ಬೆಂಗಳೂರು, ಮೇ 13: ಕಿರುತೆರೆಯ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ (Dilip Raj) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬುಧವಾರ ಮುಂಜಾನೆ ದಿಲೀಪ್ ರಾಜ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಕಿರುತೆರೆ ಮಾತ್ರವಲ್ಲ ಕನ್ನಡದ ಹಲವು ಚಿತ್ರಗಳಲ್ಲಿಯೂ ದಿಲೀಪ್ ರಾಜ್ ನಟಿಸಿದ್ದಾರೆ. ಜತೆಗೆ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ.
ಕುಮಾರಸ್ವಾಮಿ ಲೇಔಟ್ನ ಅಪೋಲೊ ಆಸ್ಪತ್ರೆಯಲ್ಲಿ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ಸಾವಿನ ಸುದ್ದಿ, ಕಿರುತೆರೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದ್ದು, ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ ರಾಹುಲ್ ನಿಧನ
1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ 2005ರಲ್ಲಿ ಬಿಡುಗಡೆಯಾದ ʼಬಾಯ್ ಫ್ರೆಂಡ್ʼ ಚಿತ್ರದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ 'ಮಿಲನ' ಚಿತ್ರದಲ್ಲಿನ ವಿಲನ್ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. 2016ರಲ್ಲಿ ರಿಲೀಸ್ ಆದ ʼಯು ಟರ್ನ್ʼ ಚಿತ್ರದಲ್ಲಿನ ಅವರ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚೆಗೆ ತೆರೆಕಂಡ ಡಾರ್ಲಿಂಗ್ ಕೃಷ್ಣ ನಿರ್ದೇಶನ ʼಲವ್ ಮಾಕ್ಟೇಲ್ 3' ಸಿನಿಮಾದಲ್ಲಿಯೂ ನಟಿಸಿದ್ದರು.
ಕಿರಿತೆರೆಯಲ್ಲಿಯೂ ಮೋಡಿ ಮಾಡಿದ್ದ ದಿಲೀಪ್ ರಾಜ್, ʼಜನನಿʼ, ʼಅರ್ಧ ಸತ್ಯʼ, ʼರಂಗೋಲಿʼ, ʼಕುಂಕುಮ ಬಾಗ್ಯʼ, ʼಮಾಂಗಲ್ಯʼ, ʼಮಳೆಬಿಲ್ಲುʼ, ʼಪ್ರೀತಿಗಾಗಿʼ, ʼಹಿಟ್ಲರ್ ಕಲ್ಯಾಣʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ʼಹಿಟ್ಲರ್ ಕಲ್ಯಾಣʼ ಸಿರೀಯಲ್ ನಿರ್ಮಾಣವನ್ನೂ ಮಾಡಿದ್ದರು. ಅಲ್ಲದೆ ʼವಿದ್ಯಾ ವಿನಾಯಕʼ, ʼಪಾರುʼ, ನಾ ನಿನ್ನ ಬಿಡಲಾರೆʼ ಮುಂತಾದ ಧಾರಾವಾಹಿಗಳನ್ನೂ ನಿರ್ಮಿಸಿದ್ದರು.
ಬಹುಮುಖ ಪ್ರತಿಭೆ
ನಾಯಕ, ಪೋಷಕ ನಟ ಹೀಗೆ ಕನ್ನಡ ಸಿನಿಮಾ, ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಕಂಠದಾನ ಕಲಾವಿದರೂ ಹೌದು. 2007ರಲ್ಲಿ ರಿಲೀಸ್ ಆದ ʼಆ ದಿನಗಳುʼ ಚಿತ್ರದ ನಾಯಕ ಚೇತನ್, 2008ರಲ್ಲಿ ತೆರೆಕಂಡ ʼಅಂತು ಇಂತೂ ಪ್ರೀತಿ ಬಂತುʼ ಚಿತ್ರದ ನಾಯಕ ಆದಿತ್ಯ ಬಾಬು ಮುಂತಾದವರಿಗೆ ದಿಲೀಪ್ ರಾಜ್ ಧ್ವನಿ ನೀಡಿದ್ದರು. ದಿಲೀಪ್ ರಾಜ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.