ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಕ್ಟೋಬರ್ 23ಕ್ಕೆ ತೆರೆಗೆ ಬರಲಿದೆ ಫ್ಯಾಮಿಲಿ ಎಂಟರ್‌ಟೈನರ್ ‘ಶಬರಿ’; ಟ್ರೇಲರ್ ಲಾಂಚ್ ಮಾಡಿದ ʻಒರಟʼ ಪ್ರಶಾಂತ್ - ರವಿ ಶ್ರೀವತ್ಸ!

ʻಶಬರಿʼ ಚಿತ್ರವು ಅಕ್ಟೋಬರ್ 23ರಂದು ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ʻಒರಟʼ ಶ್ರೀ ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಕೌಟುಂಬಿಕ ಚಿತ್ರದಲ್ಲಿ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯದ ರೋಚಕ ಕಥೆಯಿದೆ. ಒಂದು ಹಳೆಯ ಜೀಪ್ ಚಿತ್ರದಲ್ಲಿ ಜೀವಂತ ಪಾತ್ರವಾಗಿ ಸಾಗಲಿದ್ದು, ಸಸ್ಪೆನ್ಸ್ ಹಾಗೂ ಮಿಸ್ಟ್ರಿ ಪ್ರೇಕ್ಷಕರನ್ನು ಹಿಡಿದಿಡಲಿದೆ.

ಈ ಹಿಂದೆ ‘ಒರಟ ಐ ಲವ್ ಯೂ’ ಮತ್ತು ‘ಕೋರ’ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ‘ಒರಟ’ ಶ್ರೀ ಅವರು ‘ಶಬರಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ, ನಟ ‘ಒರಟ’ ಪ್ರಶಾಂತ್, ಉದ್ಯಮಿ ಪ್ರಶಾಂತ್ ಚಕ್ರವರ್ತಿ, ನಟರಾದ ಪ್ರವೀಣ್, ಕೋಟೆ ಪ್ರಭಾಕರ್ ಹಾಗೂ ನಟಿ ಭೂಮಿಕಾ ಉಪಸ್ಥಿತರಿದ್ದು, ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಭಾರವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಮೇಶ್ ಬಿ., ಬದ್ರಿ ಹಾಗೂ ವಿಷ್ಣುಕಾಂತ್ ಎ. ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇಡೀ ಕುಟುಂಬ ಸಮೇತರಾಗಿ ಕುಳಿತು ಆನಂದಿಸಬಹುದಾದ ಸುಂದರ ಸಾಂಸಾರಿಕ ಚಿತ್ರ ಇದಾಗಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಹರಸಬೇಕೆಂದು ಮೂವರೂ ನಿರ್ಮಾಪಕರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಅಕ್ಟೋಬರ್‌ 23ರಂದು ತೆರೆಗೆ

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಶ್ರೀ, "ಚಿತ್ರದ ‘ತಂದಾನಿ ತಾನೋ..’ ಹಾಡು ಲಹರಿ ಆಡಿಯೋ ಮೂಲಕ ಬಿಡುಗಡೆಯಾಗಿ ಎಲ್ಲೆಡೆ ವೈರಲ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಟ್ರೇಲರ್ ಬಿಡುಗಡೆಗೆ ಗುರು-ಹಿರಿಯರು ಮತ್ತು ಸ್ನೇಹಿತರು ಸಾಥ್ ನೀಡಿರುವುದು ಸಂತಸ ತಂದಿದೆ. ಸಿನಿಮಾದಲ್ಲಿ ತಂದೆ-ಮಗಳ ಭಾವನಾತ್ಮಕ ಬಾಂಧವ್ಯದ ಜೊತೆಗೆ ಒಂದು ಜೀಪ್ ಕೂಡ ಪ್ರಮುಖ ಪಾತ್ರವಾಗಿ ಸಾಗಲಿದೆ. ಅಂದುಕೊಂಡ ಬಜೆಟ್ ಹಾಗೂ ಸಮಯದ ಮಿತಿಯಲ್ಲೇ ಚಿತ್ರೀಕರಣ ಮುಗಿಸಿದ್ದೇವೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮಿಸ್ಟ್ರಿ ಅಂಶಗಳನ್ನು ಒಳಗೊಂಡ ಈ ಪಕ್ಕಾ ಕೌಟುಂಬಿಕ ಚಿತ್ರದಲ್ಲಿ ನಾಯಕ ಸಮರ್ಥ್ ಮತ್ತು ನಾಯಕಿ ಕೃತಿಕಾ ಗೌಡ ಅತ್ಯುತ್ತಮವಾಗಿ ಶ್ರಮಿಸಿದ್ದಾರೆ. ಇವರ ಜೊತೆಗೆ ‘ರಾಣಿ’ ಧಾರಾವಾಹಿ ಖ್ಯಾತಿಯ ಬಾಲನಟಿ ಧನ್ವಿ ಅದ್ಭುತವಾಗಿ ನಟಿಸಿದ್ದಾಳೆ. ಯುವ ತಂತ್ರಜ್ಞರ ಬೆಂಬಲದೊಂದಿಗೆ ಮೂಡಿಬಂದಿರುವ ‘ಶಬರಿ’ ಇದೇ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ತೆರೆಕಾಣಲಿದೆ" ಎಂದು ಮಾಹಿತಿ ನೀಡಿದರು.

ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿದ ನಾಯಕ ಸಮರ್ಥ್, "ಮೊದಲ ಹೆಜ್ಜೆಯಲ್ಲೇ ಒಂದು ವಿಶಿಷ್ಟ ಹಾಗೂ ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರ ನನಗೆ ಸಿಕ್ಕಿದೆ. ನಿರ್ದೇಶಕರ ಮಾರ್ಗದರ್ಶನ ಮತ್ತು ಸಹಕಲಾವಿದರ ಸಹಕಾರದಿಂದ ಅಭಿನಯ ಸಾಧ್ಯವಾಯಿತು. ನಮ್ಮ ತಂದೆಯವರೂ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ಜನರಿಗೆ ಒಳ್ಳೆಯ ಸಿನಿಮಾ ನೀಡುವ ಪ್ರಯತ್ನ ಮಾಡಿದ್ದೇವೆ" ಎಂದರು. ನಾಯಕಿ ಕೃತಿಕಾ ಗೌಡ ಮಾತನಾಡಿ, ತಮ್ಮ ‘ಕಿರಾತಕ’ ಕಿರುಚಿತ್ರವನ್ನು ನೋಡಿ ನಿರ್ದೇಶಕರು ಈ ವಿಭಿನ್ನ ಪಾತ್ರಕ್ಕೆ ಆಯ್ಕೆ ಮಾಡಿದ್ದನ್ನು ಸ್ಮರಿಸಿ, ಪ್ರೇಕ್ಷಕರ ಮೆಚ್ಚುಗೆಯ ನಿರೀಕ್ಷೆ ವ್ಯಕ್ತಪಡಿಸಿದರು. ಇನ್ನು ಮುದ್ದು ಮುಖದ ಬಾಲನಟಿ ಧನ್ವಿ ಮಾತನಾಡಿ, ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕುತ್ತಾ ಸಿನಿಮಾ ನೋಡುವಂತೆ ಮನವಿ ಮಾಡಿದಳು.

ಚಿತ್ರದ ತಾರಾಗಣದಲ್ಲಿ ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಸೇರಿದಂತೆ ಹಲವು ಹಿರಿಯ ಹಾಗೂ ರಂಗಭೂಮಿ ಕಲಾವಿದರು ಕಾಣಿಸಿಕೊಂಡಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಹಾಗೂ ಕೆ. ಗಿರೀಶ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಸಿನಿಮಾದ ನಿಜವಾದ ‘ಶಬರಿ’ ಯಾರು ಎಂಬ ಕುತೂಹಲದ ಎಳೆಯನ್ನಿಟ್ಟುಕೊಂಡು ತಯಾರಾಗಿರುವ ಈ ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.