ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಜನ ನಾಯಗನ್‌ʼ ಅಲ್ಲ, ʻಈ ಸೂಪರ್‌ ಹಿಟ್‌ʼ ಸಿನಿಮಾದೊಂದಿಗೆ ʻದಳಪತಿʼ ವಿಜಯ್‌ ವೃತ್ತಿ ಬದುಕು ಮುಕ್ತಾಯವಾಗಬೇಕಿತ್ತು! ಏನಿದು ಹೊಸ ವಿಷ್ಯ?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಚಿತ್ರರಂಗ ತೊರೆಯುವ ಮುನ್ನ ತಿರಸ್ಕರಿಸಿದ್ದ ‘ಕರುಪ್ಪು’ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಸಿ ಅಬ್ಬರಿಸುತ್ತಿದೆ. ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾವಾಗಬೇಕಿತ್ತು ಎಂದು ನಿರ್ದೇಶಕ ಆರ್‌.ಜೆ. ಬಾಲಾಜಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ದಳಪತಿ ವಿಜಯ್‌ ಅವರು ಸದ್ಯ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ, ಅವರಿನ್ನೂ ಚಿತ್ರರಂಗದಲ್ಲಿ ಸಕ್ರಿಯವಾಗಿ ಮುಂದುವರಿಯೋದಿಲ್ಲ. ಅದಕ್ಕೆಂದೇ ಅವರು ಕೊನೆಯದಾಗಿ ಜನ ನಾಯಗನ್‌ ಸಿನಿಮಾದಲ್ಲಿ ನಟಿಸಿದ್ದರು. ವಿಪರ್ಯಾಸವೆಂದರೆ, ಐದು ತಿಂಗಳ ಹಿಂದೆಯೇ ತೆರೆಗೆಬರಬೇಕಿದ್ದ ಆ ಸನಿಮಾವಿನ್ನೂ ರಿಲೀಸ್‌ ಆಗಿಲ್ಲ. ಅಂದಹಾಗೆ, ಜನ ನಾಯಗನ್‌ಗೂ ಮುನ್ನ ಮತ್ತೊಂದು ಸಿನಿಮಾದ ಕಥೆಯನ್ನು ವಿಜಯ್‌ ಕೇಳಿದ್ದರು. ಆದರೆ, ಅದನ್ನವರು ರಿಜೆಕ್ಟ್‌ ಮಾಡಿದ್ದರು. ಆದರೆ ಅಂದು ವಿಜಯ್‌ ರಿಜೆಕ್ಟ್‌ ಮಾಡಿದ್ದ ಚಿತ್ರವೇ ಈಗ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. ಅದೇ ʻಕರುಪ್ಪುʼ ಸಿನಿಮಾ!

ವಿಷಯವನ್ನು ಬಹಿರಂಗಪಡಿಸಿದ ಬಾಲಾಜಿ

'ಕರುಪ್ಪು' ಕಥೆಯನ್ನು ಮೊದಲು ನಟ ವಿಜಯ್ ಅವರಿಗೆ ಹೇಳಲಾಗಿತ್ತು, ಅದೇ ಅವರ ಕೊನೆಯ ಸಿನಿಮಾವಾಗಬೇಕಿತ್ತು. ಅವರ ಕೊನೆಯ ಸಿನಿಮಾವನ್ನಾಗಿ ಕರುಪ್ಪು ಮಾಡಬೇಕೆಂದು ಈ ‌ಸ್ಕ್ರಿಪ್ಟ್‌ ಬರೆದುಕೊಂಡಿದ್ದೆ ಎಂದು ನಿರ್ದೇಶಕ ಆರ್‌ಜೆ ಬಾಲಾಜಿ ಹೇಳಿದ್ದಾರೆ.

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!

ಈಚೆಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಆರ್‌ ಜೆ ಬಾಲಾಜಿ ನೀಡಿದ್ದಾರೆ. "ಕರುಪ್ಪು ಚಿತ್ರದ ಕಥೆಯನ್ನು ಸಿದ್ಧಪಡಿಸುವಾಗ ತಾವು ವಿಜಯ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೆ. ನಟ ವಿಜಯ್ ಅವರು ಚಿತ್ರರಂಗವನ್ನು ತೊರೆದು ರಾಜಕೀಯಕ್ಕೆ ಬರಲು ಸಿದ್ಧತೆ ನಡೆಸುತ್ತಿದ್ದರಿಂದ, ಅವರ ಕೊನೆಯ ಸಿನಿಮಾ ಹೇಗಿರಬೇಕು ಎಂಬ ಬಗ್ಗೆಯೂ ಇಬ್ಬರ ನಡುವೆ ಸುದೀರ್ಘ ಚರ್ಚೆ ನಡೆದಿತ್ತು. ಹೀಗಾಗಿ ನಾವು ಎರಡು-ಮೂರು ಬಾರಿ ಭೇಟಿಯಾಗಿ ಸಾಕಷ್ಟು ಸಮಯ ಚರ್ಚೆ ನಡೆಸಿದ್ದೆವು." ಎಂದು ಬಾಲಾಜಿ ಹೇಳಿದ್ದಾರೆ.

ವಿಜಯ್‌ ನೀಡಿದ ಕಾರಣಗಳು ಸೂಕ್ತವಾಗಿದ್ದವು

"ವಿಜಯ್‌ ಅವರು ಈ ಚಿತ್ರವನ್ನು ಮಾಡದಿರಲು ನೀಡಿದ ಕಾರಣಗಳು ನನಗೆ ನ್ಯಾಯಯುತವಾಗಿ ಅನಿಸಿದವು. ನಾನು, 'ಸರ್, ನಿಮ್ಮ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ, ತುಂಬಾ ಧನ್ಯವಾದಗಳು' ಎಂದೆ. ಏಕೆಂದರೆ ಅಷ್ಟರಲ್ಲಾಗಲೇ ಅವರು ನನ್ನ ಬಳಿ ಬೇರೆ ಕಥೆ ಇದೆಯೇ ಎಂದು ಕೇಳಿದಾಗ ನಾನು ಅವರಿಗೆ ಎರಡು ಸಿನಿಮಾಗಳ ಕಥೆ ಹೇಳಿದ್ದೆ. ಅವರು ನನ್ನ ಕೆಲಸ ಮತ್ತು ನನ್ನ ಸೃಜನಶೀಲತೆಗೆ ನೀಡಿದ ದೊಡ್ಡ ಗೌರವ ಇದು ಎಂದು ನಾನು ಭಾವಿಸಿದೆ" ಎಂದು ಬಾಲಾಜಿ ಹೇಳಿದ್ದಾರೆ.

ವಿಜಯ್‌ ಸಲಹೆಗಳಿಂದ ಸ್ಕ್ರಿಪ್ಟ್‌ ಇನ್ನಷ್ಟು ಉತ್ತಮ

ಅಷ್ಟೇ ಅಲ್ಲದೆ, ವಿಜಯ್ ಅವರು ನೀಡಿದ ಸಲಹೆಗಳು ಚಿತ್ರಕಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡಿದವು ಎಂದು ಬಾಲಾಜಿ ತಿಳಿಸಿದ್ದಾರೆ. "ನಾನು ಕಥೆ ಹೇಳಿದ ನಂತರ ಅವರು ನನ್ನನ್ನು ಕೇಳಿದ ಸರಿಯಾದ ಪ್ರಶ್ನೆಗಳಿಂದಾಗಿ ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ಬದಲಾವಣೆ ಸಾಧ್ಯವಾಯಿತು. ಆ ಪ್ರಶ್ನೆಗಳು ನನ್ನ ಸಿನಿಮಾ ಮತ್ತು ಸ್ಕ್ರಿಪ್ಟ್ ಅನ್ನು ಮತ್ತಷ್ಟು ಉತ್ತಮಗೊಳಿಸಿದವು. ಹಾಗಾಗಿ, ಅವರು ಈ ಸಿನಿಮಾ ಮಾಡದಿದ್ದರೂ, ಆ ಚರ್ಚೆಗಳೇ ಕೊನೆಗೆ ನನ್ನನ್ನು ಈ ಮಟ್ಟದ ಸಿನಿಮಾ ಮಾಡಲು ಸಜ್ಜುಗೊಳಿಸಿದವು" ಎಂದು ಬಾಲಾಜಿ ತಿಳಿಸಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರದ ಗಳಿಕೆ

ವಿಜಯ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದ ನಂತರ, ಚಿತ್ರದ ನಿರ್ಮಾಪಕರು ಈ ಕಥೆಯನ್ನು ಸೂರ್ಯ ಅವರಿಗೆ ಹೇಳುವಂತೆ ಬಾಲಾಜಿ ಅವರಿಗೆ ಸಲಹೆ ನೀಡಿದರು. ಕಥೆ ಕೇಳಿದ ತಕ್ಷಣ ಸೂರ್ಯ ತಕ್ಷಣ ಒಪ್ಪಿಕೊಂಡರು. ಈಗಾಗಲೇ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಆಗಲೇ 250 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ.