸ್ʼ ಹಿಂದಿ ಚಿತ್ರ ರಿಲೀಸ್‌ಗೆ ರೆಡಿ ಇದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಧರ್ಮೇಂದ್ರ ಮುಖ್ಯ ಪಾತ್ರ ನಿರ್ವಹಿಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಕಥೆಯನ್ನು ಇದು ಹೊಂದಿದೆ.
ಕಿರುತೆರೆಯಲ್ಲೂ ಬ್ಯುಸಿ
ಹಿರಿತೆರೆ ಜತೆ ಧರ್ಮೇಂದ್ರ ಕಿರುತೆರೆಯಲ್ಲಿಯೂ ಛಾಪು ಮೂಡಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಇಂಡಿಯಾಸ್ ಗಾಟ್ ಟ್ಯಾಲೆಂಟ್ʼ ರಿಯಾಲಿಟಿ ಶೋ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಬಾಲಿವುಡ್ ಕಲಾವಿದರಾದ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್, ಇಶಾ ಸೇರಿದಂತೆ 6 ಮಂದಿ ಮಕ್ಕಳಿದ್ದಾರೆ. ಹೇಮಾ ಮಾಲಿನಿ ಮತ್ತು ಪ್ರಕಾಶ್ ಕೌರ್ ಪತ್ನಿಯರು.
ಹೇಮಾ ಮಾಲಿನಿ ಮತ್ತು ಧರ್ಮೇಂದ್ರ 1970ರಲ್ಲಿ ರಿಲೀಸ್ ಆದ ʼತುಮ್ ಹಸೀನ್ ಮೈ ಜವಾನ್ʼ ಚಿತ್ರದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಬಳಿಕ ಪ್ರೀತಿಸಿ 1980ರಲ್ಲಿ ವಿವಾಹವಾದರು. ಇದೀಗ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೀಗ ಧ್ರಮೇಂದ್ರ ತಮ್ಮ ಮೊದಲ ಪತ್ನಿ ಕಾಶ್ ಕೌರ್ ಜತೆಗಿದ್ದಾರೆ. ಈ ವಿಚಾರವನ್ನು ಇತ್ತೀಚೆಗೆ ಬಾಬ್ಬಿ ಡಿಯೋಲ್ ತಿಳಿಸಿದ್ದರು.