ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Citylights Movie Review: ಮೆಜೆಸ್ಟಿಕ್‌ ಒಳಗಿನ ಅಪರಿಚಿತ ಲೋಕದ ಸತ್ಯ ದರ್ಶನ ಮಾಡಿಸುವ ‌ʻದುನಿಯಾʼ ವಿಜಯ್

City Lights Movie Review: ಬೆಂಗಳೂರಿನ ಮೆಜೆಸ್ಟಿಕ್ ಸುತ್ತಲಿನ ವೇಶ್ಯಾವಾಟಿಕೆ, ರೌಡಿಸಂ ಮತ್ತು ರಾಜಕೀಯ ಜಾಲವನ್ನು ಬಯಲು ಮಾಡುವ ಕಥೆಯನ್ನು ಸಿಟಿ ಲೈಟ್ಸ್‌ ಸಿನಿಮಾ ಹೊಂದಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ಹಳ್ಳಿ ಮುಗ್ಧನಾಗಿ ವಿನಯ್ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಶಕ್ತಿ ತುಂಬಿದೆ.

ಸಿನಿಮಾ: ಸಿಟಿ ಲೈಟ್ಸ್‌

ತಾರಾಗಣ: ವಿನಯ್ ರಾಜ್‌ಕುಮಾರ್, ಮೋನಿಷಾ, ಉಮಾಶ್ರೀ, ಪುನೀತ್, ವಿನೋದ್ ಮಾಸ್ಟರ್, ಬಿ.ಎಂ. ಗಿರಿರಾಜ್, ವೀರ ದೇವರಾಜ್ ಮತ್ತಿತರರು

ನಿರ್ದೇಶನ: ದುನಿಯಾ ವಿಜಯ್

ಸಂಗೀತ: ಚರಣ್ ರಾಜ್

ಛಾಯಾಗ್ರಹಣ: ಶಿವಸೇನಾ

ಅವಧಿ: 2 ಗಂಟೆ 9 ನಿಮಿಷ

ರೇಟಿಂಗ್: 3/5

ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈ ಹಿಂದೆ ʻಸಲಗʼ ಮತ್ತು ʻಭೀಮʼ ಸಿನಿಮಾಗಳ ಮೂಲಕ ವಿಭಿನ್ನ ಶೈಲಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ವಿಜಯ್ ನಿರ್ದೇಶನದ ಸಿನಿಮಾಗಳೆಂದರೆ ಅಲ್ಲಿ ಕಚ್ಚಾ (ರಾ) ಕಂಟೆಂಟ್ ಇರುತ್ತದೆ ಎಂಬುದು ಹೊಸ ವಿಚಾರವೇನಲ್ಲ. ಅಷ್ಟೊಂದು ನೈಜವಾಗಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಹಿಂದಿನ ಚಿತ್ರಗಳಲ್ಲಿ ರೌಡಿಸಂ, ಮಾದಕ ದ್ರವ್ಯ ಮುಂತಾದ ಸಮಾಜದ ಕರಾಳ ಮುಖಗಳನ್ನು ಬಿಚ್ಚಿಟ್ಟಿದ್ದ ದುನಿಯಾ ವಿಜಯ್, ಈ ಬಾರಿ ʻಸಿಟಿ ಲೈಟ್ಸ್‌ʼ ಮೂಲಕ ಬೆಂಗಳೂರಿನ ಮೆಜೆಸ್ಟಿಕ್, ವೇಶ್ಯಾವಾಟಿಕೆ ಹಾಗೂ ಅದರ ಸುತ್ತಲಿನ ಜಗತ್ತನ್ನು ತೆರೆದಿಟ್ಟಿದ್ದಾರೆ.

ಸಿಟಿ ಲೈಟ್ಸ್‌ ಕಥೆ ಏನು?

ದುನಿಯಾ ವಿಜಯ್ ಅವರು ಈ ಬಾರಿ ವೇಶ್ಯಾವಾಟಿಕೆಯ ಕರಾಳತೆಯತ್ತ ಹೆಚ್ಚು ಗಮನಹರಿಸಿದ್ದಾರೆ. ಜೊತೆಗೆ ಮೆಜೆಸ್ಟಿಕ್ ಎಂಬ ಬೆಂಗಳೂರಿನ ಹೃದಯಭಾಗದಲ್ಲಿ ಎಂತೆಂತಹ ಚಟುವಟಿಕೆಗಳು ನಡೆಯುತ್ತವೆ ಮತ್ತು ಮುಗ್ಧರು ಹೇಗೆಲ್ಲಾ ಬಲೆಗೆ ಬೀಳುತ್ತಾರೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿನ ವೇಶ್ಯಾವಾಟಿಕೆ, ಪೊಲೀಸ್ ವ್ಯವಸ್ಥೆ, ರಾಜಕಾರಣಿಗಳು ಹಾಗೂ ರೌಡಿಗಳ ನಂಟನ್ನು ತೋರಿಸಲಾಗಿದೆ.

ಚಿತ್ರದ ನಾಯಕ ಶಿವು (ವಿನಯ್ ರಾಜ್‌ಕುಮಾರ್) ಹಳ್ಳಿಯಿಂದ ಬೆಂಗಳೂರಿಗೆ ದುಡಿದು ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಬಂದಿರುತ್ತಾನೆ. ಅತ್ತ ನಾಯಕಿ ಮೋನಿಷಾ (ಮೋನಿಷಾ) ಕೂಡ ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಂಡು ಸಕಲೇಶಪುರದಿಂದ ಮೆಜೆಸ್ಟಿಕ್‌ಗೆ ಬಂದಿಳಿಯುತ್ತಾಳೆ. ಮೆಜೆಸ್ಟಿಕ್‌ನ ಈ ಸುಳಿಯಲ್ಲಿ ಸಿಲುಕುವ ಇಬ್ಬರು ಮುಗ್ಧರ ಬದುಕು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ? ಇವರ ಭೇಟಿ ಹೇಗೆ ಸಾಧ್ಯವಾಗುತ್ತದೆ? ಆನಂತರ ಏನೆಲ್ಲಾ ದುರಂತಗಳು ಸಂಭವಿಸುತ್ತವೆ? ಎಂಬುದನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿಜಯ್ ಕಟ್ಟಿಕೊಟ್ಟಿದ್ದಾರೆ.

ದುನಿಯಾ ವಿಜಯ್ ಸಿಗ್ನೇಚರ್ ಸ್ಟೈಲ್

ವಿಜಯ್ ಈ ಬಾರಿ ಕೇವಲ ನಿರ್ದೇಶಕರಾಗಿ ತೆರೆಯ ಹಿಂದೆ ಮಾತ್ರ ಕೆಲಸ ಮಾಡಿದ್ದು, ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಅವರ ಹಿಂದಿನ ಎರಡು ಚಿತ್ರಗಳಂತೆಯೇ, ಇಲ್ಲೂ ಒಂದು ಕ್ರೂರ ಹಾಗೂ ಅಹಿತಕರ ಜಗತ್ತನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕೊಳಗೇರಿಗಳು, ಮೆಜೆಸ್ಟಿಕ್‌ನ ಸಂದಿಗೊಂದಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಶಿವಸೇನಾ ಅವರ ಕ್ಯಾಮೆರಾ ಕಣ್ಣು ಹರಿದಾಡಿದೆ. ಸಾಕಷ್ಟು ನೈಜ ತಾಣಗಳಲ್ಲಿ ಚಿತ್ರೀಕರಣ ನಡೆಸಿ ಮೆಜೆಸ್ಟಿಕ್ ಪ್ರದೇಶದ ಮತ್ತೊಂದು ಕರಾಳ ಮುಖವನ್ನು ಅನಾವರಣಗೊಳಿಸಲಾಗಿದೆ. ನಾಯಕನ ಹಿನ್ನೆಲೆಗಾಗಿ ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಯಕಿಯ ಹಿನ್ನೆಲೆಗಾಗಿ ಸಕಲೇಶಪುರಕ್ಕೂ ಕಥೆ ಸಾಗುತ್ತದೆ. ಬೆಂಗಳೂರು ನಗರವೇ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಂತೆ ಭಾಸವಾಗುತ್ತದೆ.

ಇಲ್ಲಿ ಇಬ್ಬರೂ ಪ್ರಮುಖ ಪಾತ್ರಧಾರಿಗಳ ಹಿನ್ನೆಲೆಯನ್ನು ಬಲವಾಗಿ ಕಟ್ಟಿಕೊಡಲಾಗಿದೆ; ಅದರಲ್ಲೂ ಮೋನಿಷಾ ಪಾತ್ರದ ಹಿನ್ನೆಲೆ ಹೆಚ್ಚು ಗಮನ ಸೆಳೆಯುತ್ತದೆ. 'ಭೀಮ' ಮತ್ತು 'ಸಲಗ' ಸಿನಿಮಾಗಳ ಶೈಲಿಯಲ್ಲೇ 'ಸಿಟಿ ಲೈಟ್ಸ್' ಮೇಕಿಂಗ್ ಕೂಡ ಇದೆ. ಮಾಸ್ತಿ ಅವರ ಸಂಭಾಷಣೆ ಈ ಚಿತ್ರದ ಪ್ರಮುಖ ಆಕರ್ಷಣೆ. ಸಂಭಾಷಣೆಗಳಲ್ಲಿ ಪಂಚ್ ಇದೆ. ಕೆಲವೊಮ್ಮೆ ಕೆಲವು ಸನ್ನಿವೇಶಗಳು ಕಥೆಯ ಪರಿಧಿಯನ್ನು ಮೀರಿ ಹೋದಂತೆ ಭಾಸವಾಗುತ್ತವೆ. ಪೊಲೀಸ್ ಠಾಣೆಯ ಹಾಸ್ಯ ದೃಶ್ಯಗಳು ಅಷ್ಟಾಗಿ ನಗು ತರಿಸುವುದಿಲ್ಲ. ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಸಂಪತ್ ಮೈತ್ರೇಯ ಅವರಂತಹ ಪ್ರತಿಭಾವಂತ ನಟರು ಒಂದೇ ದೃಶ್ಯಕ್ಕೆ ಸೀಮಿತವಾಗಿರುವುದು ಕೊಂಚ ನಿರಾಸೆ ಮೂಡಿಸುತ್ತದೆ. ತೃತೀಯಲಿಂಗಿಗಳ ತಲ್ಲಣ, ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು, ಪೊಲೀಸ್ ವ್ಯವಸ್ಥೆ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಒಂದಕ್ಕೊಂದು ಬೆಸೆದು ನಿರೂಪಿಸಲಾಗಿದೆ.

ಚರಣ್ ರಾಜ್ ಸಂಗೀತದ ಅಬ್ಬರ

ತಾವೊಬ್ಬ ಸಂಗೀತ ಮಾಂತ್ರಿಕ ಎಂಬುದನ್ನು ಚರಣ್ ರಾಜ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಚಿತ್ರಕ್ಕೆ ಅವರ ಹಿನ್ನೆಲೆ ಸಂಗೀತವು ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ. 'ಬಾವಾ ಬಾವಾ' ಹಾಗೂ 'ಕಂದಮ್ಮ ಕಂದಮ್ಮ' ಹಾಡುಗಳು ಇಂಪಾಗಿವೆ. ಅಲ್ಲಲ್ಲಿ ಬರುವ ಬಿಟ್ ಹಾಡುಗಳು ಚಿತ್ರಮಂದಿರದಲ್ಲಿ ಹೊಸ ಹುರುಪು ತುಂಬುತ್ತವೆ. ಸಾಹಸ ದೃಶ್ಯವೊಂದರಲ್ಲಿ 'ಸ್ವಸ್ತಿಕ್' ಚಿತ್ರದ "ಇದು ಏಳೇಳು ಜನ್ಮದ ಲವ್" ಹಾಡನ್ನು ಬಳಸಿಕೊಂಡಿರುವ ರೀತಿ ಹೊಸತನದಿಂದ ಕೂಡಿದ್ದು, ರೋಮಾಂಚನ ಉಂಟುಮಾಡುತ್ತದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತದಿಂದ ಹಲವು ದೃಶ್ಯಗಳ ತೂಕ ಮತ್ತಷ್ಟು ಹೆಚ್ಚಿದೆ.

Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ವಿನಯ್ ಅವರ ವಿಭಿನ್ನ ಪಾತ್ರ

ನಟ ವಿನಯ್ ರಾಜ್‌ಕುಮಾರ್ ಶಿವು ಎಂಬ ಮುಗ್ಧ ಹಳ್ಳಿ ಹುಡುಗನಾಗಿ ಮಿಂಚಿದ್ದಾರೆ. ನೋಡಲು ಮುಗ್ಧನಂತಿದ್ದರೂ, ಸಿಟ್ಟು ಬಂದಾಗ ರೋಷಾಗ್ನಿಯಾಗುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಸಂಪೂರ್ಣ ವಿಭಿನ್ನವಾದ ನಟನೆ ಕಾಣಸಿಗುತ್ತದೆ. ಇನ್ನು ನಿರ್ದೇಶಕ ವಿಜಯ್ ಪುತ್ರಿ ಮೋನಿಷಾಗೆ ಇದು ಮೊದಲ ಚಿತ್ರವಾದರೂ, ಮೊದಲ ಪ್ರಯತ್ನದಲ್ಲೇ ಗಮನಾರ್ಹ ಅಭಿನಯ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂಬ ಭರವಸೆ ಮೂಡಿಸುತ್ತಾರೆ. ಅಮ್ಮಾಜಿಯ ಪಾತ್ರದಲ್ಲಿ ನಟಿ ಉಮಾಶ್ರೀ ಖಡಕ್ ಆಗಿ ಕಾಣಿಸಿಕೊಂಡಿದ್ದು, ತಮಗೆ ಸಿಕ್ಕ ಬಲವಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಪುನೀತ್, ವಿನೋದ್ ಮಾಸ್ಟರ್, ಮಲ್ಲ, ಬಿ.ಎಂ. ಗಿರಿರಾಜ್, ವೀರ ದೇವರಾಜ್ ಮೊದಲಾದವರು ತಮ್ಮ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ದುನಿಯಾ ವಿಜಯ್ ಅವರ ನಿರ್ದೇಶನ ಶೈಲಿ ಹಾಗೂ ಅವರ ಹಿಂದಿನ 'ಭೀಮ', 'ಸಲಗ' ಚಿತ್ರಗಳನ್ನು ಮೆಚ್ಚಿಕೊಂಡರು 'ಸಿಟಿ ಲೈಟ್ಸ್' ಸಿನಿಮಾವನ್ನು ಆರಾಮಾಗಿವೆ ವೀಕ್ಷಿಸಬಹುದು.