ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೀರೋ ಆಗಿ 20 ವರ್ಷ ಆಗಿದೆ. 2006ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಿಂದ ಹೀರೋ ಆದ ಗಣೇಶ್, ಅದೇ ವರ್ಷ ರಿಲೀಸ್ ಆದ ಮುಂಗಾರು ಮಳೆ ಚಿತ್ರದಿಂದ ಗೋಲ್ಡನ್ ಸ್ಟಾರ್ ಆದರು. ಅಂದಹಾಗೆ, ಇದೀಗ ಅವರ ಈ 20 ವರ್ಷಗಳ ಜರ್ನಿಯನ್ನು ಸಲೆಬ್ರೇಟ್ ಮಾಡುತ್ತಲೇ, ಇಂದು (ಫೆ.15) ಅವರ ಹೊಸ ಸಿನಿಮಾ ʻತಮ್ಮ ಸುಖಾಗಮನ ಬಯಸುವʼ ಮುಹೂರ್ತದ ಆಚರಣೆ ಮಾಡಲಾಗಿದೆ. ಈ ಚಿತ್ರದ ಟೈಟಲ್ಲೇ ಎಲ್ಲರ ಗಮನಸೆಳೆಯುತ್ತಿದ್ದು, ಫಸ್ಟ್ ಲುಕ್ ನೋಡಿದವರು, ವಿಂಟೇಜ್ ಗಣೇಶ್ ವಾಪಸ್ ಬಂದ್ರು ಎಂದು ಫ್ಯಾನ್ಸ್ ಖುಷಿಯಾಗಿದ್ದಾರೆ.
ಏನಂದ್ರು ನಟ ಗಣೇಶ್?
"ಮುಂಗಾರು ಮಳೆ ಚಿತ್ರವು 2006ರಲ್ಲಿ ಬಿಡುಗಡೆಯಾಗಿತ್ತು. ಈಗ ಅದಕ್ಕೆ ಇಪ್ಪತ್ತು ವರ್ಷ ತುಂಬಿದೆ. ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ" ಎಂದು ಗಣೇಶ್ ಹೇಳಿದ್ದಾರೆ.
Kannada New Movie: ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜತೆ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಘೋಷಣೆ
ʻತಮ್ಮ ಸುಖಾಗಮನ ಬಯಸುವʼ ಶುರುವಾಗಿದ್ದು ಹೇಗೆ?
"ಒಂದು ದಿನ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ, ನಮ್ ಫ್ರೆಂಡ್ ಒಬ್ರು ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಅದು ನಿಮಗಾಗಿಯೇ ಮಾಡಿರುವ ಕಥೆ ಎಂದರು. ನಾನು ಯಾರು ಅಂತ ಕೇಳಿದೆ, ಆ ಕಡೆಯಿಂದ ರಾಮೇನಹಳ್ಳಿ ಜಗನ್ನಾಥ ಅನ್ನೋ ಉತ್ತರ ಬಂತು. ನಾನು ಆಗಲೇ ಅವರ ಹೊಂದಿಸಿ ಬರೆಯಿರಿ ಸಿನಿಮಾ ನೋಡಿದ್ದೆ. ಅವರೊಬ್ಬ ಸೆನ್ಸಿಬಲ್ ರೈಟರ್ ಅನ್ನೋದು ನನಗೆ ಗೊತ್ತಾಗಿತ್ತು. ʻಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆʼ ಅಂತ ಅವರಿಗೆ ನಾನು ತಿಳಿಸಿದ್ದೆ. ಬಳಿಕ ಜಗನ್ನಾಥ ಬಂದು ಕಥೆ ಹೇಳಿದರು. ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು ನನಗೆ. ಅಂತಹ ಅಪರೂಪದ ಕಥೆ ಇದು" ಎಂದು ಗಣೇಶ್ ಹೇಳಿದ್ದಾರೆ.
ಒಳ್ಳೆಯ ಟೈಟಲ್ ಇಡಿ ಎಂದಿದ್ದೆ
"ಇದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. "ತಮ್ಮ ಸುಖಾಗಮನ ಬಯಸುವ" ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ. ಅದಕ್ಕೆ ನಿರ್ಮಾಪಕರು ಸಹಕಾರ ನೀಡುತ್ತಾರೆ. ಇನ್ನೂ, ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಉತ್ತಮ ಸಾಂಗ್ಸ್ ಇರಲಿವೆ" ಎಂದರು ಗಣೇಶ್ ತಿಳಿಸಿದರು.
ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ಹಿರಿಯ ನಟಿ ಸಿತಾರಾ; ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್
ಇದು ನನ್ನ ಗೋಲ್ಡನ್ ದಿನ
ಚಿತ್ರದ ಬಗ್ಗೆ ಮಾತನಾಡಿದ ರಾಮೇನಹಳ್ಳಿ ಜಗನ್ನಾಥ, "ಇದು ನನ್ನ ಗೋಲ್ಡನ್ ದಿನ. 2006ರಲ್ಲಿ ಮುಂಗಾರು ಮಳೆ ತೆರೆಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೀನಿ ಎಂಬ ಲೆಕ್ಕವಿಲ್ಲ. ಇಂದು ಗಣೇಶ್ ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. ತೀರ್ಥರೂಪ ತಂದೆಯವರಿಗೆ ಚಿತ್ರದ ಚಿತ್ರೀಕರಣ ಸಮಯದಲ್ಲಿ ನನ್ನ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ, ಈ ಚಿತ್ರದ ಕಥೆ ಹೇಳಿದ್ದೆ" ಎಂದಿದ್ದಾರೆ.
"ಇದು ಗಣೇಶ್ ಅವರಿಗಾಗಿಯೇ ಬರೆದ ಕಥೆ. ಈ ಕಥೆಗೆ ಅವರೇ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮಾ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ. ಕಥೆಗೂ ಹಾಗೂ ಪಾತ್ರಗಳಿಗೂ ಪೂರಕವಾಗಿದೆ" ಎನ್ನುತ್ತಾರೆ ರಾಮೇನಹಳ್ಳಿ ಜಗನ್ನಾಥ.
ವೈಷ್ಣವಿ ಫಿಲಂಸ್ ಲಾಂಛನದಲ್ಲಿ ವಿಜಯ್ ಲೋಹಿತ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. "ತಮ್ಮ ಸುಖಾಗಮನ ಬಯಸುವ" ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.