ʻದಿ ಗರ್ಲ್‌ಫ್ರೆಂಡ್ʼ ಸಕ್ಸಸ್‌ನ ನಂತರ ನಟ ದೀಕ್ಷಿತ್ ಶೆಟ್ಟಿ ಅವರು ಕನ್ನಡದಲ್ಲಿ ಮಿಂಚಲು ರೆಡಿಯಾಗಿದ್ದಾರೆ. 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಸಿನಿಮಾದಲ್ಲಿ ದೀಕ್ಷಿತ್ ನಟಿಸಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾವು ನವೆಂಬರ್ 21ರಂದು ತೆರೆಗೆ ಬರಬೇಕಿತ್ತು. ಆದರೆ ದಿಢೀರ್ ಅಂತ ಕೊನೇ ಕ್ಷಣದಲ್ಲಿ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಟೀಮ್‌ನಿಂದ ಹೊಸ ಅಪ್ಡೇಟ್ ಸಿಕ್ಕಿದ್ದು, ಈ ಚಿತ್ರವನ್ನು ನವೆಂಬರ್ 27ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಚಿತ್ರತಂಡ ಹೇಳಿದ್ದೇನು?
ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಮುಖ್ಯಭೂಮಿಕೆಯ ʻಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ಸಿನಿಮಾಗೆ ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ಅಭಿಷೇಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಮ್ಮ ಸಂಸ್ಥೆ ಇಲ್ಲಿಯವರೆಗೆ ಮಾಡಿರೋ ಎಲ್ಲಾ ಚಿತ್ರಗಳಲ್ಲಿ ಹೊಸ ನಿರ್ದೇಶಕರುಗಳಿಗೆ ಅವಕಾಶ ಕೊಡುತ್ತಾ ಬಂದಿದೆ. ಅದರ ಬಗ್ಗೆ ನಮಗೆ ಹೆಮ್ಮೆಯೂ ಇದೆ. ಆದರೀಗ "ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ" ಚಿತ್ರವನ್ನು ಅಂದುಕೊಂಡ ದಿನಾಂಕಕ್ಕೆ ಅಂದರೆ ನವೆಂಬರ್ 21ಕ್ಕೆ ತೆರೆಗೆ ತರಲು ಆಗುತ್ತಿಲ್ಲ. ಈ ಬಗ್ಗೆ ಕನ್ನಡ ಚಿತ್ರಪ್ರೇಮಿಗಳಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
ನಿರ್ಮಾಪಕರು ಹೇಳಿದ್ದೇನು?
"ಕೆಲ ತಾಂತ್ರಿಕ ಕೆಲಸಗಳ ವಿಳಂಬದಿಂದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾದ ರಿಲೀಸ್ ಅನ್ನು ಒಂದು ವಾರ ಮುಂದೂಡುತ್ತಿದ್ದೇವೆ. ಇದೇ ನವೆಂಬರ್ 27ರ ಗುರುವಾರದಂದು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಬಿಡುಗಡೆ ಆಗುತ್ತಿದ್ದು, ಎಂದಿನಂತೆ ನಿಮ್ಮ ಪ್ರೀತಿ, ಸಹಕಾರ ಹಾಗೂ ಪ್ರೋತ್ಸಾಹ ಇರಲಿ" ಎಂದು ನಿರ್ಮಾಪಕ ಎಚ್ ಕೆ ಪ್ರಕಾಶ್ ತಿಳಿಸಿದ್ದಾರೆ.
‘ಶ್ರೀ ದೇವಿ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’, ‘ಕಥಾಸಂಗಮ’, ‘ಸ್ಪೂಕಿ ಕಾಲೇಜ್’ನಂತಹ ಸಿನಿಮಾಗಳು ತಯಾರಾಗಿವೆ. ಇದೀಗ ಈ ಬ್ಯಾನರ್ ನಿಂದ ಐದನೇ ಕಾಣಿಕೆಯಾಗಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾ ಮೂಡಿಬಂದಿದೆ.
"ನಾನು ನಟಿಸಿದ್ದ ʻದಿಯಾʼ ಹಾಗೂ ʻಬ್ಲಿಂಕ್ʼ ಸಿನಿಮಾಗಳಿಗೆ ಕನ್ನಡ ಸಿನಿಪ್ರಿಯರು ನೀಡಿದ ಪ್ರೋತ್ಸಾಹ ಅಪಾರ. ನನಗೆ ಬೇರೆಬೇರೆ ಜಾನರ್‌ನ ಸಿನಿಮಾಗಳಲ್ಲಿ ನಟಿಸಬೇಕೆಂಬ ಬಯಕೆ ಇದೆ. ಅದರಂತೆ ಹಿಂದಿನ ಚಿತ್ರಗಳ ಜಾನರ್ ಬೇರೆ ರೀತಿ ಇದೆ. ಈಗ ಮಾಡಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾದ ಜಾನರ್ ಬೇರೆ ಇದೆ. ನಮ್ಮ ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಇನ್ನೂ, ನವೆಂಬರ್ 27 ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಎಲ್ಲರೂ ಥಿಯೇಟರ್‌ಗೆ ಹೋಗಿ ನೋಡಿ" ಎಂದು ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ, ವಿನುತ್, ನಟಿ ಉಷಾ ಭಂಡಾರಿ ಮುಂತಾದವರು ನಟಿಸಿದ್ದಾರೆ.