ತಮಿಳುನಾಡು ರಾಜಕೀಯಕ್ಕೂ ಸಿನಿಮಾರಂಗಕ್ಕೂ ಎಂತಹ ಸಂಬಂಧ ಇದೆ ಎಂಬುದು ಈಚೆಗಷ್ಟೇ ಮತ್ತೆ ಸಾಬೀತಾಗಿದೆ. ನಟ ವಿಜಯ್ ಮೊಲದ ಪ್ರಯತ್ನದಲ್ಲೇ ಸಿಎಂ ಆಗಿದ್ದಾರೆ. ಇದೀಗ ಮತ್ತೋರ್ವ ನಟ ರಾಜಕೀಯಕ್ಕೆ ಬರಬಹುದು ಎಂಬ ಮಾತುಗಳು ಕೇಳಿಬಂದಿವೆ. ಆ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ಆ ನಟನ ತಂದೆಯೇ ಎಂಬುದು ವಿಶೇಷ. ಅಂದಹಾಗೆ, ಆ ನಟ ಯಾರು? ಧನುಷ್!
ನಟ ನಿರ್ದೇಶಕ, ಗಾಯಕ, ನಿರ್ಮಾಪಕ ಹೀಗೆ ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಧನುಷ್ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ವದಂತಿಗಳು ಈಗ ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಧನುಷ್ ಅವರ ತಂದೆ, ಹಿರಿಯ ನಿರ್ದೇಶಕ ಕಸ್ತೂರಿ ರಾಜಾ ಇತ್ತೀಚೆಗೆ ನೀಡಿರುವ ಹೇಳಿಕೆಗಳು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತಂದಿವೆ.
Thalapathy Vijay: ನಟ ವಿಜಯ್-ಸಂಗೀತಾ ಡಿವೋರ್ಸ್ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್
ಧನುಷ್ ತಂದೆ ಹೇಳಿದ್ದೇನು?
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಸ್ತೂರಿ ರಾಜಾ ಅವರಿಗೆ "ಧನುಷ್ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆಯೇ?" ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಕಸ್ತೂರಿ ರಾಜಾ ಅವರು ಆ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಿಲ್ಲ. "ಯಾರೇ ಆದರೂ ಇಚ್ಛಿಸಿದರೆ ರಾಜಕೀಯಕ್ಕೆ ಪ್ರವೇಶಿಸುವ ಹಕ್ಕು ಅವರಿಗಿದೆ. ಬರುವುದಾದರೆ ಬರಲಿ, ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು, ಅದು ಅವರ ವೈಯಕ್ತಿಕ ಇಷ್ಟ. ಭವಿಷ್ಯದಲ್ಲಿ ಧನುಷ್ ಕೂಡ ರಾಜಕೀಯಕ್ಕೆ ಅಡಿಯಿಡಬಹುದು. ರಾಜಕೀಯ ಬೇಡ ಎಂದು ಹೇಳಲು ನಾವ್ಯಾರು? ನನಗೀಗ ವಯಸ್ಸಾಗಿದೆ, ಹಾಗಾಗಿ ನಾನಂತೂ ರಾಜಕೀಯಕ್ಕೆ ಬರುವುದಿಲ್ಲ. ಆದರೆ ನನ್ನ ಗಂಡು ಮಕ್ಕಳಾದ ಧನುಷ್, ಸೆಲ್ವರಾಘವನ್ ಬರಬಹುದು, ಅಥವಾ ನನ್ನ ಮೊಮ್ಮಕ್ಕಳು ಕೂಡ ಬರಬಹುದು" ಎಂದಿದ್ದಾರೆ.
ಕಸ್ತೂರಿ ರಾಜಾ ಅವರಿಂದ ಈ ಅಸ್ಪಷ್ಟ ಪ್ರತಿಕ್ರಿಯೆಯಿಂದಾಗಿ ಧನುಷ್ ಭವಿಷ್ಯದಲ್ಲಿ ಯಾವಾಗಲಾದರೂ ರಾಜಕೀಯಕ್ಕೆ ಕಾಲಿಡಬಹುದೇ ಎಂಬ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಟ ವಿಜಯ್ ರಾಜಕೀಯ ಪಕ್ಷ ಕಟ್ಟಿ ಜನರ ಮಧ್ಯೆ ಹೋಗಿರುವ ಮಾದರಿಯಲ್ಲೇ, ಧನುಷ್ ಸಹ ಬಹಳ ದಿನಗಳಿಂದ ತಮ್ಮ ಅಭಿಮಾನಿ ಸಂಘಗಳ ಮೂಲಕ ತಮಿಳುನಾಡಿನಾದ್ಯಂತ ವ್ಯಾಪಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಮುಖ್ಯವಾಗಿ ತಮ್ಮ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಬಡವರಿಗೆ ಹಲವು ರೀತಿಯ ನೆರವು ನೀಡುತ್ತಿದ್ದಾರೆ.
ಹಳೆಯ ದಿನಗಳನ್ನು ನೆನೆದು ಭಾವುಕರಾದ ತಂದೆ
ಇನ್ನು ತಮ್ಮ ಹಳೆಯ ದಿನಗಳು ಹಾಗೂ ಕುಟುಂಬದ ಕಷ್ಟಗಳನ್ನು ನೆನೆದ ಕಸ್ತೂರಿ ರಾಜಾ, "ಒಂದು ಕಾಲದಲ್ಲಿ ತೇನಿಯಿಂದ ಚೆನ್ನೈಗೆ ಬರಲು ನನ್ನ ಬಳಿ 50 ರೂಪಾಯಿ ಕೂಡ ಇರುತ್ತಿರಲಿಲ್ಲ, ಅಷ್ಟು ಕಷ್ಟ ದಿನಗಳನ್ನು ನೋಡಿದ್ದೇನೆ. 19ನೇ ವಯಸ್ಸಿನಲ್ಲೇ ಮದುವೆಯಾಯಿತು. ನನ್ನ ಪತ್ನಿ ವಿಜಯಲಕ್ಷ್ಮಿ ನೀಡಿದ ಬೆಂಬಲ ಮತ್ತು ಪ್ರೋತ್ಸಾಹದಿಂದಲೇ ಚೆನ್ನೈನಲ್ಲಿ ಕಷ್ಟಪಟ್ಟು ನಿರ್ದೇಶಕನಾಗಿ ನೆಲೆನಿಲ್ಲಲು ಸಾಧ್ಯವಾಯಿತು. ‘ತುಳ್ಳುವದೋ ಇಳಮೈ’ ಸಿನಿಮಾ ನಮ್ಮ ಕುಟುಂಬದ ಪರಿಸ್ಥಿತಿಯನ್ನೇ ಬದಲಾಯಿಸಿತು" ಎಂದಿದ್ದಾರೆ.
"ನನ್ನ ಮಗ ಹಿರಿಯ ಸೆಲ್ವರಾಘವನ್ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಆಗಲೇ ಅವನಿಗೆ ಸಿನಿಮಾಗೆ ಬರುವಾಸೆ, ಆಗ ಮೊದಲು ಓದು ಮುಗಿಸಲು ನಾನೇ ಹೇಳಿದ್ದೆ. ಇಂಜಿನಿಯರಿಂಗ್‌ನಲ್ಲಿ ಗೋಲ್ಡ್ ಮೆಡಲ್ ಪಡೆದ ಸೆಲ್ವರಾಘವನ್ ‘ಕಾದಲ್ ಕೊಂಡೇನ್’ ಚಿತ್ರದ ಮೂಲಕ ನಿರ್ದೇಶಕನಾದ. ಆ ಸಿನಿಮಾ ನಮ್ಮ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿತು. ನನ್ನ ಇಬ್ಬರು ಪುತ್ರಿಯರು ಪ್ರಸ್ತುತ ಚೆನ್ನೈನಲ್ಲಿ ಪ್ರಸಿದ್ಧ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ ಕಸ್ತೂರಿ ರಾಜಾ.