ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಸರಾ ಹಬ್ಬಕ್ಕೆ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ಉಡುಗೊರೆ ; ವಿಶ್ವಾದ್ಯಂತ 1,300ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್!

ನಟ ಗಣೇಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಬೃಂದಾವಿಹಾರಿ’ ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ವಿಶ್ವಾದ್ಯಂತ 1,300ಕ್ಕೂ ಅಧಿಕ ಪರದೆಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಶ್ರೀನಿವಾಸ ರಾಜು ನಿರ್ದೇಶನ ಮತ್ತು ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ ಈ ಕೌಟುಂಬಿಕ ಸಿನಿಮಾದಲ್ಲಿ ಮಾಳವಿಕಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಜೋಡಿಯ ಬಹುನಿರೀಕ್ಷಿತ ಚಿತ್ರ ‘ಬೃಂದಾವಿಹಾರಿ’ ಬಿಡುಗಡೆಗೆ ಸಜ್ಜಾಗಿದೆ. ಮುಳಬಾಗಿಲು ಶಾಸಕ ಸಮೃದ್ಧಿ ವಿ. ಮಂಜುನಾಥ್ ನಿರ್ಮಿಸಿರುವ ಈ ಚಿತ್ರವು ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ಅಕ್ಟೋಬರ್ 16ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ಭಾವನೆ ಜೊತೆ ಮುಗ್ಧತೆ ಇರುವ ಪಾತ್ರ ಎಂದ ಗಣೇಶ್

ಈ ಚಿತ್ರದ ಕುರಿತು ಮಾತನಾಡಿದ ನಟ ಗಣೇಶ್, "ಹಿರಿಯ ನಟಿ ಲಕ್ಷ್ಮಿ, ಅಶೋಕ್, ರಾಮ್ ಕುಮಾರ್ ಹಾಗೂ ರಂಗಾಯಣ ರಘು ಅವರಂತಹ ಅನುಭವಿ ಕಲಾವಿದರ ಜೊತೆ ನಟಿಸಿದ್ದು ಅದ್ಭುತ ಅನುಭವ ನೀಡಿದೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು 'ಮಾಧವ'. ಪ್ರೇಕ್ಷಕರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ, ಆ ಮುಗ್ಧತೆ ಹಾಗೂ ಭಾವನೆಗಳಿಗೆ ಬೆಲೆ ಕೊಡುವ ಎಲ್ಲ ಅಂಶಗಳೂ ಈ ಪಾತ್ರದಲ್ಲಿವೆ. ಭಾವನೆ, ಹಾಸ್ಯ ಮತ್ತು ಸಂಬಂಧಗಳನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಬೆಸೆದಿದ್ದಾರೆ. ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಅಪ್ಪಟ ಕನ್ನಡ ಸಿನಿಮಾ ಇದು" ಎಂದು ತಿಳಿಸಿದರು.

Actor Ganesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್; ಯಾರಿಗೂ ಗೊತ್ತಿರದ ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ!

ತೃಪ್ತಿ ತಂದ ಸಿನಿಮಾ ಎಂದ ನಿರ್ದೇಶಕ ಶ್ರೀನಿವಾಸ ರಾಜು

ಚಿತ್ರದ ಔಟ್‌ಪುಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ಶ್ರೀನಿವಾಸ ರಾಜು, "ಈ ಚಿತ್ರದ ನಂತರ ಗಣೇಶ್ ಅವರೊಂದಿಗೆ ಮತ್ತೆ ಸಿನಿಮಾ ಮಾಡದಿದ್ದರೂ ನನಗೆ ಸಮಾಧಾನವಿದೆ; ಆ ಮಟ್ಟಿಗೆ ಈ ಪ್ರಾಜೆಕ್ಟ್ ನನಗೆ ಸಂಪೂರ್ಣ ತೃಪ್ತಿ ತಂದಿದೆ. ಗಣೇಶ್ ಅವರೇ ಈ ಚಿತ್ರದ ಶಕ್ತಿ. ನಿರ್ಮಾಪಕರು ಯಾವುದೇ ಕೊರತೆಯಾಗದಂತೆ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರ ಮುಂದೆ ಬರಲಿವೆ" ಎಂದರು.

‘ಜೈಲರ್-2’ ಎದುರು ನಮ್ಮ ಚಿತ್ರ ಗೆಲ್ಲುವ ವಿಶ್ವಾಸ

ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್, "ಅಕ್ಟೋಬರ್ 16ರಂದು ವಿಶ್ವದಾದ್ಯಂತ 1,300ಕ್ಕೂ ಅಧಿಕ ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕೆವಿಎನ್ ಸಂಸ್ಥೆ ವಿತರಣೆಯ ಜವಾಬ್ದಾರಿ ಹೊತ್ತಿದೆ. 'ಜೈಲರ್-2' ಚಿತ್ರದ ಪೈಪೋಟಿ ಇದ್ದರೂ ನಮ್ಮ ಕನ್ನಡ ಚಿತ್ರದ ಕಥೆಯ ಮೇಲೆ ನಮಗೆ ನಂಬಿಕೆಯಿದೆ. ಮೈಸೂರು ಸುತ್ತಮುತ್ತ ಪ್ರತಿದಿನ ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಬೃಹತ್ ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ಖುಷಿ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದು, ಇದು ಅವರ ಚೊಚ್ಚಲ ಕನ್ನಡ ಚಿತ್ರವಾಗಿದೆ" ಎಂದು ಮಾಹಿತಿ ನೀಡಿದರು.

ಕನ್ನಡಕ್ಕೆ ಕಾಲಿಟ್ಟ ಮಾಳವಿಕಾ ಶರ್ಮಾ

ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟಿ ಮಾಳವಿಕ ಶರ್ಮಾ 'ಮೀರಾ' ಎಂಬ ಕೃಷ್ಣನ ಭಕ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ದೇವಿಕಾ ಭಟ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ರಂಗಾಯಣ ರಘು, ಕುರಿ ಪ್ರತಾಪ್, ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವಥ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ (ಸಾಹಿತ್ಯ), ವಿಜಯ್ ಈಶ್ವರ್ (ಸಂಭಾಷಣೆ), ರವಿ ಸಂತೆಹಕ್ಲು (ಕಲಾ ನಿರ್ದೇಶನ), ಭಾನು (ನೃತ್ಯ ನಿರ್ದೇಶನ) ಹಾಗೂ ಕ್ರಾಂತಿ ಕುಮಾರ್ (ಸಹ-ಬರಹಗಾರ) ಅವರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.