ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅಭಿನಯದ ‘ಜಗ ಮೆಚ್ಚಿದ ಮಗ’ ಸಿನಿಮಾ ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಹೊಚ್ಚಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 1972ರಲ್ಲಿ ಕಪ್ಪು-ಬಿಳುಪಿನಲ್ಲಿ ತೆರೆಕಂಡು ಪ್ರೇಕ್ಷಕರ ಮನಗೆದ್ದಿದ್ದ ಈ ಸಾಹಸಮಯ ಪೌರಾಣಿಕ ಹಿನ್ನೆಲೆಯ ಚಿತ್ರವು, ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪೂರ್ಣ ಪ್ರಮಾಣದ ಕಲರಿಂಗ್, ಸಿನಿಮಾಸ್ಕೋಪ್ ಹಾಗೂ 5.1 ಡಿಜಿಟಲ್ ಸೌಂಡ್ ಎಫೆಕ್ಟ್‌ನೊಂದಿಗೆ ಮರುಬಿಡುಗಡೆಯಾಗುತ್ತಿದೆ.
‘ಮಂತ್ರಾಲಯ ಮಹಾತ್ಮೆ’ ಚಿತ್ರವೂ ರೀ-ರಿಲೀಸ್
ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಮತ್ತು ವಿತರಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಹಿರಿಯ ನಿರ್ಮಾಪಕ ಎಸ್. ಉದಯಶಂಕರ್ ಅವರು ಈ ಕೆಲಸಕ್ಕೆ ಕೈಹಾಕಿದ್ದಾರೆ. ಡಾ. ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುವ ಉದಯಶಂಕರ್, ಐದು ದಶಕಗಳ ಹಿಂದಿನ ಈ ಕ್ಲಾಸಿಕ್ ಚಿತ್ರವನ್ನು ಇಂದಿನ ಪೀಳಿಗೆಯ ಅಭಿರುಚಿಗೆ ತಕ್ಕಂತೆ ನವೀಕರಿಸುವ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ.
ಈ ಹಿಂದೆ ಅಣ್ಣಾವ್ರ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳು ಕಲರ್‌ನಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದವು. ಆ ಸಾಲಿಗೆ ಇದೀಗ ‘ಜಗಮೆಚ್ಚಿದ ಮಗ’ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಕಲರಿಂಗ್ ಮಾಡಿ ಬಿಡುಗಡೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಉದಯಶಂಕರ್ ಹೊಂದಿದ್ದಾರೆ.
ಜಗ ಮೆಚ್ಚಿದ ಮಗ ಚಿತ್ರಕ್ಕಾಗಿ ಒಂದೂವರೆ ವರ್ಷ ಕೆಲಸ
ಸುಮಾರು 50 ವರ್ಷಗಳಷ್ಟು ಹಳೆಯದಾದ ಕಪ್ಪು-ಬಿಳುಪು ದೃಶ್ಯಾವಳಿಗಳನ್ನು ಇಂದಿನ ಅತ್ಯಾಧುನಿಕ ಡಿಜಿಟಲ್ ಮಾದರಿಗೆ ಪರಿವರ್ತಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕಾಗಿ ಚೆನ್ನೈನ ಪ್ರತಿಷ್ಠಿತ ಪ್ರಸಾದ್ ಲ್ಯಾಬ್ಸ್‌ನಲ್ಲಿ ಸತತ ಒಂದೂವರೆ ವರ್ಷಗಳ ಕಾಲ ನುರಿತ ತಂತ್ರಜ್ಞರ ತಂಡ ಹಗಲಿರುಳು ಶ್ರಮಿಸಿದೆ. ಪ್ರತಿಯೊಂದು ಫ್ರೇಮ್ ಅನ್ನು ನವೀಕರಿಸಿ, ಜೀವಂತಿಕೆ ತುಂಬುವ ಬಣ್ಣಗಳನ್ನು ಅಳವಡಿಸಿ, ಧ್ವನಿಯನ್ನು 5.1 ಸರೌಂಡ್ ಸಿಸ್ಟಂಗೆ ಮಾರ್ಪಡಿಸುವ ಮೂಲಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಅದ್ಭುತ ಆಡಿಯೋ-ವಿಶುವಲ್ ಅನುಭವ ನೀಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಣ್ಣಾವ್ರಿಗೆ ಭಾರತಿ ಜೋಡಿ
ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಹಾಗೂ ಎಸ್. ಭಾವನಾರಾಯಣ್ ಅವರ ನಿರ್ಮಾಣ-ಚಿತ್ರಕಥೆಯಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಡಾ. ಭಾರತಿ ವಿಷ್ಣುವರ್ಧನ್ ಜೋಡಿಯಾಗಿದ್ದರು. ಜೊತೆಗೆ ಕೆ.ಎಸ್. ಅಶ್ವತ್, ಎಂ.ವಿ. ರಾಜಮ್ಮ ಹಾಗೂ ನರಸಿಂಹರಾಜು ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣಹಚ್ಚಿದ್ದರು.
ಸತ್ಯಂ ಅವರ ಸುಮಧುರ ಸಂಗೀತ ಹಾಗೂ ಹುಣಸೂರು ಕೃಷ್ಣಮೂರ್ತಿ ಅವರ ಸಾಹಿತ್ಯ ಈ ಚಿತ್ರದ ಹಾಡುಗಳನ್ನು ಇಂದಿಗೂ ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ. ನವೆಂಬರ್‌ನಲ್ಲಿ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ಅತ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗಲಿದೆ.