ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಮತ್ತು ಶುಭ್ರಾ ಶೆಟ್ಟಿ ಕಳೆದ ಸುಮಾರು ಒಂದು ದಶಕದಿಂದ ಪ್ರೀತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಈ ಜೋಡಿ ತಮ್ಮ ಸುದೀರ್ಘ ಸಂಬಂಧ, ವಯಸ್ಸಿನ ಅಂತರದ ಕುರಿತಾದ ಟೀಕೆಗಳು ಮತ್ತು ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಮದುವೆ ಮೇಲೆ ನಂಬಿಕೆಯಿಲ್ಲ" ಎಂದು ಕಡ್ಡಿಮುರಿದಂತೆ ಹೇಳಿದ್ಧಾರೆ.
ಈ ಪ್ರೀತಿ ಇರುವವರೆಗೂ ನಾನು ಖುಷಿಯಾಗಿರುತ್ತೇನೆ
"ಶುಭ್ರಾಗೆ ಮದುವೆ ಬಗ್ಗೆ ನಂಬಿಕೆಯಿಲ್ಲ. ನಾನು ಅವರೊಂದಿಗೆ ಇರುವುದರಿಂದ ಅತ್ಯಂತ ಸಂತೋಷವಾಗಿದ್ದೇನೆ, ಯಾವುದೇ ಪರಿಸ್ಥಿತಿಯಲ್ಲೂ ಅವರ ಜೊತೆ ಇರಲು ಬಯಸುತ್ತೇನೆ. ವಯಸ್ಸಾದ ವ್ಯಕ್ತಿಗೆ ಇರುವ ಅಭದ್ರತೆಯೇನು? ನಾನು ಪ್ರೀತಿಸುವ ಜನರಿಗಿಂತ ಹೆಚ್ಚು ಕಾಲ ಬದುಕುವಷ್ಟು ಆರೋಗ್ಯವಾಗಿರಲು ಬಯಸುತ್ತೇನೆ. ನಮಗೆ ಈಗ ಸಿಕ್ಕಿರುವ ಈ ಪ್ರೀತಿ ಇರುವವರೆಗೂ ನಾನು ಖುಷಿಯಾಗಿರುತ್ತೇನೆ ಮತ್ತು ಇದನ್ನು ಕಳೆದುಕೊಳ್ಳಲು ಬಯಸುವುದಿಲ್ಲ" ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ನಾನು ಸಾಯಲು ಬಯಸುವುದಿಲ್ಲ
ತಮ್ಮ ಸಂಬಂಧದ ಆರಂಭಿಕ ದಿನಗಳ ಭಾವನಾತ್ಮಕ ಕ್ಷಣವನ್ನು ನೆನಪಿಸಿಕೊಂಡ ಶುಭ್ರಾ ಶೆಟ್ಟಿ, "ಒಮ್ಮೆ ನಾನು ತಮಾಷೆಯಾಗಿ, ಪ್ರೀತಿಸುವುದು ನನ್ನ ಬಕೆಟ್ ಲಿಸ್ಟ್‌ನಲ್ಲಿತ್ತು, ಈಗ ಅದನ್ನು ಅನುಭವಿಸಿದ ನಂತರ ಸಂತೋಷವಾಗಿ ಸಾಯಬಹುದು ಎಂದು ಹೇಳಿದ್ದೆ. ಇದನ್ನು ಕೇಳಿ ಅನುರಾಗ್ ಕಣ್ಣೀರು ಹಾಕಿದ್ದರು. ಜೀವನದಲ್ಲಿ ಮೊದಲ ಬಾರಿಗೆ ಬದುಕುವುದಕ್ಕೆ ಅರ್ಥ ಸಿಕ್ಕಿರುವುದರಿಂದ ನಾನು ಸಾಯಲು ಬಯಸುವುದಿಲ್ಲ ಎಂದು ಅನುರಾಗ್ ಭಾವುಕರಾಗಿ ಹೇಳಿದ್ದರು" ಎಂದು ತಿಳಿಸಿದ್ದಾರೆ.
ಅನುರಾಗ್‌ಗೆ 53, ಶುಭ್ರಾಗೆ 30 ವರ್ಷ
ಇಬ್ಬರ ನಡುವಿನ ವಯಸ್ಸಿನ ಅಂತರ ಮತ್ತು ಅದರಿಂದ ಎದುರಿಸಿದ ಟೀಕೆಗಳ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, "ಪ್ರಸ್ತುತ ಇದು ತಮ್ಮನ್ನು ಕಾಡುತ್ತಿಲ್ಲವಾದರೂ, ಆರಂಭದಲ್ಲಿ ಸಾಕಷ್ಟು ಹಿಂಜರಿಕೆ ಇತ್ತು ಎಂದಿದ್ದಾರೆ. ತಮಗೆ ವಯಸ್ಸಾಗುತ್ತಿದ್ದರೂ ಶುಭ್ರಾ ಮುಖದಲ್ಲಿ ವಯಸ್ಸಾದಂತೆ ಕಾಣದಿರುವುದು ಒಂದು ಹಂತದಲ್ಲಿ ಮುಜುಗರ ತಂದಿತ್ತು. ಆಗ ಈ ಸಂಬಂಧವನ್ನು ದೂರ ತಳ್ಳಲು ಪ್ರಯತ್ನಿಸಿದ್ದೆ" ಎಂದಿದ್ದಾರೆ. ಪ್ರಸ್ತುತ 53 ವರ್ಷದ ಅನುರಾಗ್ ಕಶ್ಯಪ್ ಅವರೊಂದಿಗೆ 30ರ ಹರೆಯದ ಶುಭ್ರಾ ಶೆಟ್ಟಿ ಅನ್ಯೋನ್ಯವಾಗಿದ್ದಾರೆ.
8 Kannada Movie: ಬಾಲಿವುಡ್‌ನ ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್ ರಿಲೀಸ್
ಎರಡು ಬಾರಿ ವಿಚ್ಛೇದನ
ಶುಭ್ರಾ ಶೆಟ್ಟಿ ಅವರು ಈ ಹಿಂದೆ ಅನುರಾಗ್ ಅವರ ನಿರ್ಮಾಣ ಸಂಸ್ಥೆಯಾದ 'ಫ್ಯಾಂಟಮ್ ಫಿಲ್ಮ್ಸ್'ನಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2015 ರಲ್ಲಿ ಇವರಿಬ್ಬರ ಫೋಟೋಗಳು ಬಹಿರಂಗಗೊಂಡ ನಂತರ, 2018 ರಲ್ಲಿ ಅನುರಾಗ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಈ ಹಿಂದೆ ಫಿಲ್ಮ್ ಎಡಿಟರ್ ಆರತಿ ಬಜಾಜ್ ಅವರನ್ನು ವಿವಾಹವಾಗಿ 2009ರಲ್ಲಿ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಆಲಿಯಾ ಕಶ್ಯಪ್ ಎಂಬ ಮಗಳಿದ್ದಾಳೆ. ಬಳಿಕ 2011ರಲ್ಲಿ ನಟಿ ಕಲ್ಕಿ ಕೊಚ್ಲಿನ್ ಅವರನ್ನು ಮದುವೆಯಾಗಿದ್ದ ಅನುರಾಗ್, ನಾಲ್ಕು ವರ್ಷಗಳ ನಂತರ ಆ ದಾಂಪತ್ಯಕ್ಕೂ ವಿದಾಯ ಹೇಳಿದ್ದರು.