ತಿರುವನಂತಪುರಂ: ಕೇರಳದಲ್ಲಿ ಐಷಾರಾಮಿ ವಾಹನಗಳ ತೆರಿಗೆ ವಂಚನೆ ವಿರುದ್ಧ ಕಸ್ಟಮ್ಸ್ (Customs) ಇಲಾಖೆಯ ಕಾರ್ಯಾಚರಣೆ ಕೈಗೊಂಡಿದ್ದು ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರ ವಾಹನ ಜಪ್ತಿ ಮಾಡಲಾಗಿದೆ. ಇದರ ವಿರುದ್ಧ ದುಲ್ಕರ್ ಕೇರಳ ಹೈಕೋರ್ಟ್‌ಗೆ (Kerala High Court) ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 26ರಂದು ನ್ಯಾಯಾಲಯವು ಕಸ್ಟಮ್ಸ್ ಇಲಾಖೆಗೆ ಉತ್ತರ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ದುಲ್ಕರ್ ತಮ್ಮ ಅರ್ಜಿಯಲ್ಲಿ, 2004ರ ಲ್ಯಾಂಡ್ ರೋವರ್ ಡಿಫೆಂಡರ್ ವಾಹನವನ್ನು ಖರೀದಿಸಿದ್ದಾಗಿ, ಮೂಲ ಮಾಲೀಕರ ಬಳಿ ದಾಖಲೆಗಳಿವೆ ಮತ್ತು ಇದು ಮೋಟಾರು ವಾಹನ ಇಲಾಖೆಯಲ್ಲಿ ನೋಂದಾಯಿತವಾಗಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 23ರಂದು ಕಸ್ಟಮ್ಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸದೆ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಪ್ರತಿನಿಧಿಗಳು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ, ಅವುಗಳಿಗೆ ಯಾವುದೇ ಸ್ವೀಕೃತಿ ನೀಡದೆ ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಜಪ್ತಿಯ ಕುರಿತಾದ ಮಾಧ್ಯಮ ವರದಿಗಳು ತಮ್ಮ ವಾಹನವನ್ನು ಕಳ್ಳಸಾಗಾಣಿಕೆ, ಮಾದಕ ದ್ರವ್ಯ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ವಾಹನಗಳ ಜತೆ ಥಳುಕು ಹಾಕಿವೆ ಎಂದು ದುಲ್ಕರ್ ಆಕ್ಷೇಪಿಸಿದ್ದಾರೆ. ಇದು ತಮ್ಮ ಖ್ಯಾತಿಗೆ ಧಕ್ಕೆ ತಂದಿದೆ ಎಂದಿದ್ದಾರೆ. ವಾಹನವು ಇಂಟರ್‌ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ (ICRC) ಮೂಲಕ ದೆಹಲಿಗೆ ಆಮದಾಗಿದ್ದು, ಸಕ್ರಮ ದಾಖಲೆಗಳೊಂದಿಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದಿತ್ತು ಎಂದು ದುಲ್ಕರ್ ವಾದಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿ ಎಸೆದ ಹೋರಿ; ಶಾಕಿಂಗ್ ವಿಡಿಯೊ ವೈರಲ್
ಕೇರಳದಾದ್ಯಂತ ಕಸ್ಟಮ್ಸ್ ಇಲಾಖೆ ʼಆಪರೇಷನ್ ನುಮ್‌ಖೋರ್ʼ ಎಂಬ ಕಾರ್ಯಾಚರಣೆಯಡಿ 36 ಐಷಾರಾಮಿ ವಾಹನಗಳನ್ನು ಜಪ್ತಿ ಮಾಡಿದೆ. ಇವುಗಳಲ್ಲಿ ದುಲ್ಕರ್ ಅವರ ಎರಡು ವಾಹನಗಳು ಸೇರಿವೆ. ಭೂತಾನ್‌ನಿಂದ ಮಧ್ಯವರ್ತಿಗಳ ಮೂಲಕ ತೆರಿಗೆ ವಂಚಿಸಿ ಭಾರತಕ್ಕೆ ತರಲಾದ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ. ದುಲ್ಕರ್, ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ನಿವಾಸಗಳಲ್ಲಿ ತಪಾಸಣೆ ನಡೆದಿದೆ.
ಕಸ್ಟಮ್ಸ್ ಅಧಿಕಾರಿಗಳು, ತನಿಖೆಯ ನಂತರವೇ ಒಡೆತನದವರ ಬಗ್ಗೆ ಖಚಿತಪಡಿಸಲಾಗುವುದು ಎಂದಿದ್ದಾರೆ. ವಾಹನ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಮತ್ತು ದಾಖಲೆಗಳನ್ನು ಸಲ್ಲಿಸಲು ಕೇಳಲಾಗುವುದು. ಸಕ್ರಮ ದಾಖಲೆಗಳಿಲ್ಲದ ವಾಹನಗಳು ಜಪ್ತಿಯಲ್ಲೆ ಉಳಿಯಲಿವೆ ಎಂದು ತಿಳಿಸಿದ್ದಾರೆ.