'ಫಸ್ಟ್ ಡೇ ಫಸ್ಟ್ ಶೋ', 'ಶಾಲಿವಾಹನ ಶಕೆ', 'ಒಂದ್ ಕಥೆ ಹೇಳ್ಲಾ' ಹಾಗೂ 'ವಾವ್' ನಂತಹ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಗಿರೀಶ್ ಜಿ. ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ 'ಬೆಳ್ಳೂಡಿ ಕಾಳಿ' ಎಂಬ ಅಪ್ರತಿಮ ಟಗರಿನ ಯಶೋಗಾಥೆಯನ್ನು ಅವರು ಡಾಕ್ಯುಮೆಂಟರಿ ಬಯೋಪಿಕ್ ಮೂಲಕ ಜಗತ್ತಿಗೆ ಪರಿಚಯಿಸಲು ಸಜ್ಜಾಗಿದ್ದಾರೆ.
ಕಣದಲ್ಲಿ ಕಾಳಿ ಕಂಡು ಹೆದರಿ ಓಡುತ್ತಿದ್ದ ಎದುರಾಳಿಗಳು!
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಈ 'ಬೆಳ್ಳೂಡಿ ಕಾಳಿ' ಟಗರು ಕಾಳಗದ ಇತಿಹಾಸದಲ್ಲೇ ಒಂದು ದಂತಕಥೆ. ಗತ್ತು, ಗಾಂಭೀರ್ಯದಿಂದ ಕಣಕ್ಕಿಳಿಯುತ್ತಿದ್ದ ಕಾಳಿಯ ಆಟ ನೋಡಲು ದೂರದ ಊರುಗಳಿಂದ ಸಾವಿರಾರು ಅಭಿಮಾನಿಗಳು ಹರಿದು ಬರುತ್ತಿದ್ದರು. ಕಣಕ್ಕೆ ಕಾಳಿ ಎಂಟ್ರಿ ಕೊಡುತ್ತದೆ ಎಂದರೆ ಸಾಕು, ಎದುರಾಳಿ ಟಗರಿನ ಮಾಲೀಕರು ತಮ್ಮ ಕುರಿಗಳನ್ನು ಸ್ಪರ್ಧೆಯಿಂದಲೇ ಹಿಂದೆ ಸರಿಸುತ್ತಿದ್ದರು. ಆ ಮಟ್ಟಿಗೆ ಈ ಕಾಳಿ ಇಡೀ ದೇಶದಲ್ಲೇ ತನ್ನ ಸಾಮ್ರಾಜ್ಯ ನಿರ್ಮಿಸಿತ್ತು.
Hari Paraak Column: ಇಷ್ಟು ದಿನ ಟಗರು ಇನ್ಮೇಲೆ ಟಗರು ಶಿವ
ಲಕ್ಷಾಂತರ ರೂ. ವೆಚ್ಚದ ಸಮಾಧಿ, ನಿತ್ಯ ಪೂಜೆ
2024ರಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಈ ಪ್ರೀತಿಯ ಮೂಕ ಜೀವಕ್ಕೆ ಅಂತಿಮ ವಿದಾಯ ಹೇಳಲು ಅಂದು ಜನಸಾಗರವೇ ಹರಿದುಬಂದಿತ್ತು. ಹಿಂದೂ ಧರ್ಮದ ವಿಧಿವಿಧಾನದಂತೆಯೇ ಈ ಟಗರು ಕಾಳಿಯ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಟಗರಿನ ಮಾಲೀಕರಾದ ರಾಘವೇಂದ್ರ ಮತ್ತು ಅವರ ತಂಡ, ಹರಿಹರ - ಶಿವಮೊಗ್ಗ ರಸ್ತೆಯಲ್ಲಿರುವ ಬೆಳ್ಳೂಡಿ ಗ್ರಾಮದಲ್ಲಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಳಿಯ ಸಮಾಧಿ ನಿರ್ಮಿಸಿದೆ. ಇಲ್ಲಿ ಇಂದಿಗೂ ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿರುವುದು ಈ ಪ್ರಾಣಿ ಮೇಲಿರುವ ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ.
ಮಾರಿ ಕಣ್ಣು ಹೋರಿ ಮ್ಯಾಲೆ, ಎಲ್ರ ಕಣ್ಣು ಟಗರು ಮ್ಯಾಲೆ !
'ಕಾಳಿ-ದಿ ಗೋಟ್' ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ
ಮನುಷ್ಯ ಮತ್ತು ಪ್ರಾಣಿ ನಡುವಿನ ಅಪೂರ್ವ ಭಾವನಾತ್ಮಕ ಪಯಣವನ್ನು ಸಾರುವ ಈ ಡಾಕ್ಯುಮೆಂಟರಿಗೆ 'ಕಾಳಿ-ದಿ ಗೋಟ್' (Kali - The Goat) ಎಂದು ಶೀರ್ಷಿಕೆ ಇಡಲಾಗಿದೆ. ಜೈನ್ ಯೂನಿವರ್ಸಿಟಿ ಸೇರಿದಂತೆ ವಿವಿಧ ಸಿನಿಮಾ ವಿದ್ಯಾರ್ಥಿಗಳನ್ನು ಹಾಗೂ ಹೊಸ ತಂತ್ರಜ್ಞರನ್ನು ಬಳಸಿಕೊಂಡು, ಸ್ಥಳೀಯರ ಬೆಂಬಲದೊಂದಿಗೆ ದಾವಣಗೆರೆ ಮತ್ತು ಬಾಗಲಕೋಟೆಯ ಅಖಾಡಗಳಲ್ಲೇ ಇದರ ಚಿತ್ರೀಕರಣ ನಡೆಸಲಾಗಿದೆ.
ಬಿಡುಗಡೆ ಯಾವಾಗ?
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮೂಡಿಬರುತ್ತಿರುವ ಈ ಡಾಕ್ಯುಮೆಂಟರಿ, ಇನ್ನು 2-3 ತಿಂಗಳುಗಳಲ್ಲಿ ದೊಡ್ಡ ಒಟಿಟಿ ಅಥವಾ ಗ್ಲೋಬಲ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಕಣದಲ್ಲಿ ಅಬ್ಬರಿಸಿದ್ದ ಕಾಳಿಯ ಶೌರ್ಯ ಹಾಗೂ ಮಾಲೀಕರ ಭಾವನಾತ್ಮಕ ಕಥೆ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದೆ.