ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jailer 2 Movie: ರಜನಿಕಾಂತ್‌ ಎದುರು ಪೈಪೋಟಿಗೆ ಇಳಿಯಲು ಸಜ್ಜಾದ ವಿಜಯ್‌ ದೇವರಕೊಂಡ - ರಶ್ಮಿಕಾ ಜೋಡಿ

ಈ ಬಾರಿಯ ದಸರಾ ಹಬ್ಬದಂದು ಬಾಕ್ಸಾಫೀಸ್‌ನಲ್ಲಿ ಭಾರೀ ಹಣಾಹಣಿ ಏರ್ಪಡಲಿದೆ. ಸೂಪರ್‌ಸ್ಟಾರ್ ರಜನಿಕಾಂತ್ ʻಜೈಲರ್‌ 2ʼ ಅಬ್ಬರದ ಎದುರು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಚಿತ್ರವನ್ನು ಅಖಾಡಕ್ಕಿಳಿಸುತ್ತಿದೆ. ಆ ಹಿನ್ನಲೆಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಕುತೂಹಲ ಮೂಡಿದೆ.

ದಸರಾ ಹಬ್ಬದ ಪ್ರಯುಕ್ತ 'ಸೂಪರ್‌ ಸ್ಟಾರ್‌' ರಜನಿಕಾಂತ್‌ ನಟನೆಯ 'ಜೈಲರ್‌ 2' ಸಿನಿಮಾ ತೆರೆಗೆ ಬರಲಿದೆ. ಇದು ಭಾರಿ ನಿರೀಕ್ಷೆಯ ಸಿನಿಮಾವಾಗಿರುವುದರಿಂದ, ಬೇರೆ ಯಾವುದೇ ಚಿತ್ರಗಳನ್ನು ಆ ಸಮಯದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡುವುದು ಡೌಟು ಎಂಬಂತಹ ವಾತಾವರಣವಿದೆ. ಆದರೆ ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆ ಮಾತ್ರ ಧೈರ್ಯ ತೋರಿದೆ. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಸಿನಿಮಾವನ್ನು ಅಕ್ಟೋಬರ್‌ 16ರಂದು ತೆರೆಕಾಣಿಸಲು ಮುಂದಾಗಿದೆ.

ಅಕ್ಟೋಬರ್‌ 16ರಂದು ʻರಣಬಾಲಿʼ ರಿಲೀಸ್

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ರಾಹುಲ್ ಸಾಂಕೃತ್ಯನ್ ನಿರ್ದೇಶನದಲ್ಲಿ ಈ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಮೂಡಿಬರುತ್ತಿದೆ. ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದರೆ, ದಕ್ಷಿಣ ಆಫ್ರಿಕಾದ ಖ್ಯಾತ ನಟ ಅರ್ನಾಲ್ಡ್ ವೋಸ್ಲೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರಿಂದ ಅಭಿಮಾನಿಗಳಲ್ಲಿ ಕೊಂಚ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಪೋಸ್ಟ್‌ಪೋನ್‌ ಆಗಿದ್ದ ʻರಣಬಾಲಿʼ ಸಿನಿಮಾ

'ರಣಬಾಲಿ' ಚಿತ್ರವನ್ನು ಸೆಪ್ಟೆಂಬರ್ 11ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಮುಂದೂಡಲ್ಪಟ್ಟಿತ್ತು. ಇದೀಗ ಚಿತ್ರವನ್ನು ದಸರಾ ಹಬ್ಬದ ಅಖಾಡಕ್ಕಿಳಿಸಲು ನಿರ್ಧರಿಸಿರುವ ಚಿತ್ರತಂಡ, ಅಕ್ಟೋಬರ್ 16ರಂದು ವಿಶ್ವದಾದ್ಯಂತ ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. "ನಮ್ಮ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಈ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ" ಎಂಬ ಸಾಲುಗಳೊಂದಿಗೆ ರಿಲೀಸ್ ಡೇಟ್ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರವು ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ರಜೆಗಳು ಹೆಚ್ಚಿರುವುದರಿಂದ 'ರಣಬಾಲಿ' ಸಿನಿಮಾಗೆ ಅತ್ಯುತ್ತಮ ದಿನಾಂಕವೇ ಸಿಕ್ಕಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಿಜಯ್ ದೇವರಕೊಂಡ ಚಿತ್ರಕ್ಕೆ ಸೋಲೋ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾದರೆ, ಮರುದಿನ ಧನುಷ್ ನಟನೆಯ 'ಓಂ' ಸಿನಿಮಾ ಕೂಡ ತೆರೆಕಾಣಲಿದೆಯಂತೆ. ಇವುಗಳ ಜೊತೆಗೆ 'ರಣಬಾಲಿ' ಚಿತ್ರ ಕೂಡ ಬಾಕ್ಸಾಫೀಸ್ ಕದನಕ್ಕೆ ಮುಂದಾಗಿದೆ.

Vijay Deverakonda: ಸಿನಿ ಜರ್ನಿಗೆ 10 ವರ್ಷ; ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯ್‌ ದೇವರಕೊಂಡ

ರಣಬಾಲಿ ಕಥೆ ಏನು?

1854 ಮತ್ತು 1878ರ ನಡುವಿನ ಬ್ರಿಟಿಷ್ ಭಾರತದ ರಾಯಲಸೀಮಾ ಪ್ರದೇಶದಲ್ಲಿ ನಡೆದ ನೈಜ ಘಟನೆಗಳ ಆಧಾರದ ಮೇಲೆ 'ರಣಬಾಲಿ' ಚಿತ್ರವನ್ನು ರೂಪಿಸಲಾಗುತ್ತಿದೆ. ಇದರಲ್ಲಿ ರಣಬಾಲಿ ಎಂಬ ಶೂರ ಯೋಧನಾಗಿ ವಿಜಯ್ ದೇವರಕೊಂಡ ನಟಿಸುತ್ತಿದ್ದರೆ, ಅವರ ಪತ್ನಿ ಜಯಮ್ಮನ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತರ ವಿಜಯ್-ರಶ್ಮಿಕಾ ಒಟ್ಟಿಗೆ ನಟಿಸುತ್ತಿರುವ ಚಿತ್ರವಿದು. ಅಷ್ಟೇ ಅಲ್ಲದೆ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಈ ಜೋಡಿ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿರುವುದು ಮತ್ತೊಂದು ವಿಶೇಷ.

'ರಣಬಾಲಿ' ಚಿತ್ರವನ್ನು ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಪ್ರಸ್ತುತಿಯಲ್ಲಿ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ನಿರ್ಮಿಸುತ್ತಿದ್ದಾರೆ. ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. 'ಟ್ಯಾಕ್ಸಿವಾಲಾ' ನಂತರ ವಿಜಯ್ ದೇವರಕೊಂಡ ಮತ್ತು ರಾಹುಲ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. 'ಜೈಲರ್ 2' ಪೈಪೋಟಿಯನ್ನು ಮೆಟ್ಟಿ ನಿಂತು 'ರಣಬಾಲಿ' ಗಲ್ಲಾಪೆಟ್ಟಿಗೆಯಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.