ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಲವ್ ಇನ್ಶೂರೆನ್ಸ್ ಕಂಪೆನಿ’ ಸಿನಿಮಾ ಸೋತಿದ್ದಕ್ಕೆ ರೊಚ್ಚಿಗೆದ್ದ ನಟಿ ನಯನತಾರಾ ಪತಿ; ಯಾರ ಮೇಲೆ ವಿಘ್ನೇಶ್‌ ಶಿವನ್‌ಗೆ ಕೋಪ?

ಪ್ರದೀಪ್ ರಂಗನಾಥನ್ ಹಾಗೂ ಕೃತಿ ಶೆಟ್ಟಿ ನಟನೆಯ, ವಿಘ್ನೇಶ್ ಶಿವನ್ ನಿರ್ದೇಶನದ 'ಲವ್ ಇನ್ಶೂರೆನ್ಸ್ ಕಂಪೆನಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಂಡಿಲ್ಲ. ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕರು, ಉದ್ದೇಶಪೂರ್ವಕ ನೆಗೆಟಿವಿಟಿಯಿಂದಾಗಿ ತಮ್ಮ ಕನಸು ನುಚ್ಚುನೂರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಟ ನಯನತಾರಾ ಅವರ ಪತಿ, ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ಈಚೆಗೆ ‘ಲವ್ ಇನ್ಶೂರೆನ್ಸ್ ಕಂಪೆನಿ’ (LIK) ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಮೂರು ಬ್ಲಾಕ್ ಬಸ್ಟರ್‌ ಸಿನಿಮಾಗಳನ್ನು ನೀಡಿದ್ದ ಪ್ರದೀಪ್‌ ರಂಗನಾಥನ್‌ ಈ ಸಿನಿಮಾದ ಹೀರೋ ಆಗಿದ್ದರು. ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಏಪ್ರಿಲ್‌ 10ರಂದು ತೆರೆಕಂಡ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಜಾದೂ ಮಾಡಲು ವಿಫಲವಾಯಿತು. ಈ ಬಗ್ಗೆ ವಿಘ್ನೇಶ್‌ ಶಿವನ್‌ ಈಗ ಪ್ರತಿಕ್ರಿಯೆ ನೀಡಿದ್ದಾರೆ.

"ಒಂದು ವಿಭಿನ್ನವಾದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವುದರ ಹಿಂದೆ ದೊಡ್ಡ ಹೋರಾಟವೇ ಇರುತ್ತದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಹಬ್ಬಿಸುವ ನೆಗೆಟಿವಿಟಿಯಿಂದಾಗಿ ನಿರ್ದೇಶಕರ ಕನಸುಗಳು ನುಚ್ಚುನೂರಾಗುತ್ತಿವೆ" ಎಂದು ವಿಘ್ನೇಶ್ ಶಿವನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Nayanthara: ಪತ್ನಿಯಾಗಿ ವೇದಿಕೆ ಏರಿದ ನಯನತಾರಾ! ವಿಘ್ನೇಶ್ ಶಿವನ್ ಭಾವುಕ

ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿದ್ದ ‘ಲವ್ ಇನ್ಶೂರೆನ್ಸ್ ಕಂಪೆನಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ನಡೆದ ವಿಪರೀತ ನೆಗೆಟಿವ್ ಪ್ರಚಾರದ ಕಾರಣದಿಂದಾಗಿಯೇ ಅನೇಕರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಎಂದು ಸಿನಿಪ್ರಿಯರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ವಿಘ್ನೇಶ್ ಶಿವನ್ ತಿಳಿಸಿದ್ದಾರೆ.

ನಂಗಿನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ!

"ಉತ್ತಮ ಟಾಕ್‌ನೊಂದಿಗೆ ಮೊದಲ ವೀಕೆಂಡ್ ಕಳೆದೆವು. ಆದರೆ ನಂತರ ಚಿತ್ರದ ಗಳಿಕೆಯಲ್ಲಿ ವೇಗವಾಗಿ ಇಳಿಕೆ ಕಂಡುಬಂದಿದ್ದು ನನಗೆ ತುಂಬಾ ನೋವು ತಂದಿತು. ಈ ಸಿನಿಮಾದ ಫಲಿತಾಂಶವನ್ನು ನನಗೆ ಇನ್ನೂ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಇರುವ ಶ್ರಮ ಮತ್ತು ಹೋರಾಟ ಹಲವರಿಗೆ ತಿಳಿಯುವುದಿಲ್ಲ. ಸಿನಿಮಾವನ್ನು ವಿಮರ್ಶಿಸುವುದು ಬೇರೆ, ಆದರೆ ಉದ್ದೇಶಪೂರ್ವಕವಾಗಿ ಬರೆಯುವ ನೆಗೆಟಿವ್ ರಿವ್ಯೂಗಳು ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುತ್ತವೆ. ಆರಂಭದಲ್ಲಿ ಯಶಸ್ಸು ಸಿಗದಿದ್ದರೂ, ನಂತರದ ದಿನಗಳಲ್ಲಿ ಕಲ್ಟ್‌ ಕ್ಲಾಸಿಕ್‌ಗಳಾಗಿ ಇತಿಹಾಸದಲ್ಲಿ ಉಳಿದ ಸಿನಿಮಾಗಳು ಸಾಕಷ್ಟಿವೆ. ನನ್ನ LIK ಚಿತ್ರವೂ ಭವಿಷ್ಯದಲ್ಲಿ ಅಂತಹದೇ ಮನ್ನಣೆ ಪಡೆಯುತ್ತದೆ ಎಂಬ ಭರವಸೆ ನನಗಿದೆ" ಎಂದು ವಿಘ್ನೇಶ್‌ ಶಿವನ್ ಬರೆದುಕೊಂಡಿದ್ದಾರೆ.

ವಿಘ್ನೇಶ್‌ ಶಿವನ್ ಹಂಚಿಕೊಂಡಿರುವ ಪೋಸ್ಟ್‌



ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ನಟಿಸಿದ್ದ ಈ ಫ್ಯೂಚರಿಸ್ಟಿಕ್ ರೊಮ್ಯಾಂಟಿಕ್ ಕಾಮಿಡಿ ಚಿತ್ರವು 2040ರ ಕಾಲಘಟ್ಟದ ಹಿನ್ನೆಲೆಯಲ್ಲಿ, ತಂತ್ರಜ್ಞಾನದ ಯುಗದಲ್ಲಿ ಅಲ್ಗಾರಿದಮ್‌ಗಳು ಪ್ರೀತಿಯನ್ನು ಹೇಗೆ ನಿಯಂತ್ರಿಸುತ್ತವೆ ಎಂಬ ವಿಭಿನ್ನ ಕಾನ್ಸೆಪ್ಟ್ ಅನ್ನು ಹೊಂದಿತ್ತು. ಈ ಸಿನಿಮಾವು ಥಿಯೇಟರ್‌ಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 65+ ಕೋಟಿ ರೂಪಾಯಿಗಳವರೆಗೆ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ‘ಅಮೆಜಾನ್ ಪ್ರೈಮ್ ವಿಡಿಯೋ’ದಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾವು ತಮಿಳು ಸೇರಿದಂತೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ಎಸ್.ಜೆ. ಸೂರ್ಯ ವಿಲನ್ ಆಗಿ ನಟಿಸಿದ್ದರೆ, ಯೋಗಿ ಬಾಬು ಮತ್ತು ಸೀಮನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.