ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಚೀಟರ್ ಮಲ್ಲು ಎಂಬ ಫ್ರಾಡ್..ʼ; ದರ್ಶನ್‌ ಮಾಜಿ ಮ್ಯಾನೇಜರ್‌ ಮೇಲೆ ದಿನಕರ್‌ ತೂಗುದೀಪ ಆಕ್ರೋಶ

ಈಚೆಗೆ ದಿಢೀರ್‌ ಅಂತ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರನ್ನು ನಿರ್ದೇಶಕ ದಿನಕರ್ ತೂಗುದೀಪ 'ಮೋಸಗಾರ' ಎಂದು ಕರೆದಿದ್ದಾರೆ. ದರ್ಶನ್ ಮತ್ತು ತೂಗುದೀಪ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಲ್ಲಿಕಾರ್ಜುನ್ ಅನೇಕರಿಗೆ ವಂಚಿಸಿದ್ದಾನೆ ಎಂದು ದಿನಕರ್ ಗಂಭೀರ ಆರೋಪ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಒಂದು ಪತ್ರಿಕಾಗೋಷ್ಠಿ ಮಾಡಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ನಾನು ಊರು ಬಿಡಬೇಕಾಯಿತು. ಏಳು ವರ್ಷ ಅಜ್ಞಾತವಾಸದಲ್ಲಿದ್ದು, ಈಗ ವಾಪಸ್‌ ಬಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಜೊತೆಗೆ ತೂಗುದೀಪ ಪ್ರೊಡಕ್ಷನ್ಸ್ ನನಗೆ ಅನ್ನವಿಟ್ಟ ಸಂಸ್ಥೆ‌ ಅಂತಲೂ ಹೇಳಿದ್ದರು. ಆದರೆ ಇದೀಗ ಅದೇ ತೂಗುದೀಪ ಸಂಸ್ಥೆಯ ದಿನಕರ್‌ ಅವರು ಮಲ್ಲಿಕಾರ್ಜುನ್‌ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಚೀಟರ್‌ ಅಂತ ಕರೆದಿದ್ದಾರೆ.

ಹಣ ಪಡೆದು ವಂಚನೆ

ಹೌದು, ದಿಢೀರ್‌ ಅಂತ ಪ್ರತ್ಯಕ್ಷವಾಗಿರುವ ಮಲ್ಲಿಕಾರ್ಜುನ್‌ ಬಗ್ಗೆ ದೀರ್ಘವಾದ ಪೋಸ್ಟ್‌ವೊಂದನ್ನು ದಿನಕರ್‌ ತೂಗುದೀಪ ಬರೆದುಕೊಂಡಿದ್ದಾರೆ. "ಮಲ್ಲಿಕಾರ್ಜುನ್ ಗದಗ ಅಲಿಯಾಸ್ ಚೀಟರ್ ಮಲ್ಲು ಎಂಬ ಫ್ರಾಡ್ ಎಂಟು ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ ನನ್ನ ಹೆಸರನ್ನು, ದರ್ಶನ್ ರವರ ಹೆಸರನ್ನು ಮತ್ತು ನಮ್ಮ ತೂಗುದೀಪ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕ ವ್ಯಕ್ತಿಗಳ ಬಳಿ ಸುಳ್ಳು ಹೇಳಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ" ಎಂದು ಬರೆದುಕೊಂಡಿದ್ದಾರೆ.‌

ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸುಳ್ಳು ಹೇಳಿದ್ರಾ? ತೂಗುದೀಪ ಮಾಜಿ ಅಕೌಂಟೆಂಟ್ ದೀಪಕ್ ಗಂಗಾಧರ್‌ ಬಿಚ್ಚಿಟ್ಟ ರಹಸ್ಯವೇನು?

ದರ್ಶನ್ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ

"ಈಗ ದಿಢೀರನೆ ಪ್ರತ್ಯಕ್ಷನಾಗಿ 16-04-2026 ರಂದು ಪತ್ರಿಕಾಗೋಷ್ಠಿ ನಡೆಸಿರುತ್ತಾನೆ. ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿರುತ್ತಾನೆ. ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತವಾಯಿತು ಎಂದು ಹೇಳಿರುವುದಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ರವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ. ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು"

ದಿನಕರ್‌ ತೂಗುದೀಪ ಅವರ ಪೋಸ್ಟ್



ಇವನ ಮಾತನ್ನು ನಂಬಿ ಮೋಸ ಹೋಗಬೇಡಿ

"ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ. ಅದನ್ನು ಪಡೆಯಲು ಈತ ಹೇಳುವುದೇ ಕಟ್ಟುಕತೆಗಳು. ಇವನನ್ನು ಯಾರು ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ರವರು ಯಾರು ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಈತ ಎಲ್ಲಾದರೂ ನಮ್ಮಗಳ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ, ಯಾಮಾರಬೇಡಿ... ದರ್ಶನ್ ರವರ ಹೆಸರನ್ನು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರವಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗಬೇಡಿ" ಎಂದು ದಿನಕರ್‌ ತೂಗುದೀಪ ಬರೆದುಕೊಂಡಿದ್ದಾರೆ.