ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

Nayi Ide Eccharike Movie: ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ 'ನಾಯಿ ಇದೆ ಎಚ್ಚರಿಕೆ' ಸಿನಿಮಾ ನವೆಂಬರ್ 28 ರಂದು ಬಿಡುಗಡೆಯಾಗುತ್ತಿದೆ. ಡಾ. ಲೀಲಾಮೋಹನ್ ಪಿವಿಆರ್ ನಾಯಕರಾಗಿರುವ ಈ ಚಿತ್ರವನ್ನು ಕಲಿ ಗೌಡ ನಿರ್ದೇಶಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ, ಜೊಂಬಿ (Zombie) ಜಾನರ್‌ನಲ್ಲಿ ಮೂಡಿಬಂದಿದೆ.

ಯಾರಾದ್ದಾದರೂ ಮನೆಯಲ್ಲಿ ನಾಯಿ ಸಾಕಿದ್ದರೆ ಅಂಥವರ ಮನೆ ಮುಂದೆ ʻನಾಯಿ ಇದೆ ಎಚ್ಚರಿಕೆʼ ಎಂಬ ಬೋರ್ಡ್‌ ಕಾಣಿಸುತ್ತದೆ. ಆದರೆ ಇದನ್ನೇ ಈಗ ಸಿನಿಮಾವೊಂದರ ಶೀರ್ಷಿಕೆಯಾಗಿದೆ. ಅಷ್ಟಕ್ಕೂ ಈ ಸಿನಿಮಾಕ್ಕೆ ಈ ಶೀರ್ಷಿಕೆಯೇ ಏಕೆ? ಅದನ್ನು ಥಿಯೇಟರ್‌ನಲ್ಲೇ ನೋಡಬೇಕು. ಸದ್ಯ ಈ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಆಗಿದೆ. ನವೆಂಬರ್‌ 28 ರಂದು ನಾಯಿ ಇದೆ ಎಚ್ಚರಿಕೆ ಸಿನಿಮಾ ತೆರೆಗೆ ಬರುತ್ತಿದೆ.

ಹಾರರ್ ಥ್ರಿಲ್ಲರ್ ಕಥಾಹಂದರ

ಲಾವಣ್ಯ ಗದೆ ಅವರು ನಿರ್ಮಾಣ ಮಾಡಿರುವ ನಾಯಿ ಇದೆ ಎಚ್ಚರಿಕೆ ಸಿನಿಮಾದಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಲೀಲಾಮೋಹನ್ ಪಿವಿಆರ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಲಿ ಗೌಡ ಅವರು ನಿರ್ದೇಶಿಸಿದ್ದಾರೆ. "ನನಗೂ ಚಿತ್ರರಂಗಕ್ಕೂ ಹದಿನೈದು ವರ್ಷಗಳ ನಂಟು. ಈ ಹಿಂದೆ ʻತನಿಖೆʼ ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ನಾಯಿ ಇದೆ ಎಚ್ಚರಿಕೆ ಸಿನಿಮಾವು ಶೀರ್ಷಿಕೆಯಿಂದ ಎಷ್ಟು ಕುತೂಹಲ ಮೂಡಿಸಿದೆಯೋ, ಅಷ್ಟೇ ಕುತೂಹಲ ಸಿನಿಮಾದಲ್ಲೂ ಇರುತ್ತದೆ" ಎಂದು ಕಲಿ ಗೌಡ ಹೇಳಿದ್ದಾರೆ.

ವೈರಸ್‌ ಹಿಂದಿನ ಕಥೆ ನಾಯಿ ಇದೆ ಎಚ್ಚರಿಕೆ

ಗಮನಸೆಳೆದ ಟೀಸರ್, ಟ್ರೇಲರ್

"ಯಾರು ಊಹಿಸದ ರೋಚಕ ಸನ್ನಿವೇಶಗಳು ಈ ಚಿತ್ರದ ಹೈಲೆಟ್. ನಾಯಿ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನಿಯತ್ತು ಕಡಿಮೆ ಆಗಲ್ಲ ಎಂಬುದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವ ಭರವಸೆ ಇದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನವೆಂಬರ್ 28 ರಂದು ನಿಮ್ಮ ಮುಂದೆ ಬರಲಿದೆ. ಚಿತ್ರ ನೋಡಿ, ಪ್ರೋತ್ಸಾಹ ನೀಡಿ" ಎಂದು ನಿರ್ದೇಶಕ ಕಲಿ ಗೌಡ ತಿಳಿಸಿದ್ದಾರೆ‌.

ಹೀರೋ ಲೀಲಾಮೋಹನ್‌ ಹೇಳಿದ್ದೇನು?

"ನಾನು ವೃತ್ತಿಯಲ್ಲೂ ವೈದ್ಯ. ಈ ಚಿತ್ರದಲ್ಲೂ ವೈದ್ಯ. ಇದರಲ್ಲೂ ನನ್ನ ಹೆಸರು ಲೀಲಾ ಅಂತಲೇ ಇದೆ. ಇನ್ನೂ ಇದು ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತಾದ ಸಿನಿಮಾ. ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳನ್ನು ತೋರಿಸಿರುವ ಸಿನಿಮಾ ಕೂಡ ಹೌದು. ಇದರ ಜೊತೆಗೆ ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಜೊಂಬಿ (zombie) ಜಾನರ್ ಆಗಿದೆ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ" ಎಂದು ಲೀಲಾ ಮೋಹನ್ ತಿಳಿಸಿದ್ದಾರೆ.

ಡಾ. ಲೀಲಾಮೋಹನ್ ಪಿವಿಆರ್ ಜೊತೆಗೆ ಪ್ರಮೋದ್ ಶೆಟ್ಟಿ, ಬಲ ರಾಜ್ ವಾಡಿ, ದಿವ್ಯಶ್ರೀ, ಮಾನಸ ಗೌಡ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಜಗಪ್ಪ, ಅನಿರುದ್ಧ್ ಮಹೇಶ್, ಪ್ರಬಿಕ್ ಮೊಗವೀರ್, ಚಂದನಾ, ರಿಷಿ, ಸೀನು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಯುವ ಗಂಗಾಧರ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದು, ಕೆಲವು ಕಿರುಚಿತ್ರಗಳು ಹಾಗೂ ಶ್ರೀರಸ್ತು ಶುಭಮಸ್ತು, ನನ್ನರಸಿ ರಾಧೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಯುವ ಗಂಗಾಧರ್ ನಟಿಸಿದ್ದಾರೆ. ಎ ಜೆ ಕುಮಾರ್ ಛಾಯಾಗ್ರಹಣ ಮಾಡಿದ್ದು, ರವೀಶ್ ಆತ್ಮರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.