ಸ್ಯಾಂಡಲ್‌ವುಡ್ ನಟ ದಿಗಂತ್ ಅಭಿನಯದ ʻರುದ್ರ ಕಾಲʼ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ನಾಯಕಿಯಾಗಿ ಹೆಬಾ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ʻಅಧ್ಯಕ್ಷʼ ಸಿನಿಮಾದಲ್ಲಿ ಮಿಂಚಿದ್ದ ಹೆಬಾ, ಇದೀಗ ಮತ್ತೊಮ್ಮೆ ʻರುದ್ರ ಕಾಲʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.
ದಿಗಂತ್ ಏನಂದ್ರು?
"ನಾನು ಕಳೆದ ವರ್ಷ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಆದರೆ ಚಿತ್ರರಂಗದ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ಆ ಎರಡೂ ಚಿತ್ರಗಳು ಇನ್ನೂ ಆರಂಭವಾಗಿಲ್ಲ. ಆದರೆ, ರುದ್ರ ಕಾಲ ನಿರ್ಮಾಪಕರು ರಮೇಶ್ ನಾಯ್ಕ್ ಅವರು ಚಿತ್ರವನ್ನು ಆರಂಭ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ. ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಇದು ಬಹಳ ಇಷ್ಟವಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಗರಾಜ್ ಭಟ್ ಅವರು ಬಂದು ಚಿತ್ರಕ್ಕೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ" ಎನ್ನುತ್ತಾರೆ ದಿಗಂತ್.
"ನಾನು ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ʻರುದ್ರ ಕಾಲʼ ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಇದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಮೋಷನ್ ಕಥಾಹಂದರ ಹೊಂದಿರುವ ಚಿತ್ರದ ಶೀರ್ಷಿಕೆಯನ್ನು ನಟಿ ಸಮಂತ ಅನಾವರಣ ಮಾಡಿಕೊಟ್ಟಿದ್ದರು. ನನ್ನ ಸಹೋದರ ರಮೇಶ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದಿಗಂತ್ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಗೋಪಿ.
Rudra Kala Movie: ʻದೂಧ್ ಪೇಡಾʼ ದಿಗಂತ್ ಹೊಸ ಸಿನಿಮಾಗೆ ʻಸ್ಟಾರ್ʼ ನಟಿ ಸಮಂತಾ ಸಾಥ್
ದಿಗಂತ್, ಹೆಬಾ ಪಟೇಲ್ ಜೊತೆಗೆ ವಂಶಿ, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಚನ್ನಯ್ಯ ಸಾಹಸ ನಿರ್ದೇಶನವಿರುವ ಈ ಚಿತ್ರವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ದಾರೆ. ರಂಜಿತ ನವೀನ್ ಸಹ ನಿರ್ಮಾಪಕರು. ಮೇ ತಿಂಗಳಲ್ಲಿ ಬೆಂಗಳೂರಿನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.