ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ʼಪುಷ್ಪಕ ವಿಮಾನʼ, ʼಮನ್ಸೂನ್ ರಾಗʼದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್.ರವೀಂದ್ರನಾಥ್ (Ravindranath) ಈಗ ಮತ್ತೊಂದು ಚಿತ್ರ ಕೈಗೆತ್ತಿಗೊಂಡಿದ್ದಾರೆ. ಯುವ ಪ್ರತಿಭೆಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ತಮ್ಮ ಹೊಸ ಸಿನಿಮಾಕ್ಕೆ ʼಮ್ಯಾಡ್ನೆಸ್' (Madness Movie) ಎಂಬ ಟೈಟಲ್ ಇಟ್ಟಿದ್ದಾರೆ. ʼಮ್ಯಾಡ್ನೆಸ್ʼ ಮೂಲಕ ರವೀಂದ್ರನಾಥ್ ಕನ್ನಡ ಚಿತ್ರ ರಂಗಕ್ಕೆ ಶಿವಾಂಕ್ ಅವರನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಇದೀಗ ಈ ಸಿನಿಮಾ ಫಸ್ಟ್ ಲುಕ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದೆ.
ಈ ಸಿನಿಮಾಕ್ಕೆ ಯುವ ಪ್ರತಿಭೆ ಶಿವಾಂಕ್ ನಾಯಕನಾಗಿ ಆಯ್ಕೆ ಆಗಿದ್ದಾರೆ. ʼಪುಷ್ಪಕ ವಿಮಾನʼದಲ್ಲಿ ವಿಲನ್ ಖದರ್ ತೋರಿಸಿದ್ದ ಮತ್ತು ʼಮಾನ್ಸೂನ್ ರಾಗʼ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿ ಸಿದ್ದ ಶಿವಾಂಕ್ ಇದೇ ಮೊದಲ ಬಾರಿಗೆ ನಾಯಕ ಆಗಿ ತೆರೆಮೇಲೆ ಬರುತ್ತಿದ್ದಾರೆ.
ಇದನ್ನು ಓದಿ:Just Married Movie: ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಶಿಶುಪಾಲ’ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶ್ರೀಮನ್
ರವೀಂದ್ರನಾಥ್ ʼಪುಷ್ಪಕ ವಿಮಾನʼ ಚಿತ್ರದಲ್ಲಿ ಭಾವನಾತ್ಮಕ ಕಥೆ ಹೇಳಿ ಪ್ರೇಕ್ಷಕರ ಮನ ಗೆದ್ದಿದ್ದರು. 2017ರಲ್ಲಿ ತೆರೆಕಂಡಿದ್ದ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ರಮೇಶ್ ಅರವಿಂದ್ ಜತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದರು. ಇನ್ನೂ 'ಮಾನ್ಸೂನ್ ರಾಗ' ರವೀಂದ್ರನಾಥ್ ನಿರ್ದೇಶನದ 2ನೇ ಸಿನಿಮಾ. ಇದರಲ್ಲಿ ಡಾಲಿ ಧನಂಜಯ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳಿಗಿಂತ ಭಿನ್ನವಾಗಿ ಇದೀಗ ರವೀಂದ್ರನಾಥ್ ಆ್ಯಕ್ಷನ್ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾದ ಟೈಟಲ್ ಬಿಡುಗಡೆಯಾಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
ಆ್ಯಕ್ಷನ್ ಥ್ರಿಲ್ಲರ್ ʼಮ್ಯಾಡ್ನೆಸ್ʼ ಸಿನಿಮಾಕ್ಕೆ ನಿಧಿ ಫಿಲ್ಮಸ್‌ನಡಿ ಯತೀಂದ್ರ ಬಿ. ಬಂಡವಾಳ ಹೂಡಿ ದ್ದಾರೆ. ಶಿವಾಂಕ್‌ಗೆ ಜೋಡಿಯಾಗಿ ರವೀಕ್ಷಾ ಅಭಿನಯಿಸುತ್ತಿದ್ದಾರೆ. ಜರೆದ್ ಮತ್ತು ಜೂಡಾ ಸಂಗೀತ ನಿರ್ದೇಶನ, ಪ್ರಜ್ವಲ್ ಗೌಡ ಛಾಯಾಗ್ರಹಣ ಹಾಗೂ ಶ್ರೀನಿವಾಸ್ ಕಲಾಲ್ ಸಂಕಲನ ʼಮ್ಯಾಡ್ನೆಸ್ʼ ಚಿತ್ರಕ್ಕಿದೆ. ಸದ್ಯ ಚಿತ್ರತಂಡ ಬೆಂಗಳೂರು, ಆಗುಂಬೆ ಹಾಗೂ ಕನಕಪುರ ಸುತ್ತಮುತ್ತ ಶೇ. 40ರಷ್ಟು ಚಿತ್ರೀಕರಣ ಮುಗಿಸಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.