ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅವರ ʻಗಜʼ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ನಟ ಪ್ರದೀಪ್ ರಾವತ್ ಅವರು ಇಂದು (ಆ.4) ನಿಧನರಾಗಿದ್ದಾರೆ. ಹಿಂದಿಯ 'ಮಹಾಭಾರತ' ಧಾರಾವಾಹಿಯಲ್ಲಿ 'ಅಶ್ವತ್ಥಾಮ'ನ ಪಾತ್ರದ ಮೂಲಕ ಮಿಂಚಿದ್ದ ಇವರು, ತಮಿಳಿನ 'ಗಜಿನಿ' ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರದೀಪ್ ರಾವತ್‌ಗೆ 74 ವರ್ಷ ವಯಸ್ಸಾಗಿತ್ತು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರದೀಪ್ ರಾವತ್ ಅವರ ಅಗಲಿಕೆಗೆ ಭಾರತೀಯ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರದೀಪ್ ನಿಧನಕ್ಕೆ ಕಾರಣವೇನು?
ಪ್ರದೀಪ್ ರಾವತ್ ಅವರ ನಿಧನದ ಕುರಿತು ಮಾಧ್ಯಮಗಳಲ್ಲಿ ಭಿನ್ನ ವರದಿಗಳು ಹೊರಬಿದ್ದಿವೆ. ಕೆಲವು ಮೂಲಗಳ ಪ್ರಕಾರ, ಅವರು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದರೆ, ಇನ್ನು ಕೆಲವು ವರದಿಗಳು ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿವೆ. ಈ ಬಗ್ಗೆ ಕುಟುಂಬದ ಮೂಲಗಳಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
‘ಮಹಾಭಾರತ’ದ ಅಶ್ವತ್ಥಾಮನಾಗಿ ಮನೆಮಾತಾಗಿದ್ದ ನಟ
ಮಧ್ಯಪ್ರದೇಶದ ಜಬಲ್‌ಪುರದಲ್ಲಿ 1952ರ ಜನವರಿ 21ರಂದು ಜನಿಸಿದ ಪ್ರದೀಪ್ ರಾವತ್, 1985ರ ಸುಮಾರಿಗೆ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಿ.ಆರ್. ಚೋಪ್ರಾ ಅವರ ಪೌರಾಣಿಕ ಧಾರಾವಾಹಿ 'ಮಹಾಭಾರತ'ದಲ್ಲಿ ಗುರು ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನ ಪಾತ್ರದ ಮೂಲಕ ಅವರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆ ಸಿಕ್ಕಿತು. ಅವರ ಖಡಕ್ ಧ್ವನಿ ವೀಕ್ಷಕರ ಮನಸ್ಸಿನಲ್ಲಿ ಆಳವಾಗಿ ಉಳಿದುಕೊಂಡಿತ್ತು.
ಆನಂತರ ಪ್ರದೀಪ್ ರಾವತ್ ಅವರು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ನೇಪಾಳಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಆಮಿರ್ ಖಾನ್ ನಟನೆಯ ʻಸರ್ಫರೋಷ್ʼ ಚಿತ್ರದಲ್ಲಿ 'ಸುಲ್ತಾನ್' ಆಗಿ ಗಮನಸೆಳೆದಿದ್ದ ಅವರು, 'ಲಗಾನ್' ಸಿನಿಮಾದ ಮೂಲಕ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದರು. ಆ ಬಳಿಕ 'ಗಜನಿ'ಯ ತಮಿಳು ಹಾಗೂ ಹಿಂದಿ ಎರಡೂ ಆವೃತ್ತಿಗಳಲ್ಲಿ ಟೈಟಲ್ ರೋಲ್‌ನ ಖಳನಾಯಕನಾಗಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು.
ದಕ್ಷಿಣ ಭಾರತಕ್ಕೆ ಪ್ರದೀಪ್ ಅವರನ್ನು ಪರಿಚಯಿಸಿದ್ದೇ ಎಸ್.ಎಸ್. ರಾಜಮೌಳಿ. ತಮ್ಮ ನಿರ್ದೇಶನದ 'ಸೈ' ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಪ್ರದೀಪ್ ಅವರನ್ನು ರಾಜಮೌಳಿ ಕರೆತಂದಿದ್ದರು. ಆ ಚಿತ್ರದ ನಟನೆಗೆ ಪ್ರದೀಪ್ ಅವರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡರು. ನಂತರ 'ಭದ್ರ' ಸಿನಿಮಾ ಕೂಡ ಅವರಿಗೆ ಭಾರಿ ಹೆಸರು ತಂದುಕೊಟ್ಟಿತು.
Bharathiraja: ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿರಾಜ ನಿಧನ
ಕನ್ನಡದಲ್ಲಿ ಮಿಂಚಿದ್ದ ಕಲಾವಿದ
ಪ್ರದೀಪ್ ಅವರು ಉಪೇಂದ್ರ ಅವರ 'ಪರೋಡಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ನಂತರ ದರ್ಶನ್ ನಟನೆಯ 'ಗಜ' ಸಿನಿಮಾದಿಂದ ಭಾರಿ ಫೇಮಸ್ ಆದರು. ಬಳಿಕ ಕನ್ನಡದ ಅಭಯ್, ಬಚ್ಚನ್, ಎಲೆಕ್ಷನ್, ಶಿವಲಿಂಗ, ಲಕ್ಷ್ಮಣ, ಚಾಂಪಿಯನ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಉಪೇಂದ್ರ ಮತ್ತು ರವಿಚಂದ್ರನ್ ನಟನೆಯ 'ತ್ರಿಶೂಲಂ' ಚಿತ್ರದಲ್ಲೂ ಪ್ರದೀಪ್ ನಟಿಸಿದ್ದು, ಆ ಸಿನಿಮಾ ಇನ್ನಷ್ಟೇ ತೆರೆಕಾಣಬೇಕಿದೆ.
ವಿವಿಧ ಭಾಷೆಗಳ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಈ ಹಿರಿಯ ನಟನ ನಿಧನಕ್ಕೆ ಅಭಿಮಾನಿಗಳು ಹಾಗೂ ಸಿನಿಮಾ ರಂಗದ ದಿಗ್ಗಜರು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.