ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rachita Ram: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಚಿತಾ ರಾಮ್‌ಗೆ ಸುತ್ತಿಕೊಂಡ ವಿವಾದ; ನಟ ಪುನೀತ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯ್ತು ಆ ಹೇಳಿಕೆ

ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ನಟಿ ರಚಿತಾ ರಾಮ್ ಗುರಿಯಾಗಿದ್ದಾರೆ. ಈ ಮೂಲಕ ಏನೋ ಮಾತನಾಡಲು ಹೋಗಿ ಇನ್ನೇನೊ ಎಡವಟ್ಟನ್ನು ಮಾಡಿಕೊಂಡಿದ್ದಾರೆ. ಇದೀಗ ನಟ ಪುನೀತ್ ಫ್ಯಾನ್ಸ್ ರಚ್ಚು ವಿಚಾರದಲ್ಲಿ ಫುಲ್ ಗರಂ ಆಗಿದ್ದಾರೆ‌. ಅಷ್ಟಕ್ಕೂ ಆಗಿದ್ದಾದರೂ ಏನು?

Rachita Ram

ಬೆಂಗಳೂರು: ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಎಂದಾಗ ನಮಗೆಲ್ಲ ಮೊದಲು ನೆನಪಾಗುವ ಹೆಸರೆ ನಟಿ ರಚಿತಾ ರಾಮ್ (Rachita Ram) ಅವರದ್ದು. ʼಬುಲ್ ಬುಲ್ʼ, ʼರನ್ನʼ, ʼಚಕ್ರವ್ಯೂಹʼ, ʼಮಾನ್ಸೂನ್ ರಾಗʼ, ʼಏಕ್ ಲವ್ ಯಾʼ, ʼನಟ ಸಾರ್ವಭೌಮʼ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ನಟಿಸಿರುವ ರಚಿತಾ ರಾಮ್ ಕನ್ನಡದ ಟಾಪ್‌ ನಾಯಕಿಯರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೇ ರಚಿತಾ ರಾಮ್ ಇತ್ತೀಚಿನ ದಿನದಲ್ಲಿ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಪಾಲಿಗೆ ನಟಿ ರಚಿತಾ ರಾಮ್ ಕನ್ನಡದ ಲೇಡಿ ಸೂಪರ್ ಸ್ಟಾರ್ ಎಂದೆ ಪ್ರಸಿದ್ಧ. ಅಕ್ಟೋಬರ್‌ 3ರಂದು ಅವರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳು ಅವರನ್ನು ಭೇಟಿಯಾಗಿ ಶುಭ ಕೋರಿ ಕೇಕ್ ಕಟ್ ಕೂಡ ಮಾಡಿದ್ದಾರೆ‌. ಬಳಿಕ ಅಭಿಮಾನಿಗಳ ಜತೆಗೆ ಸೆಲ್ಫಿಗೆ ಪೋಸ್ ನೀಡಿ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಈ ವೇಳೆ ಬಾಯ್ತಪ್ಪಿ ಅವರು ಹೇಳಿದ ಒಂದು ಮಾತು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಮೂಲಕ ಏನೋ ಮಾತನಾಡಲು ಹೋಗಿ ಇನ್ನೇನೊ ಎಡವಟ್ಟನ್ನು ರಚ್ಚು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ ಏನು?

ಮಾತನಾಡುವ ಭರದಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಪರೋಕ್ಷವಾಗಿ ಅವರು ಹೇಳಿಕೆ ನೀಡಿದ್ದಾರೆ. ಬದುಕಿರುವಾಗಲೇ ಹೆಸರು ಬರಬೇಕು ಎಂಬ ಅರ್ಥದಲ್ಲಿ ಅವರು ಹೇಳಿದ್ದ ಹೇಳಿಕೆ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಚಿತಾ ರಾಮ್‌ ಹೇಳಿಕೆಯ ವಿಡಿಯೊ ಇಲ್ಲಿದೆ:



ರಚಿತಾ ರಾಮ್ ಮಾತನಾಡಿ, ʼʼಅಭಿಮಾನಿಗಳು ನನ್ನ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದು ಕಂಡರೆ ನಿಜಕ್ಕೂ ಖುಷಿಯಾಗುತ್ತದೆ. ಈ ಮಾತನ್ನು ಈ ಸಂದರ್ಭದಲ್ಲಿ ನಾನು ಹೇಳಬಾರದು, ಆದರೂ ಇಂದು ನನಗೆ ಹೇಳಬೇಕು ಎನಿಸುತ್ತಿದೆ. ನಮ್ಮ ಜೀವ ಹೋದ್ಮೇಲೆ ಅವಾರ್ಡ್ಸ್ ಬರುತ್ತೆ, ನಮಗೆ ಒಂದು ಕಿರೀಟ ಇಡುತ್ತಾರೆ, ನಮ್ಮ ಸಾಧನೆ ಗುರುತಿಸುತ್ತಾರೆ. ಆದರೆ ನನಗೆ ಬದುಕಿರುವಾಗಲೇ ಇವರೆಲ್ಲರ ಪ್ರೀತಿ ಸಿಕ್ಕಿದೆ. ಹೆಸರು ಬರುತ್ತಿದೆ. ಈ ಬಗ್ಗೆ ಖುಷಿ ಇದೆʼʼ ಎಂದು ಹೇಳಿದ್ದಾರೆ.

ಇದನ್ನು ಓದಿ:Rachita Ram Birthday: ಆದಷ್ಟು ಶೀಘ್ರ ಮದುವೆಯಾಗುವೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ರಚಿತಾ ರಾಮ್

ಸದ್ಯ ಈ ಹೇಳಿಕೆಯು ನಟ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಗಳನ್ನು ಕೆರಳಿಸಿದೆ. ಅವರು ಪುನೀತ್ ರಾಜ್​ಕುಮಾರ್ ಅವರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಪ್ಪು ಅವಾರ್ಡ್ ತೆಗೆದುಕೊಳ್ಳುವಾಗ ನೀವು ಹುಟ್ಟಿರಲೇ ಇಲ್ಲ. ಮಾತಿನ ಮೇಲೆ ನಿಗಾ ಇರಲಿ ಎಂದು ಪುನೀತ್‌ ಅಭಿಮಾನಿಗಳು ನಟಿ ರಚಿತಾ ರಾಮ್ ವಿರುದ್ಧ ಕಿಡಿಕಾರಿದ್ದಾರೆ. ಆದರೆ ರಚಿತಾ ರಾಮ್ ಅಪ್ಪು ಕುರಿತಾಗಿ ಹೇಳಿಕೆ ನೀಡಿದ್ದಲ್ಲ. ಬದಲಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವಾಗಲೂ ಹೀಗಾಗುತ್ತದೆ ಎಂಬ ಅರ್ಥದಲ್ಲಿ ಹೇಳಿರುವುದಾಗಿ ರಚಿತಾ ರಾಮ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

ಒಟ್ಟಿನಲ್ಲಿ ನಟಿ ರಚಿತಾ ರಾಮ್ ತಮ್ಮ ಹೇಳಿಕೆಯಿಂದ ಪುನೀತ್ ಫ್ಯಾನ್ಸ್ ಕೋಪಕ್ಕೆ ಗುರಿಯಾಗುವಂತಾಗಿದೆ‌. ಈ ಹಿಂದೆ ನಟ ದರ್ಶನ್ ಕೂಡ ಇಂತಹದ್ದೇ ಹೇಳಿಕೆ ನೀಡಿ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಮುಂದಿನ ದಿನದಲ್ಲಿ ಈ ಬಗ್ಗೆ ನಟಿ ರಚಿತಾ ಸ್ಪಷ್ಟನೆ ನೀಡಬಹುದೆ ಎಂದು ಕಾದು ನೋಡಬೇಕಿದೆ. ನಟಿ ರಚಿತಾ ರಾಮ್ ʼಚಕ್ರವ್ಯೂಹʼ ಮತ್ತು ʼನಟ ಸಾರ್ವಭೌಮʼ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ತೆರೆ ಹಂಚಿಕೊಂಡಿದ್ದರು.