ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ರಣಭೇರಿ ಬಾರಿಸುತ್ತಿದೆ. ಈ ಚಿತ್ರವು ಈವರೆಗೂ ದಾಖಲೆ ಮೊತ್ತವನ್ನು ಕಲೆ ಹಾಕಿದೆ. ಚಿತ್ರತಂಡವೇ ಹೇಳಿಕೊಂಡಿರುವ ಪ್ರಕಾರ, ಭಾರತದಲ್ಲೇ ʻಧುರಂಧರ್ʼ ಸಿನಿಮಾವು 479.50 ಕೋಟಿ ರೂ. ಗಳಿಸಿದೆ.
14 ದಿನಗಳಲ್ಲಿ ಆದ ಗಳಿಕೆ ಎಷ್ಟು?
ʻಧುರಂಧರ್ʼ ಸಿನಿಮಾವು ಕಳೆದ 14 ದಿನಗಳಲ್ಲಿ ಭಾರತದಲ್ಲಿ ಸುಮಾರು 479.50 ಕೋಟಿ ರೂ. ಗಳಿಸಿದೆ. ಜೊತೆಗೆ ವಿಶ್ವಾದ್ಯಂತ ಆಗಿರುವ ಗಳಿಕೆಯನ್ನು ಲೆಕ್ಕ ಹಾಕಿದರೆ, ಆಗಲೇ ಈ ಚಿತ್ರದ ಗಳಿಕೆಯು 700 ಕೋಟಿ ರೂ. ದಾಟಿದೆ. ಇದೀಗ ಈ ಚಿತ್ರವು 2ನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಪುಷ್ಪ 2 ಸೇರಿದಂತೆ ಹಲವು ಸಿನಿಮಾಗಳ ದಾಖಲೆಗಳನ್ನು ದೊಡ್ಡ ಅಂತರದಿಂದ ಹಿಂದಿಕ್ಕಿದೆ. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆಯಾದ 15ನೇ ದಿನವಾದ ಇಂದು (ಡಿ.19) ಈ ಚಿತ್ರವು ಭಾರತದಲ್ಲಿ 500 ಕೋಟಿ ರೂ. ಗಡಿಯನ್ನು ದಾಟುವ ನಿರೀಕ್ಷೆಯಿದೆ.
ಇನ್ನು, ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಆರಂಭವಾಗುತ್ತಿರುವುದರಿಂದ ಚಿತ್ರದ ಗಳಿಕೆಗೆ ಭಾರಿ ಬೂಸ್ಟ್ ಸಿಗಲಿದೆ. ಈ ಯಶಸ್ಸಿನ ಓಟ ಹೊಸ ವರ್ಷದವರೆಗೂ ಮುಂದುವರಿಯುವ ಸಾಧ್ಯತೆಯಿದೆ.
ಕಾಂತಾರ ಚಿತ್ರದ ದಾಖಲೆ ಬ್ರೇಕ್ ಮಾಡೋದು ಯಾವಾಗ?
ಸದ್ಯಕ್ಕಂತೂ ಧುರಂಧರ್ ಚಿತ್ರದ ನಾಗಾಲೋಟ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ವಿಶ್ವಾದ್ಯಂತ 700 ಕೋಟಿ ರೂ. ಕ್ರಾಸ್ ಆಗಿದ್ದು, ಕಾಂತಾರ ಚಾಪ್ಟರ್ 1 ಚಿತ್ರದ ಗಳಿಕೆಯನ್ನು ಬ್ರೇಕ್ ಮಾಡಲು ಇನ್ನೂ 200+ ಕೋಟಿ ರೂ. ಕಲೆಕ್ಷನ್ ಆಗಬೇಕಿದೆ. ಹೌದು, ಕಾಂತಾರ ಚಾಪ್ಟರ್ 1 ಚಿತ್ರವು 900+ ಕೋಟಿ ರೂ. ಗಳಿಸಿ, ಈ ವರ್ಷ ಅತ್ಯಧಿಕ ಗಳಿಕೆ ಕಂಡ ಭಾರತದ ಸಿನಿಮಾಗಳ ಮೊದಲ ಸ್ಥಾನದಲ್ಲಿದೆ. ಅದನ್ನೀಗ ಧುರಂಧರ್ ಬ್ರೇಕ್ ಮಾಡಲಿದೆಯಾ ಎಂಬ ಪ್ರಶ್ನೆ ಎಲ್ಲರದ್ದು.
ಧುರಂಧರ್‌ಗೆ ಸಂಬಂಧಿಸಿದ ಫೋಸ್ಟ್
ಸದ್ಯದ ಸ್ಥಿತಿಯನ್ನು ಗಮನಿಸಿ, ಕಾಂತಾರ ದಾಖಲೆಯನ್ನು ಬ್ರೇಕ್ ಮಾಡುವುದರ ಜೊತೆಗೆ 1000 ಕೋಟಿ ರೂ. ಕ್ಲಬ್‌ಗೂ ಧುರಂಧರ್ ಸೇರುವ ನಿರೀಕ್ಷೆ ಇದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾ ದಿನಗಳು ಮುಗಿಯುವ ವೇಳೆಗೆ ಈ ಸಿನಿಮಾ ವಿಶ್ವಾದ್ಯಂತ 1000 ಕೋಟಿ ರೂ. ಗಳಿಸುವ ಎಲ್ಲಾ ಸಾಧ್ಯತೆಗಳಿವೆ.
Deepika Padukone: ಹೀಗಿದ್ದಾಳೆ ನೋಡಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್
ವಿದೇಶದಲ್ಲೂ ಗುಡ್ ರೆಸ್ಪಾನ್ಸ್
ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಲಿವುಡ್‌ನ ಟಾಪ್ 5 ವಿದೇಶಿ ಗಳಿಕೆಯ ಸಿನಿಮಾಗಳ ಪಟ್ಟಿಗೆ ಸೇರುವ ಹಾದಿಯಲ್ಲಿದೆ. ಇನ್ನು, ಭಾರತದಲ್ಲಿ ಈ ಚಿತ್ರವು ಮೊದಲ ವಾರ 218 ಕೋಟಿ ರೂ. ಗಳಿಕೆ ಮಾಡಿತ್ತು, ಆದರೆ ಎರಡನೇ ವಾರ 261.50 ಕೋಟಿ ರೂ. ಗಳಿಸಿ, ಹೊಸ ದಾಖಲೆ ಬರೆದಿದೆ. ಮೊದಲ ವಾರಕ್ಕಿಂತ ಎರಡನೇ ವಾರವೇ ಜಾಸ್ತಿ ಕಲೆಕ್ಷನ್ ಆಗಿದೆ.