ʻಬದಲಾಗಿ, ಇಲ್ಲ ಅವನು ಬದಲಾಯಿಸ್ತಾನೆʼ- ಪೋಷಕ ಪಾತ್ರವೊಂದು ಖಳರಿಗೆ ಹೀಗೊಂದು ಎಚ್ಚರಿಕೆ ನೀಡುವ ಮೂಲಕ ಮುಂದೆ ಒಂದು ಮಹಾ ರಕ್ತದೊಕುಳಿ ಇದೆ ಎಂಬ ಸೂಚನೆ ನೀಡುತ್ತದೆ. ಅಲ್ಲಿಗೆ, ರಾಚಯ್ಯನ ಪಾತ್ರದ ಹಿನ್ನೆಲೆ ಅರಿತ ಖಳರ ಗುಂಪಿಗೂ ಒಂದು ಸಣ್ಣ ನಡುಕ ಆರಂಭವಾಗಿರುತ್ತದೆ. ಅಷ್ಟೊತ್ತಿಗೆ ʻಲ್ಯಾಂಡ್‌ಲಾರ್ಡ್ʼ ಸಿನಿಮಾ ಕ್ಲೈಮ್ಯಾಕ್ಸ್ ಹಂತ ತಲುಪಿರುತ್ತದೆ. ದುನಿಯಾ ವಿಜಯ್ ಮತ್ತು ನಿರ್ದೇಶಕ ಜಡೇಶ್ ಕೆ ಹಂಪಿ ಮೊದಲ ಬಾರಿಗೆ ಒಟ್ಟಿಗೆ ಸೇರಿ ಮಾಡಿರುವ ಸಿನಿಮಾ ಇದು. ಆರಂಭದಿಂದಲೂ ಅಂತ್ಯದವರೆಗೂ ಈ ಲ್ಯಾಂಡ್‌ಮೇಲೆ ಬರೀ ರಕ್ತದೊಕುಳಿಯ ಅಬ್ಬರ ಇದೆ, ಇಲ್ಲದವರ ಬೆವರಿನ ವಾಸನೆ ಇದೆ, ಉಳ್ಳವರ ದರ್ಪ ದೌಲತ್ತು ಇದೆ.
ಏನಿದು ಲ್ಯಾಂಡ್‌ಲಾರ್ಡ್ ಕಥೆ?
ʻನಮ್ಮ ಹಕ್ಕುಗಳನ್ನು ಪಡ್ಕೋಬೇಕು ಅಂದರೆ ಭಿಕ್ಷೆ ಬೇಡಕೂಡದು, ಎದೆಗಳಿಗೆ ಒದ್ದು ಕಿತ್ಕೋಬೇಕುʼ ಎಂಬ ಮನಸ್ಥಿತಿಯ ರಾಚಯ್ಯ (ವಿಜಯ್) ಎಲ್ಲಾ ಸಮಯದಲ್ಲೂ ಕೊಡಲಿ ಬೀಸೋದಿಲ್ಲ. ಎಷ್ಟು ಕೋಪಿಷ್ಟನೋ, ಅಷ್ಟೇ ತಾಳ್ಮೆಯಿಂದಿರುವ ವ್ಯಕ್ತಿ. ತಾನಾಯ್ತು, ತನ್ನ ಪತ್ನಿ ನಿಂಗವ್ವ (ರಚಿತಾ) ಮತ್ತು ಮಗಳು (ರಿತನ್ಯಾ) ಎಂದುಕೊಂಡಿರುವ ರಾಚಯ್ಯನಿಗೆ ಎರಡು ಎಕರೆ ಭೂಮಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಆಸೆ. ಅತ್ತ, "ನಮ್ಮ ಮನೆತನಕ್ಕೆ ಬಿದ್ದಿರೋ ಕಪ್ಪು ಚುಕ್ಕೆಯನ್ನ ನೀರಾಗಲ್ಲ, ರಕ್ತದಾಗೆ ತೊಳ್ಕೊಂಡಿರೋದು" ಎನ್ನುವ ಸಣ್ಣ ಧಣಿ (ರಾಜ್ ಬಿ ಶೆಟ್ಟಿ). ಇವನು ಜಾತಿಯ ಹೆಸರಲ್ಲಿ ಶೋಷಣೆ ಮಾಡುವವನು. ಊರಿಗೊಬ್ನೇ ಲ್ಯಾಂಡ್‌ಲಾರ್ಡ್ ಇರಬೇಕು, ಅದು ನಾನೇ ಆಗಿರಬೇಕು ಎಂಬ ಮನಸ್ಥಿತಿಯವನು. ಕೂಲಿ ಮಾಡುವವರು, ಕೂಲಿಯಾಗಿಯೇ ಇರಬೇಕು ಎಂಬ ದರ್ಪ ತೋರುವವನು. ರಾಚಯ್ಯ ಮತ್ತು ಸಣ್ಣ ಧಣಿ ನಡುವೆ ನಡೆಯುವ ಸಂಘರ್ಷದ ಕಥೆಯೇ ಲ್ಯಾಂಡ್‌ಲಾರ್ಡ್ ಸಿನಿಮಾ.
ಮೇಕಿಂಗ್ ಹೇಗಿದೆ?
ನಿರ್ದೇಶಕ ಜಡೇಶ ಕೆ ಹಂಪಿ ಅವರು ಈ ಹಿಂದೆ ಕಾಟೇರ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಿದ್ದರು. ಇಲ್ಲೂ ಕೂಡ ಅದರ ಫ್ಲೇವರ್ ಮುಂದುವರಿದಿದೆ. ಈ ಬಾರಿಯೂ ಕೂಡ ಉತ್ತಮ ವಿಚಾರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರೆಟ್ರೋ ಶೈಲಿಯಲ್ಲಿ ಕಥೆ ಹೇಳುವ ತಂತ್ರಗಾರಿಕೆಯನ್ನು ಮರುಬಳಕೆ ಮಾಡಿಕೊಂಡಿದ್ದಾರೆ. ಶ್ರೀಮಂತರ ದಬ್ಬಾಳಿಕೆ, ಬಡವರ ಅಸಹಾಯಕತೆಯನ್ನ ಎಳೆ ಎಳೆಯಾಗಿ ಬಿಚ್ಚಿಡುವ ಕೆಲಸವನ್ನು ಜಡೇಶ್ ಮಾಡಿದ್ದಾರೆ. ಜಮೀನ್ದಾರರು ಹೇಗೆ ಬಡವರನ್ನು ಕೂಲಿಯಾಳುಗಳಾಗಿ ದುಡಿಸಿಕೊಳ್ಳುತ್ತಿದ್ದರು, ಬಡವರು ಸ್ವಂತ ಭೂಮಿ ಹೊಂದಲು ಎಷ್ಟು ಕಷ್ಟಪಡಬೇಕಿತ್ತು ಎಂಬ ವಿಚಾರಗಳನ್ನು ತಿಳಿಸಿದ್ದಾರೆ.
ಜೊತೆಗೆ ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣ ಸಿನಿಮಾಕ್ಕೆ ಹೊಸದೊಂದು ನೋಟವನ್ನು ಕಟ್ಟಿಕೊಟ್ಟಿದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ನಿರ್ದೇಶವನ್ನು ಲ್ಯಾಂಡ್‌ಲಾರ್ಡ್ ತೂಕವನ್ನು ಹೆಚ್ಚಿಸಿದೆ. ಕಲಾ ನಿರ್ದೇಶನಕ್ಕೆ ಹೆಚ್ಚುವರಿ ಅಂಕಗಳನ್ನು ನೀಡಲೇಬೇಕು. ಸಂಭಾಷಣೆಯಲ್ಲಿ ಕೋಲಾರ ಪ್ರಾಂತ್ಯದ ಕನ್ನಡ ಭಾಷೆಯ ಸೊಡಗನ್ನು ಬಹಳ ಚೆನ್ನಾಗಿ ಸದ್ಬಳಕೆ ಮಾಡಿಕೊಂಡಿರುವುದು ವಿಶೇಷ.
ಎಮೋಷನಲ್ ದೃಶ್ಯಗಳ ಜೊತೆಗೆ ಹೊಡೆದಾಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಅಡಿಗಡಿಗೂ ಕೊಡಲಿ ಏಟುಗಳು ಬೀಳುತ್ತಲೇ ಇರುತ್ತವೆ. ಇದು ಆಕ್ಷನ್ ಪ್ರಿಯರಿಗೆ ಇಷ್ಟವಾಗಬಹುದು. ಇದೊಂದು ಗ್ರಾಮೀಣ ಭಾಗದ ಕಥೆಯಾದರೂ, ಕಮರ್ಷಿಯಲ್ ಸಿನಿಮಾಗೆ ಬೇಕಾದ ಅಂಶಗಳು ಹೆಚ್ಚುವರಿಯಾಗಿಯೇ ತುಂಬಿವೆ. ಲಾಜಿಕ್ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ! ಈ ವಿಚಾರದಲ್ಲಿ ಜಡೇಶ್ ಅವರು ಬರವಣಿಗೆಯಲ್ಲಿ ಇನ್ನಷ್ಟು ಶಾರ್ಪ್‌ನೆಸ್ ತರಬಹುದಾಗಿತ್ತು. ಕೆಲವು ಕಡೆ ಕಥೆ ಓಘವನ್ನು ನಿರೀಕ್ಷೆ ಮಾಡಬಹುದಾಗಿದೆ.
ಅಬ್ಬರಿಸಿದ ದುನಿಯಾ ವಿಜಯ್; ರಾಜ್ ಶೆಟ್ಟಿಗೆ ಹೊಸ ಇಮೇಜ್
ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಅವರಿಗೆ ಲ್ಯಾಂಡ್‌ಲಾರ್ಡ್‌ನಲ್ಲಿ ಎರಡು ಶೇಡ್‌ನ ಭಿನ್ನ ಪಾತ್ರವಿದೆ. ಒಮ್ಮೊಮ್ಮೆ ಶಾಂತ ಸರೋವರದಂತೆ ಕಾಣುವ ರಾಚಯ್ಯ ಪಾತ್ರ, ಮಗದೊಮ್ಮೆ ಸುನಾಮಿ ಅಲೆಯಂತೆ ಅಬ್ಬರಿಸುತ್ತದೆ. ಎರಡು ಶೇಡ್‌ನ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ವಿಜಯ್. ಅವರ ಇಂಟೆನ್ಸ್ ನಟನೆಯನ್ನು ಮಿಸ್ ಮಾಡಿಕೊಂಡವರಿಗೆ ಲ್ಯಾಂಡ್‌ಲಾರ್ಡ್ ಒಂದು ಉತ್ತರವಾಗಿ ಬಂದಿದೆ. ಅವರ ಎದುರಾಳಿಯಾಗಿ ಸಣ್ಣ ಧಣಿಯಾಗಿ ಮಿಂಚಿರುವ ನಟ ರಾಜ್ ಬಿ ಶೆಟ್ಟಿ ಕೂಡ ವಿಲನ್ ಆಗಿ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಅವರಿಗೂ ಕೂಡ ಸಖತ್ ಬಿಲ್ಡಪ್ ಇರುವ ವಿಲನ್ ಪಾತ್ರ ಸಿಕ್ಕಿದೆ. ಅದನ್ನು ಅವರು ಬಹಳ ಖಡಕ್ ಆಗಿ ಜೀವಿಸಿದ್ದಾರೆ. ಹೊಸ ಇಮೇಜ್ ಮೂಲಕ ನೋಡುಗರ ಮೈಜುಮ್ಮೆನಿಸುವಂತಹ ನಟನೆ ಮಾಡಿದ್ದಾರೆ.
ಡಿಗ್ಲಾಮ್ ಲುಕ್‌ನಲ್ಲಿ ನಟಿ ರಚಿತಾ ರಾಮ್ ಅವರು ಇಷ್ಟವಾಗುತ್ತಾರೆ. ಇಮೇಜ್ ಹಂಗು ತೊರೆದು ನಿಂಗವ್ವ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಅವರ ಪುತ್ರಿ ರಿತನ್ಯಾಗೆ ಮೊದಲ ಅವಕಾಶದಲ್ಲಿಯೇ ನಟನೆಗೆ ಸಾಕಷ್ಟು ಅವಕಾಶ ಇರುವ ಪಾತ್ರ ಸಿಕ್ಕಿದೆ. ಶಿಶಿರ್ ಬೈಕಾಡಿ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಮಾಶ್ರೀ ನಟನೆ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ತಮ್ಮ ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಅವಿನಾಶ್, ಬಿ. ಸುರೇಶ, ಜಹಾಂಗೀರ್, ಮಿತ್ರ, ರಾಕೇಶ್ ಅಡಿಗ, ಅಭಿ ದಾಸ್, ವಜ್ರಧೀರ್ ಜೈನ್, ಭಾವನಾ ರಾವ್ ಅವರುಗಳು ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.
Movie: ಲ್ಯಾಂಡ್‌ಲಾರ್ಡ್
Release Date: ಜನವರಿ 23, 2026
Language: ಕನ್ನಡ
Genre: ಆಕ್ಷನ್, ಡ್ರಾಮಾ,
Director: ಜಡೇಶ ಕೆ. ಹಂಪಿ
Cast: ದುನಿಯಾ ವಿಜಯ್, ರಚಿತಾ ರಾಮ್, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ರಾಜ್ ಬಿ. ಶೆಟ್ಟಿ, ಉಮಾಶ್ರೀ, ರಾಕೇಶ್ ಅಡಿಗ
Duration: 156 ನಿಮಿಷ
Rating: 3.5/5