ಬಹುಭಾಷೆಯಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಿ. ವಿ. ಪ್ರಕಾಶ್ ಕುಮಾರ್, ಎಂಥ ಪ್ರತಿಭಾನ್ವಿತ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಂಗೀತ ನಿರ್ದೇಶಕರಾಗಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಿರುವ ಜಿ. ವಿ., ನಟನೆಯಲ್ಲೂ ಹಿಂದೆ ಬಿದ್ದಿಲ್ಲ. ತೆರೆಮೇಲೆ ಹೀರೋ ಆಗಿ ಮಿಂಚುವ ಜಿ. ವಿ. ಪ್ರಕಾಶ್ ಕುಮಾರ್, ಆಗಾಗ ನಿಜ ಜೀವನದಲ್ಲೂ ಹೀರೋ ಎನಿಸಿಕೊಳ್ಳುತ್ತಿರುತ್ತಾರೆ.
ಕಷ್ಟದಲಿರುವವರಿಗೆ ಸಹಾಯ ಮಾಡುವ ಜಿ.ವಿ.
ಹೌದು, ಯಾರಾದರೂ ಕಷ್ಟದಲ್ಲಿದ್ದಾರೆ ಎಂದು ತಿಳಿದರೆ ತಕ್ಷಣ ಸ್ಪಂದಿಸುವ ಗುಣ ಇವರದ್ದು. ಮುಖ್ಯವಾಗಿ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ತಮ್ಮ ಉದಾರ ಬುದ್ದಿಯನ್ನು ಪ್ರದರ್ಶಿಸುವುದರಲ್ಲಿ ಅವರು ಯಾವಾಗಲೂ ಮುಂದಿರುತ್ತಾರೆ. ಶಿಕ್ಷಣಕ್ಕಾಗಲಿ ಅಥವಾ ವೈದ್ಯಕೀಯ ಚಿಕಿತ್ಸೆಗಾಗಲಿ ಆಪತ್ತಿನಲ್ಲಿದ್ದೇವೆ ಎಂದು ಸಹಾಯ ಕೋರಿ ನೆಟ್ಟಿಗರು ಅವರನ್ನು ಟ್ಯಾಗ್ ಮಾಡಿದರೆ ಸಾಕು, ತಕ್ಷಣವೇ ಸ್ಪಂದಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ.
ಪ್ರಕಾಶ್‌ಗೆ ಮೋಸ ಮಾಡಿದ್ದ ವ್ಯಕ್ತಿ
ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ವಂಚಕರು ಅವರ ನಂಬಿಕೆ ಮತ್ತು ಒಳ್ಳೆಯ ಮನಸ್ಸನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಲು ಮುಂದಾಗಿರುವ ಉದಾಹರಣೆಗಳು ಇವೆ. ಕಳೆದ ವರ್ಷ ಜಿ ವಿ ಪ್ರಕಾಶ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಕಹಿ ಅನುಭವ ಎದುರಾಗಿತ್ತು. prasanna sathis ಎಂಬ ಪ್ರೊಫೈಲ್ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬ ಟ್ವಿಟರ್ (ಎಕ್ಸ್) ವೇದಿಕೆಯಲ್ಲಿ ಎಮೋಷನಲ್ ಡ್ರಾಮಾ ಮಾಡಿದ್ದ. ಎಂದೋ ಮೃತಪಟ್ಟ ವೃದ್ಧೆಯೊಬ್ಬರ ಫೋಟೋ ಪೋಸ್ಟ್ ಮಾಡಿ, ಆಕೆ ತನ್ನ ತಾಯಿ ಎಂದು, ಪ್ರಸ್ತುತ ಆಕೆಯ ಅಂತ್ಯಕ್ರಿಯೆ ಮಾಡಲು ಕೈಯಲ್ಲಿ ಕಾಸಿಲ್ಲ ಎಂದು ಸುಳ್ಳು ಹೇಳಿದ್ದ.
Sonu Sood: ಬಡ ರೈತನ ಕಷ್ಟಕ್ಕೆ ಸಹಾಯಹಸ್ತ ಚಾಚಿದ ಬಾಲಿವುಡ್ ನಟ- ಮತ್ತೆ ಹೃದಯಗೆದ್ದ ನಟ ಸೋನು ಸೂದ್!
ಈ ಟ್ವೀಟ್ ನೋಡಿ ಕನಿಕರಪಟ್ಟ ಜಿ ವಿ ಪ್ರಕಾಶ್, ಒಂದು ಕ್ಷಣವೂ ಯೋಚನೆ ಮಾಡದೆ ಮಾನವೀಯತೆಯಿಂದ ಆ ವ್ಯಕ್ತಿಯ ಗೂಗಲ್ ಪೇ ನಂಬರ್‌ಗೆ 20 ಸಾವಿರ ರೂ. ಕಳುಹಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಅದು ಫೇಕ್ ಅಕೌಂಟ್ ಎಂದು, ಆ ವ್ಯಕ್ತಿ ಕಟ್ಟಿದ ಕಟ್ಟುಕಥೆಯಿಂದ ತನಗೆ ಮೋಸ ಮಾಡಿದ್ದಾನೆ ಎಂಬುದು ಜಿವಿ ಪ್ರಕಾಶ್‌ಗೆ ಗೊತ್ತಾಗಿತ್ತು. ಬಳಿಕ ತಾವೇ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.
Sonu Sood: ಬಡ ರೈತನ ಕಷ್ಟಕ್ಕೆ ಸಹಾಯಹಸ್ತ ಚಾಚಿದ ಬಾಲಿವುಡ್ ನಟ- ಮತ್ತೆ ಹೃದಯಗೆದ್ದ ನಟ ಸೋನು ಸೂದ್!
ಮತ್ತೆ ಆರ್ಥಿಕ ಸಹಾಯ ಮಾಡಿದ ಪ್ರಕಾಶ್
ಈ ರೀತಿ ಆನ್‌ಲೈನ್ ವಂಚನೆ ನಡೆದರೆ, ನಂತರ ಸೋಶಿಯಲ್ ಮೀಡಿಯಾ ಮೂಲಕ ಯಾರಿಗಾದರೂ ಸಹಾಯ ಮಾಡಲು ನೂರು ಬಾರಿ ಯೋಚಿಸುತ್ತಾರೆ. ಕೆಲವರಂತೂ ಯಾರೇ ಎಷ್ಟೇ ಅವಲತ್ತುಕೊಂಡರೂ, ಆ ಕಡೆಗೆ ತಲೆ ಕೂಡ ಹಾಕೋದಿಲ್ಲ. ಆದರೆ, ಜಿ.ವಿ. ಪ್ರಕಾಶ್ ಮಾತ್ರ ಹಾಗಲ್ಲ. ಆ ಕಹಿ ಅನುಭವವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ, ಮತ್ತೊಮ್ಮೆ ಸಹಾಯ ಮಾಡಿದ್ದಾರೆ. ಇತ್ತೀಚೆಗೆ ನೆಟ್ಟಿಗನೊಬ್ಬ ತನ್ನ ಕುಟುಂಬದ ಸದಸ್ಯರಿಗೆ ತುರ್ತಾಗಿ ಸರ್ಜರಿ ಆಗಬೇಕಿದೆ, ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದೇವೆ ಎಂದು ಸಹಾಯ ಕೋರಿ ಟ್ವೀಟ್ ಮಾಡಿದ್ದನು. ಈ ಪೋಸ್ಟ್ ನೋಡಿದವರೊಬ್ಬರು ಜಿವಿ ಪ್ರಕಾಶ್ ಅವರಿಗೆ ಟ್ಯಾಗ್ ಮಾಡಿದ್ದರು.
ಜಿ ವಿ ಪ್ರಕಾಶ್ ಕುಮಾರ್ ಅವರ ಟ್ವೀಟ್
ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಜಿ.ವಿ., ಕೂಡಲೇ ಸ್ಪಂದಿಸಿದ್ದಾರೆ. ಹಿಂದೆ ನಡೆದ ಮೋಸವನ್ನು ಲೆಕ್ಕಿಸದೆ, ಆ ನೆಟ್ಟಿಗನ ಅಕೌಂಟ್‌ಗೆ ತಕ್ಷಣದ 50,000 ರೂ. ಟ್ರಾನ್ಸ್‌ಫರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆ ಟ್ರಾನ್ಸಾಕ್ಷನ್ ಸ್ಕ್ರೀನ್‌ಶಾಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. "ನನ್ನ ಕಡೆಯಿಂದ ಇದು ತುಂಬಾ ಸಣ್ಣ ಸಹಾಯ. ಈ ಬಾರಿ ನೀವು ಹೇಳಿದ ಸಮಸ್ಯೆ ನಿಜವೆಂದೇ ನಂಬುತ್ತಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕಾಶ್‌ಗೆ ಭಾರಿ ಮೆಚ್ಚುಗೆ
ಜಿ ವಿ ಪ್ರಕಾಶ್ ಮಾಡಿದ ಸಹಾಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. "ಒಮ್ಮೆ ಮೋಸ ಹೋದರೂ.. ಸಹಾಯ ಮಾಡುವುದನ್ನು ನಿಲ್ಲಿಸದ ನಿಮ್ಮ ಗುಣ ಅದ್ಭುತ ಸರ್", "ರಿಯಲ್ ಹೀರೋ ಅಂದರೆ ನೀವೇ" ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.