ನಟ ಪ್ರಭಾಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರದಿದ್ದರೂ, ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಅಂದಹಾಗೆ, ಪ್ರಭಾಸ್ ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟಿದ್ದೂ ತಡವಾಗಿಯೇ! ಇದೀಗ ಅವರು ತಮ್ಮ ಪ್ರೊಫೈಲ್ ಚಿತ್ರವನ್ನು (DP) ಬದಲಾಯಿಸಿರುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಕೇವಲ ಒಂದು ಪ್ರೊಫೈಲ್ ಚಿತ್ರವನ್ನು ಬದಲಾಯಿಸುವ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕಳೆದ 7 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್ ಚಿತ್ರವಾಗಿದ್ದ 'ಬಾಹುಬಲಿ' ಸಿನಿಮಾದ ಐಕಾನಿಕ್ ಫೋಟೋವನ್ನು ಕೊನೆಗೂ ಬದಲಿಸಿರುವ ಪ್ರಭಾಸ್, ತಮ್ಮ ಮುಂಬರುವ ಬಹುನಿರೀಕ್ಷಿತ 'ಫೌಜಿ' (Fauji) ಚಿತ್ರದ ರಗಡ್ ಮತ್ತು ಪವರ್‌ಫುಲ್ ಲುಕ್ ಅನ್ನು DP ಆಗಿ ಅಪ್‌ಡೇಟ್ ಮಾಡಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ಹೊರಬಿದ್ದ ಈ ಅಪ್‌ಡೇಟ್ ಕ್ಷಣಾರ್ಧದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ #PrabhasDP ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಮುಂಚೂಣಿಯಲ್ಲಿದೆ.
7 ವರ್ಷಗಳ 'ಬಾಹುಬಲಿ' ಯುಗಕ್ಕೆ ಹೊಸ ತಿರುವು
ಪ್ರಭಾಸ್ ಇನ್‌ಸ್ಟಾಗ್ರಾಮ್ ಪ್ರವೇಶಿಸಿದ ದಿನದಿಂದ ಇಂದಿನವರೆಗೂ, ತಮಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಫೋಟೋವನ್ನೇ ತಮ್ಮ ಅಧಿಕೃತ ಪ್ರೊಫೈಲ್ ಚಿತ್ರವಾಗಿ ಇಟ್ಟುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳ ಪ್ರಚಾರ ಹಾಗೂ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದರೂ, DP ಮಾತ್ರ ಬದಲಿಸಿರಲಿಲ್ಲ. ಆದರೆ, ಸತತ ಏಳು ವರ್ಷಗಳ ಸುದೀರ್ಘ ಅವಧಿಯ ನಂತರ ಪ್ರಭಾಸ್ ಅವರು 'ಫೌಜಿ' ಚಿತ್ರದ ಸೈನಿಕನ ಅವತಾರವನ್ನು DP ಆಗಿ ಸೆಟ್ ಮಾಡಿಕೊಳ್ಳುವ ಮೂಲಕ ಹೊಸ ಅಧ್ಯಾಯದ ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾದಿನವೇ ಈ ದೇಶಭಕ್ತಿಯ ಲುಕ್ ಹೊರಬಂದಿರುವುದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ತಂದಿದೆ.
ಹನು ರಾಘವಪೂಡಿ ನಿರ್ದೇಶನದ 'ಫೌಜಿ' ಸಿನಿಮಾ
ಪ್ರಭಾಸ್ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ‘ಫೌಜಿ’ ಚಿತ್ರಕ್ಕೆ 'ಸೀತಾ ರಾಮಂ' ಖ್ಯಾತಿಯ ಹನು ರಾಘವಪೂಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬ್ರಿಟಿಷರ ಕಾಲದ ಘಟನೆಗಳ ಹಿನ್ನೆಲೆಯಲ್ಲಿ ಸಾಗುವ ಅದ್ಧೂರಿ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಇದಾಗಿದ್ದು, ಪ್ರಭಾಸ್ ಸೈನಿಕನ ಪಾತ್ರದಲ್ಲಿ ಸಂಪೂರ್ಣ ಹೊಸ ಮೇಕ್-ಓವರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್‌ಗೆ ಜೋಡಿಯಾಗಿ ಇಮಾನ್ವಿ ಇಸ್ಮಾಯಿಲ್ ನಟಿಸುತ್ತಿದ್ದು, ನಟ ಮಿಥುನ್ ಚಕ್ರವರ್ತಿ, ಜಯಪ್ರದಾ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಭಾರಿ ಬಜೆಟ್‌ನಲ್ಲಿ ಈ ಪ್ಯಾನ್-ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದೆ.
ಡಿಸೆಂಬರ್ 3ಕ್ಕೆ 'ಫೌಜಿ' ಬಿಡುಗಡೆ
ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ದೃಶ್ಯವೈಭವದ ಸಿನಿಮಾವು ಡಿಸೆಂಬರ್ 3ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ಡಿಸೆಂಬರ್ 2ರಂದೇ ಪ್ರೀಮಿಯರ್ ಶೋಗಳು ಪ್ರದರ್ಶನಗೊಳ್ಳಲಿವೆ.