ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಗೋವಾ ಚಲನಚಿತ್ರೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವಕೋಲದ ದೃಶ್ಯವನ್ನು ಅಣಕಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಸಂಬಂಧ ಅವರೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯೊಂದಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಬಾಲಿವುಡ್‌ ನಟ ರಣವೀರ್ ಸಿಂಗ್ ಅವರು ಮಂಗಳವಾರ (ಮೇ 26) ಮುಂಜಾನೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 'ಕಾಂತಾರ' ಚಿತ್ರದ ದೈವದ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರು ಈ ಭೇಟಿ ನೀಡಿದ್ದಾರೆ. ಚಾಮುಂಡೇಶ್ವರಿ ದೇವಿಯ ಎದುರು ಭಕ್ತಿಯಿಂದ ಕ್ಷಮೆಯಾಚಿಸಿದ್ದಾರೆ.

ಹೈಕೋರ್ಟ್ ಆದೇಶ ಏನು?

ಕಳೆದ 2025ರ ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರದ ಪ್ರಸಿದ್ಧ 'ದೈವಕೋಲ'ದ ದೃಶ್ಯವನ್ನು ವೇದಿಕೆಯ ಮೇಲೆ ಅಣಕಿಸಿದ್ದರು (ಮಿಮಿಕ್ರಿ). ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಕನ್ನಡಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು ಮತ್ತು ನಟನ ವಿರುದ್ಧ ಎಫ್‌ಐಆರ್ (FIR) ಕೂಡ ದಾಖಲಾಗಿತ್ತು. ಆ ಬಳಿಕ ರಣವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರು.

Don 3 Movie: ʻಧುರಂಧರ್‌ʼ ಹೀರೋ ರಣವೀರ್ ಸಿಂಗ್‌ಗೆ ಬಿಗ್‌ ಶಾಕ್! ಚಿತ್ರರಂಗದಿಂದಲೇ ನಿಷೇಧ, ಯಾಕಿಂಥ ನಿರ್ಧಾರ?

ಸೀದಾ ಮೈಸೂರಿಗೆ ಬಂದ ರಣವೀರ್‌ ಸಿಂಗ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ನೀಡಿದ್ದ ಪರಿಷ್ಕೃತ ಪ್ರಮಾಣಪತ್ರ ಮತ್ತು ಬೇಷರತ್ ಕ್ಷಮಾಪಣೆಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್, ಪ್ರಕರಣವನ್ನು ಇತ್ಯರ್ಥಪಡಿಸುವ ಮುನ್ನ ನಾಲ್ಕು ವಾರಗಳ ಒಳಗಾಗಿ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವಂತೆ ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ರಣವೀರ್ ಸಿಂಗ್ ಮಂಗಳವಾರ ಮುಂಜಾನೆ ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರಿಗೆ ಆಗಮಿಸಿ, ಅತ್ಯಂತ ರಹಸ್ಯವಾಗಿ ದೇವಸ್ಥಾನ ಪ್ರವೇಶಿಸಿ ಗರ್ಭಗುಡಿಯೊಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಧ್ಯಮ ಕಣ್ಣಿಗೆ ಬೀಳದಂತೆ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು.‌ ದೇವಸ್ಥಾನದಲ್ಲಿ ಅವರು ದೇವಿಗೆ ಕೈಮುಗಿಯುತ್ತಿರುವ ಫೋಟೋಗಳು ವೈರಲ್‌ ಆಗಿವೆ.

ನಿನ್ನೆಯಷ್ಟೇ ಬ್ಯಾನ್‌ ಆಗಿರುವ ನಟ

ಅಂದಹಾಗೆ, ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ಕಾರಣ ನಿರ್ಮಾಪಕರಿಗೆ ಸುಮಾರು 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ (FWICE) ಸಂಸ್ಥೆಯು ರಣವೀರ್‌ ವಿರುದ್ಧ ಮೇ 25ರಂದು Non-cooperation directive ಹೊರಡಿಸಿದೆ.

ಇದಾದ ಮರುದಿನವೇ ಈ ದೇವಸ್ಥಾನದ ಭೇಟಿ ನಡೆದಿದೆ. ಸದ್ಯ ಫೆಡರೇಶನ್ ಆದೇಶದ ಪ್ರಕಾರ ಚಿತ್ರರಂಗದ ಯಾವುದೇ ಕಾರ್ಮಿಕರು ಅಥವಾ ತಂತ್ರಜ್ಞರು ರಣವೀರ್ ಜೊತೆ ಕೆಲಸ ಮಾಡುವಂತಿಲ್ಲ.

ರಣವೀರ್ ಟೀಮ್‌ ಹೇಳಿದ್ದೇನು?

ಈ ಚಿತ್ರೋದ್ಯಮದ ನಿಷೇಧದ ಕುರಿತು ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ರಣವೀರ್ ಅವರು ಇಂತಹ ವದಂತಿಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅವರ ಗಮನವೆಲ್ಲಾ ಪ್ರಸ್ತುತ ತಮ್ಮ ಕೆಲಸ ಮತ್ತು ಮುಂದಿನ ಸಿನಿಮಾಗಳ ಮೇಲಷ್ಟೇ ಇದೆ. 'ಡಾನ್ 3' ಚಿತ್ರತಂಡದ ಬಗ್ಗೆ ಅವರಿಗೆ ಸದಾ ಗೌರವವಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತಾರೆ" ಎಂದು ತಿಳಿಸಿದ್ದಾರೆ.